ಮರ್ಯಾದಾ ಹತ್ಯೆ……..

 

ಮರ್ಯಾದಾ ಹತ್ಯೆ……..

ಕ್ಷಮಿಸಿ ಬಿಡು ಮಾನ್ಯ ಎಂಬ ಹುಬ್ಬಳ್ಳಿ ಹತ್ತಿರದ ನನ್ನ ಗರ್ಭಿಣಿ ತಂಗಿಯೇ…..

ನಮ್ಮದೇ ದೇಶದ, ನಮ್ಮದೇ ಧರ್ಮದ ಸಹಪಾಠಿಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ, ಆತ ಅನ್ಯ ಜಾತಿಯವನು ಎಂಬ ಕಾರಣಕ್ಕೆ ನೀನು ಗರ್ಭಿಣಿಯಾಗಿರುವಾಗಲೇ ನಿನ್ನನ್ನು ಹೆತ್ತವರೇ ಬರ್ಬರವಾಗಿ ಹತ್ಯೆ ಮಾಡಿದ್ದಕ್ಕೆ. ಕ್ಷಮಿಸು ತಂಗಿ ನಾಚಿಕೆಯಿಂದ, ಅಸಹಾಯಕತೆಯಿಂದ, ಅವಮಾನದಿಂದ ತಲೆತಗ್ಗಿಸುತ್ತಿದ್ದೇನೆ ನಾನು.

ನೀನು ಶವವಾಗಿ ಮಲಗಿದ್ದ ಆ ಕ್ಷಣದಲಿ ನಾನು ಆಕಸ್ಮಿಕವಾಗಿ ಅದೇ ಆಸ್ಪತ್ರೆಯ ಬಳಿ ನನಗರಿವಿಲ್ಲದೆ ಓಡಾಡುತ್ತಿದ್ದೆ. ಯಾರೋ ಯಾವ ಕಾರಣಕ್ಕೋ ಸತ್ತಿರಬಹುದು ಎಂದು ನನ್ನ ಮಿತ್ರರೊಂದಿಗೆ ಮಾತನಾಡುತ್ತಾ ಹೋದೆ, ನಂತರವೇ ಮಾಧ್ಯಮಗಳ ಮೂಲಕ ನನಗೆ ಮಾಹಿತಿ ಸಿಕ್ಕಾಗ ಓಂ ಕೊಲೆ ನಿನ್ನದೇ ಎಂದು ತಿಳಿಯಿತು. ನನಗೂ ತುಂಬಾ ನೋವಾಯಿತು. ನಿನ್ನ ಪರಿಚಯ ನನಗಿಲ್ಲ. ಆದರೂ ನೀನು ನನ್ನ ತಂಗಿ…..

ದೂರದ ಮಧ್ಯಪ್ರಾಚ್ಯ ದೇಶದ Facebook ಗೆಳತಿಯೊಬ್ಬರು ಭಾರತದ ಬಗ್ಗೆ ಹೊಂದಿರುವ ಅಭಿಪ್ರಾಯವನ್ನು ತಮ್ಮದೇ ಭಾಷೆಯಲ್ಲಿ ವ್ಯಕ್ತಪಡಿಸಿದರು. ಅದರ ಒಟ್ಟು ಸಾರಾಂಶ…………..

” ಭಾರತದಲ್ಲಿ ಮಹಿಳೆಯರಿಗೆ ಅತ್ಯಂತ ಹೆಚ್ಚು ಸ್ವಾತಂತ್ರ್ಯವಿದೆ. ಅವರಿಗೆ ತಾವು ಇಷ್ಟ ಪಟ್ಟ ಬಟ್ಟೆಗಳನ್ನು ಹಾಕಿಕೊಳ್ಳಬಹುದು. ಎಷ್ಟಾದರೂ ಓದಬಹುದು. ಎಲ್ಲೆಂದರಲ್ಲಿ ಯಾವ ಸಮಯದಲ್ಲಿ ಬೇಕಾದರೂ ಸುತ್ತಾಡಬಹುದು. ಯಾರನ್ನು ಬೇಕಾದರೂ ಪ್ರೀತಿಸಿ ಮದುವೆಯಾಗಬಹುದು. ಪಾಶ್ಚಾತ್ಯರಲ್ಲಿ ಇದು ವಿಶೇಷವಲ್ಲವಾದರು ನಮ್ಮದೇ ಪಕ್ಕದ ಸಹೋದರ ದೇಶದಲ್ಲಿ ಈ ರೀತಿಯ ವಾತಾವರಣ ನಿಜಕ್ಕೂ ತುಂಬಾ ಖುಷಿಕೊಡುತ್ತದೆ………

ನಾವು ವಾಸಿಸುತ್ತಿರುವ ಈ ಪ್ರಾಂತ್ಯದ ಒಂದು ಹಳ್ಳಿಯಲ್ಲಿ ಈ ರೀತಿಯ ವಾತಾವರಣ ಇಲ್ಲ. ಇಲ್ಲಿ ಮಹಿಳೆಯರಿಗೆ ಅತಿಹೆಚ್ಚು ಗೌರವವಿದೆಯಾದರೂ, ರಕ್ಷಣೆ ಇದೆಯಾದರೂ ಸ್ವಾತಂತ್ರ್ಯ ಮತ್ತು ಸಮಾನತೆ ಇಲ್ಲ. ಪ್ರೀತಿಯ ವಿಷಯವಂತೂ ಬಹುದೂರ ಉಳಿಯಿತು. ಇತ್ತೀಚಿಗೆ ಶಿಕ್ಷಣ ಪರವಾಗಿಲ್ಲ. ಆದರೆ ಇಷ್ಟ ಪಟ್ಟ ಉಡುಗೆ ತೊಡಲು‌ ಸಾಧ್ಯವಿಲ್ಲ. ಬುರ್ಖಾ ಅಥವಾ ಕನಿಷ್ಠ ಸ್ಕಾರ್ಪ್ ಇಲ್ಲದೆ ಓಡಾಡುವುದು ತುಂಬಾ ಕಷ್ಟ. ಆದರೆ ಭಾರತದಲ್ಲಿ ಮುಸ್ಲಿಮರೂ ಕೂಡ ಎಲ್ಲಾ ರೀತಿಯ ಸ್ವಾತಂತ್ರ್ಯ ಹೊಂದಿದ್ದಾರೆ.

ಇದನ್ನೆಲ್ಲಾ ನೋಡಿದರೆ ನನಗೆ ನಿಜಕ್ಕೂ ಅಸೂಯೆಯಾಗುತ್ತದೆ. ನಾನು ಭಾರತದ ಮುಸ್ಲಿಂಮಳಾಗಿ ಹುಟ್ಟಬೇಕಿತ್ತು ಎಂಬ ಆಸೆಯಾಗುತ್ತದೆ…….”

ನೋಡಿ, ಆ ಷರಿಯತ್ ಕಾನೂನಿನ ಆಡಳಿತದಲ್ಲಿರುವ ಮುಗ್ಧ ಮುಸ್ಲಿಂ ಮಹಿಳೆ ಭಾರತದ ಬಗ್ಗೆ ಹೊಂದಿರುವ ಭಾವನೆ. ಬಹುಶಃ ಬಹಳಷ್ಟು ಪೌರಾತ್ಯ ದೇಶಗಳ ಮಹಿಳೆಯರು ಇದೇ ಅಭಿಪ್ರಾಯ ಹೊಂದಿರಬಹುದು……

ಇದನ್ನು ಕೇಳಿ ನಿಮಗೆ
ಭಾರತದ ಬಗ್ಗೆ ಹೆಮ್ಮೆ ಎನಿಸುತ್ತಿದೆಯೇ ? ತುಂಬಾ ಸಂತೋಷ……..

