
ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು.
ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1946ಕ್ಕೆ ಸರಿಯಾದ ಶ್ರೀ ಕ್ರೋಧಿನಾಮ ಸಂವತ್ಸರದ ಪುಷ್ಯ ಶುದ್ಧ ಷಷ್ಠಿ ಡಿ. 25ರ ಗುರುವಾರ ಮಧ್ಯಾಹ್ನ 12-10 ರಿಂದ 12-20 ಗಂಟೆಗೆ ಸಲ್ಲುವ ಶುಭ (ಮೀನ) ಲಗ್ನದಲ್ಲಿ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಇತರರು ಚಾಲನೆ ನೀಡಿದರು.

ಬ್ರಹ್ಮರಥೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಸ್ವಾಮಿಗೆ ಬೆಳಗಿನ ಜಾವ 2 ಗಂಟೆಯಿಂದಲೇ ವಿವಿಧ ಪೂಜಾ ಕಾರ್ಯಕ್ರಮ ಆರಂಭಿಸಲಾಯಿತು.

ಸುಬ್ರಹ್ಮಣ್ಯಸ್ವಾಮಿ ಹಾಗೂ ಲಕ್ಷ್ಮಿ ನರಸಿಂಹಸ್ವಾಮಿಗೆ ಹಾಲಿನಿಂದ ಅಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಶ್ರೀಗಂಧ ಅಭಿಷೇಕ, ಭಸ್ಮದಭಿಷೇಕದ ಬಳಿಕ ಹೂವಿನ ಅಲಂಕಾರ ಮಾಡಲಾಯಿತು.

ಬೆಳಗ್ಗೆ 4.30ಕ್ಕೆ ಮಹಾಮಂಗಳಾರತಿ ಮುಗಿಸಿ ಭಕ್ತರಿಗೆ ದರ್ಶನಕ್ಕೆ ಬಿಡಲಾಯಿತು.
ರಥೋತ್ಸವಕ್ಕೆ ಭಕ್ತಾದಿಗಳು ಬಾಳೆಹಣ್ಣು, ದವನ ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದರು.

ದೇವಾಲಯವನ್ನು ಕಣ್ಮನ ಸೆಳೆಯುವಂತೆ ಪುಷ್ಪ ಮತ್ತು ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿತ್ತು.
ಚಿನ್ನಾಭರಣ ಕಳ್ಳತನ ಸೇರಿ ಯಾವುದೇ ಅಪರಾಧ ಕೃತ್ಯಗಳು ನಡೆಯದಂತೆ ಡ್ರೋನ್ ಕ್ಯಾಮರಾ ಮತ್ತು ಅಲ್ಲಲ್ಲಿ ಸಿಸಿಸಿ ಕ್ಯಾಮರಾ ಅಳವಡಿಸಲಾಗಿತ್ತು,

ಕ್ಷೇತ್ರಕ್ಕೆ ಬಂದ ಭಕ್ತರಿಗೆ ತಾತ್ಕಾಲಿಕ ಶೌಚಗೃಹ, ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ದೇವಾಲಯ ವತಿಯಿಂದ ಮಾಡಲಾಗಿತ್ತು.

ಈ ವೇಳೆ ಶಾಸಕ ಧೀರಜ್ ಮುನಿರಾಜ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಶೀಲ್ದಾರ್ ಮಲ್ಲಪ್ಪ, ಘಾಟಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು…