ಇಡೀ ವ್ಯವಸ್ಥೆಯ ಮಾನಸಿಕ – ನೈತಿಕ ಗಟ್ಟಿತನವನ್ನು ಪುನರ್ ರೂಪಿಸಬೇಕಾದ ಅವಶ್ಯಕತೆ ಇದೆ…

ಬೇವು ಬಿತ್ತಿ ಮಾವಿನ ನಿರೀಕ್ಷೆಯಲ್ಲಿ ನಾವು, ನೀವು………

ಇತ್ತೀಚೆಗೆ ಬೆಂಗಳೂರಿನ ರಸ್ತೆಯಲ್ಲಿ ಪತ್ನಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿ ರಸ್ತೆಯಲ್ಲಿ ಬಿದ್ದು ನೋವಿನಿಂದ ಸಾವು ಬದುಕಿನ ನಡುವೆ ನರಳಾಡುತ್ತಿರುವಾಗ, ಅಲ್ಲಿನ ದಾರಿಹೋಕರು ಯಾರೂ ಅವರ ನೆರವಿಗೆ ಬರಲಿಲ್ಲ. ಆತನ ಪತ್ನಿ ಪರಿಪರಿಯಾಗಿ ಕೇಳಿಕೊಂಡರೂ ಜನರು ಸಹಾಯ ಮಾಡಲಿಲ್ಲ, ಇದೊಂದು ಅಮಾನವೀಯ ಘಟನೆ, ಸಮಾಜ ಇದಕ್ಕೆ ಸ್ಪಂದಿಸದೆ ತೀರಾ ಕ್ರೌರ್ಯದಿಂದ ವರ್ತಿಸಿದೆ ಎಂಬ ರೀತಿಯ ಮಾಧ್ಯಮಗಳ ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಇದು ಮೇಲ್ನೋಟಕ್ಕೆ ಹೌದು ಎನಿಸಿದರು ಆಳದಲ್ಲಿ ಈ ಸಮಾಜ ಈ ರೀತಿಯ ಮನಸ್ಥಿತಿಯನ್ನು ಸೃಷ್ಟಿಸಿರುವುದು ಸೂಕ್ಷ್ಮವಾಗಿ ಗಮನಿಸಿದಾಗ ಅರಿವಿಗೆ ಬರುತ್ತದೆ……

ಬೇವು ಬಿತ್ತಿ ಮಾವು ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗೆಯೇ ಸಮಾಜದಲ್ಲಿ ಸತ್ವಯುತ, ಆರೋಗ್ಯಯುತ ಮೌಲ್ಯಗಳನ್ನು ಉಳಿಸದೆ, ಬೆಳೆಸದೆ ಯಾವುದೋ ಒಂದು ಘಟನೆಯ ಹಿನ್ನೆಲೆಯಲ್ಲಿ ಈ ಸಮಾಜವನ್ನು ವಿಮರ್ಶಿಸಿದರೆ ಅದು ಆತ್ಮವಂಚನೆಯಾಗುತ್ತದೆ. ಇಂದು ಯಾವುದಾದರೂ ಕ್ಷೇತ್ರ ತನ್ನ ಮೌಲ್ಯವನ್ನು ಉಳಿಸಿಕೊಂಡಿದೆಯೇ ಎಂಬುದನ್ನು ಯೋಚಿಸಿ ನೋಡಿ. ಸ್ಪರ್ಧೆ, ವೇಗ, ಹಣ, ಅಧಿಕಾರದ ಹಿಂದೆ ಬಿದ್ದ ಸಮಾಜದ ಜನರ ಮನಸ್ಥಿತಿಯಲ್ಲಿ ಸಹಾಯ, ಸೇವೆ, ತ್ಯಾಗ, ಕರುಣೆ ಮುಂತಾದ ಮಾನವೀಯ ಮೌಲ್ಯಗಳು ಹೇಗೆ ತಾನೇ ಚಟುವಟಿಕೆಯಿಂದಿರಲು ಸಾಧ್ಯ. ಎಲ್ಲಾ ಕಡೆ ಸ್ವಾರ್ಥ, ದುರಾಸೆ, ದ್ವೇಷ, ಅಸೂಯೆ, ನಿರ್ಲಕ್ಷ್ಯ, ಉಡಾಫೆ ಇವುಗಳೇ ಮೇಲುಗೈ ಪಡೆದಿರುವಾಗ ಈ ರೀತಿಯ ಘಟನೆಗಳು ಸಾಮಾನ್ಯವಾಗುತ್ತಾ ಸಾಗುತ್ತದೆ. ಎಷ್ಟೋ ಕಡೆ ಅಪಘಾತವಾದಾಗ ಕೆಲವರು ಸಾಮೂಹಿಕವಾಗಿ ದರೋಡೆ ಮಾಡುವುದನ್ನು ಸಹ ಗಮನಿಸಿದ್ದೇವೆ. ಇದು ಮಾಡಿದ್ದುಣ್ಣೋ ಮಹಾರಾಯ ಎಂಬ ನಾಣ್ಣುಡಿಯ ವಾಸ್ತವದ ಪ್ರತಿರೂಪ ಎನಿಸುತ್ತದೆ…..