ಆದರೆ, ನಿಲ್ಲಿ,……
ಒಮ್ಮೆ ಯೋಚಿಸಿ……

ಆಕೆ ವ್ಯಕ್ತಪಡಿಸಿದ ವಿಚಾರಗಳು ನಿಜಕ್ಕೂ ಭಾರತದಲ್ಲಿ ಸಾರ್ವತ್ರಿಕವಾಗಿದೆಯೇ ?
ವಾಸ್ತವವಾಗಿದೆಯೇ ?
ಎಲ್ಲಾ ವರ್ಗದ ಮಹಿಳೆಯರು ಆ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆಯೇ ?
ಆತ್ಮಲೋಕನ ಮಾಡಿಕೊಳ್ಳಿ……….

ಎಲ್ಲೋ ಕೆಲವು ಶ್ರೀಮಂತರು, ಉನ್ನತ ವಿದ್ಯಾಭ್ಯಾಸ ಪಡೆದವರು, ಕೆಲವು ನಗರ ಪ್ರದೇಶದ ಹೆಣ್ಣುಮಕ್ಕಳನ್ನು ಹೊರತುಪಡಿಸಿ ಎಲ್ಲರಿಗೂ ಈ ಸ್ವಾತಂತ್ರ್ಯ ಮತ್ತು ಸಮಾನತೆ ಇನ್ನೂ ಸಾಧ್ಯವಾಗಿಲ್ಲ.

ನಮ್ಮ ದೇಶದಲ್ಲಿ ಆಗಾಗ ಜಾತಿಯ ಕಾರಣದ ಮರ್ಯಾದಾ ಹತ್ಯೆಗಳು ನಡೆಯುತ್ತಲೇ ಇದೆ. ಅತ್ಯಾಚಾರಗಳು ದಿನನಿತ್ಯ ವರದಿಯಾಗುತ್ತಲೇ ಇವೆ. ಒಬ್ಬೊಂಟಿ ಮಹಿಳೆಯರ ದೂರದ ಪ್ರಯಾಣ ಈಗಲೂ ಸುರಕ್ಷಿತವಲ್ಲ.
ಆಕೆಯ ಉಡುಗೆ ತೊಡುಗೆಗಳ ಬಗ್ಗೆ ಈಗಲೂ ಗೊಣಗಾಟಗಳು ಒಳಗೊಳಗೆ ಆಗುತ್ತಿರುತ್ತದೆ.
ವಿಚ್ಚೇದಿತ ಅಥವಾ ವಿಧವಾ ಮಹಿಳೆಯರು ಈಗಲೂ ಸಮಾಜದಲ್ಲಿ ಒಂಟಿಯಾಗಿ ಬದುಕುವುದು ಅಷ್ಟೊಂದು ಸುಲಭವಲ್ಲ.

ಶಬರಿಮಲೆ, ಶನಿಸಿಂಗಾನಪುರ, ಮುಂಬಯಿ ದರ್ಗಾಗಳಿಗೆ ಮಹಿಳೆಯರ ಪ್ರವೇಶಕ್ಕಾಗಿ ಹೋರಾಟ ನಡೆಯುತ್ತಲೇ ಇರುತ್ತವೆ……

ಹೀಗಿರುವಾಗ ಸಂತೋಷ ಪಡಲು ಹೇಗೆ ಸಾಧ್ಯ. ನಾವು ಹೇಳುವುದಕ್ಕೂ ಮಾತನಾಡುವುದಕ್ಕೂ ನಡೆದುಕೊಳ್ಳುವುದಕ್ಕೂ
ಸಾಮ್ಯತೆ ಇರಬೇಕಲ್ಲವೇ.
ಇಲ್ಲದಿದ್ದರೆ ಅದು ಒಣ ಸಿದ್ದಾಂತವಾಗುತ್ತದೆ.

ಭಾರತದ ಬಗ್ಗೆ ಬೇರೆ ದೇಶದವರಿಗೆ ಈಗಲೂ ಇರುವ ಒಳ್ಳೆಯ ಅಭಿಪ್ರಾಯ ಎತ್ತಿಹಿಡಿಯುವ ಜವಾಬ್ದಾರಿ ನಮ್ಮೆಲ್ಲರದು ಕೂಡ.

ಸಾಮಾಜಿಕ ಜಾಲತಾಣಗಳ ಮುಖಾಂತರ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬಾಯಿಗೆ ಬಂದಂತೆ ಎಡ, ಬಲ, ಮದ್ಯಮ ಪಂಥಗಳ ಪ್ರತಿಪಾದಕರಂತೆ, ಮಹಾನ್ ಜ್ಞಾನಿಗಳಂತೆ ಏನೇನೋ ಮಾತನಾಡುವ ಮುನ್ನ ನಮ್ಮ ಮಾತು ಮತ್ತು ನಡವಳಿಕೆಗಳನ್ನು ನಿಯಂತ್ರಿಸಿಕೊಳ್ಳಬೇಕಿದೆ.

ವಿಶಾಲ ಮನೋಭಾವದಿಂದ, ನಾಗರಿಕ ಪ್ರಜ್ಞೆಯಿಂದ,
ನುಡಿದಂತೆ ನಡೆಯುವುದರಿಂದ,
ನಮ್ಮ ಸಂಸ್ಕೃತಿ ಮತ್ತು ವ್ಯಕ್ತಿತ್ವದ ಘನತೆಯನ್ನು ಕಾಪಾಡುವುದರಿಂದ ನಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳುವ ಪ್ರತಿಜ್ಞೆಯನ್ನು ಎಲ್ಲರೂ ಮಾಡೋಣ ಎಂದು ಮನವಿ ಮಾಡಿಕೊಳ್ಳುತ್ತಾ……..

ಆಗ ಬೆತ್ತಲೆಯ ಮಾನವ ಅನಾಗರಿಕ…….

ಈಗ ಸೂಟು, ಬೂಟು, ಟೈ, ಚಿನ್ನ, ವಜ್ರ, ಅಕ್ಷರ ಜ್ಞಾನದ ಮನುಷ್ಯ ನಾಗರಿಕ……

ಹೇಗೆಂದರೆ…….

ಕೊಲೆಗಳು ಸಹಜವಾಗುತ್ತಿವೆ,
ಕೊಲೆಗಳು ಸಂಭ್ರಮವಾಗುತ್ತಿವೆ,
ಕೊಲೆಗಳು Breaking news ಗಳಾಗುತ್ತಿವೆ,
ಕೊಲೆಗಳು ಓಟುಗಳಾಗುತ್ತಿವೆ,
ಕೊಲೆಗಳು ನಾಯಕರನ್ನು ಸೃಷ್ಟಿಸುತ್ತಿವೆ,
ಕೊಲೆಗಳು ಬುದ್ದಿ ಜೀವಿಗಳನ್ನು ಸೃಷ್ಟಿಸುತ್ತಿವೆ,
ಕೊಲೆಗಳು ಧರ್ಮ ರಕ್ಷಕರನ್ನು ಸೃಷ್ಟಿಸುತ್ತಿವೆ,

ಅಕ್ಷರಗಳಿಂದಲೂ ಕೊಲೆಯಾಗುತ್ತವೆ,
ಮಾತುಗಳಿಂದಲೂ ಕೊಲೆಯಾಗುತ್ತವೆ,
ಭಾವನೆಯಿಂದಲೂ ಕೊಲೆಯಾಗುತ್ತವೆ,
ಹತ್ಯೆಗಳು ಸರ್ಕಾರವನ್ನು ಬೀಳಿಸಲೂ ಬಲ್ಲವು,
ಹತ್ಯೆಗಳು ಆಡಳಿತಕ್ಕೆ ಏರಿಸಲೂ ಬಲ್ಲವೂ,

ಇದೇ ಅಲ್ಲವೇ ನಾಗರಿಕತೆ,
ನಮ್ಮ ಮಕ್ಕಳಿಗೆ ನಾವು ಬಿಟ್ಟು ಹೋಗುತ್ತಿರುವ ಬಳುವಳಿ………

ನೆಮ್ಮದಿ, ಸಂತೋಷ ನಮ್ಮನ್ನು ಸಾವು ಹುಡುಕುತ್ತಿತ್ತು ಅಂದು,
ಅಸಹನೆ, ದ್ವೇಷದ ನಾವು ಸಾವನ್ನೇ ಹುಡುಕುತ್ತಿದ್ದೇವೆ ಇಂದು,

ತಾಯ ಹೆತ್ತೊಡಲಿನ ಕರುಳಿನ ಕೂಗು ಮಾತ್ರ ರಾತ್ರಿಯ ನೀರವತೆಯಲ್ಲಿ ಅನಾಥ ಪ್ರಜ್ಞೆಯ ಭಾವದಲ್ಲಿ, ವೀರ್ಯ ಸ್ಖಲನವನ್ನು ಶಪಿಸುತ್ತಾ ಸೃಷ್ಟಿಯ ನ್ಯಾಯಕ್ಕೆ ಮೊರೆಯಿಡುತ್ತಿದೆ.

” ಹುಟ್ಟು ಆಕಸ್ಮಿಕ – ಸಾವು ಅನಿವಾರ್ಯ ”
ಕೊಲೆ ? ??
ಜೀವ ಕೊಡುವ ಶಕ್ತಿ ಇಲ್ಲದ ಈ
ನರರಾಕ್ಷಸನಿಗೆ ಜೀವ ತೆಗೆಯುವ ಹಕ್ಕಿದೆಯೇ ?
ತಾಯಿಯ ಗರ್ಭ ಮೋಹಿಸುವ ದುರಳರಿವರು.

ಇವರಿಗೆ ದೇವರಂತೆ – ಧರ್ಮವಂತೆ.
ಇರುವೆಗಳು ಮನುಷ್ಯನಿಗೆ ಕಚ್ವಿದ ತಕ್ಷಣ ಅದಕ್ಕೆ ಸಾವು ಬರುತ್ತದೆ ಎಂಬ ಪ್ರತೀತಿ ಇದೆ.( ಇರುವೆ ಕಚ್ಚಿದ ತಕ್ಷಣ ಮನುಷ್ಯ ಅದನ್ನು ಗಮನಿಸಿ ಹೊಸಕಿ ಹಾಕುತ್ತಾನೆ )
ಹಾಗೆ ಇನ್ನೊಬ್ಬರನ್ನು ಕೊಂದ ತಕ್ಷಣ ಕೊಂದವನೂ ಅಲ್ಲಿಯೇ ರಕ್ತ ಕಾರುತ್ತಾ ಸಾಯುವಂತಾಗಬಾರದೆ…

ಆದರೂ ನಾವು ಏನಾದರೂ ಮಾಡೋಣ,
ನಿರಾಶರಾಗದೆ.
ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗೆ
ಹೊಸ ಮಾರ್ಗಗಳನ್ನು ಹುಡುಕೋಣ.
ಅದು ಕಷ್ಟ ಆದರೆ ಅಸಾಧ್ಯವಲ್ಲ.

ಜಾತಿ ವಿನಾಶ ಆಗುವವರೆಗೂ ಈ ಸಮಾಜವನ್ನು, ಈ ಧರ್ಮವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದಕ್ಕೆ ಮನಸ್ಸು ಬಿಡುವುದಿಲ್ಲ. ಆ ಕಾರಣದಿಂದಾದರೂ ಜಾತಿಯನ್ನು ಬಿಟ್ಟು ಬಿಡೋಣ. ಕನಿಷ್ಠ ಮರ್ಯಾದಾ ಹತ್ಯೆಗಳನ್ನು ತಡೆಯೋಣ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!