ಸೆಲ್ಫೀಗಳ ( ಫೋಟೋಗಳ ) ನಡುವೆ ಮಾಯವಾಗುತ್ತಿರುವ ಮಾನವೀಯತೆ……

ಅಪಘಾತಗಳ ಸಂದರ್ಭಗಳಲ್ಲಿ, ಕಷ್ಟದ ಸನ್ನಿವೇಶದಲ್ಲಿ ಜನ ಗಾಯಾಳುಗಳಿಗೆ ನೆರವಾಗದೆ ಅಮಾನವೀಯವಾಗಿ ವರ್ತಿಸುವುದು ಆ ಕ್ಷಣದ ಅಲ್ಲಿದ್ದ ಜನರ ಪ್ರತಿಕ್ರಿಯೆ ಮಾತ್ರ ಎಂದು ಭಾವಿಸದಿರಿ. ಆ ಮನಸ್ಥಿತಿಯ ಹಿಂದೆ ವ್ಯವಸ್ಥೆಯ ಕ್ರೌರ್ಯ – ಮೌಲ್ಯಗಳ ಕುಸಿತ ತನ್ನ ಪ್ರಭಾವ ಬೀರಿದೆ……

ಈ ವಿಷಯದಲ್ಲಿ ಸುಪ್ರೀಂಕೋರ್ಟಿನ ಆದೇಶ ಜನರಿಗೆ ಅನುಕೂಲವಾಗುವಂತಿದ್ದರೂ ನಮ್ಮ ಪೋಲೀಸರ ವರ್ತನೆ ಇದಕ್ಕೆ ಪೂರಕವಾಗಿಲ್ಲ. ಅವರ ಭಾಷೆ ಮತ್ತು ನಡವಳಿಕೆ ಸಾಮಾನ್ಯರ ಬಗ್ಗೆ ಅಸಹನೀಯವಾಗಿಯೇ ಇದೆ…..

ಬ್ಯಾಂಕುಗಳಲ್ಲಿ ಮಾಸಿದ ಹಳೆಯ, ಹರಿದ ಬಟ್ಟೆಯ ಅಥವಾ ಪಂಚೆ ಟವಲ್ ಹಾಕಿದ ಅಮಾಯಕ ಜನರ ಮುಗ್ಧ ಮತ್ತು ತಿಳಿವಳಿಕೆ ಕೊರತೆಯ ಪ್ರಶ್ನೆಗಳಿಗೆ ಅಲ್ಲಿನ ಬಹುತೇಕ ಅಧಿಕಾರಿಗಳು ಉತ್ತರಿಸುವ ರೀತಿ ದುರಹಂಕಾರವಾಗಿ, ಅವಮಾನಕರವಾಗಿಯೇ ಇರುತ್ತದೆ……

ಆಸ್ಪತ್ರೆಗಳಲ್ಲಿ ಬಡವರಿಗೆ ನೀಡುವ ಚಿಕಿತ್ಸೆಗಳ ಗುಣಮಟ್ಟದಲ್ಲಿ ಕಣ್ಣಿಗೆ ಕಾಣುವಷ್ಟು ನಿರ್ಲಕ್ಷ್ಯ – ಪಕ್ಷಪಾತವಿರುತ್ತದೆ…..

ಮಾಧ್ಯಮಗಳಲ್ಲಿ ದುಷ್ಟತನಕ್ಕೆ ನೀಡುವ ಪ್ರಾಮುಖ್ಯತೆ ಒಳ್ಳೆಯ – ಅತ್ಯುತ್ತಮ ಸಾಧಕರ ಪ್ರಚಾರಕ್ಕೆ ನೀಡುವುದಿಲ್ಲ. ಕಪಟ ಪ್ರದರ್ಶಕ ಮನೋಭಾವನೆಗೇ ಹೆಚ್ಚಿನ ಆಧ್ಯತೆ ನೀಡುತ್ತಾರೆ…..

ಸರ್ಕಾರದ ಯಾವುದೇ ಇಲಾಖೆಯಲ್ಲಿ ಲಂಚವಿಲ್ಲದೆ – ನಿಮ್ಮನ್ನು ಸತಾಯಿಸದೆ ಕೆಲಸವಾಗಿದೆ ಎಂದರೆ ನೀವು ಅದೃಷ್ಟವಂತರೆಂದೇ ಭಾವಿಸಿ
ಅಥವಾ ನೀವು ಪ್ರಭಾವಿಗಳೋ, ರಾಜಕಾರಣಿಗಳ ಸಂಬಂಧಿಗಳೋ, ರೌಡಿಯೋ ಆಗಿರಬೇಕು.
ಇಲ್ಲದಿದ್ದರೆ ನಿಮ್ಮ ಸಂಕಷ್ಟಗಳಿಗೆ ಕೊನೆಯೇ ಇಲ್ಲ…..

ಇದು ಕೇವಲ ಉದಾಹರಣೆಗಳಷ್ಟೆ.
ಇಡೀ ವ್ಯವಸ್ಥೆ ಹೀಗೆಯೇ ನಡೆಯುತ್ತದೆ.
ಒಂದು ವೇಳೆ ನೀವು ಶ್ರೀಮಂತರೋ, ಬಲಶಾಲಿಗಳೋ, ಅತಿ ಧೈರ್ಯವಂತರೋ ಆಗಿದ್ದರೆ ವ್ಯವಸ್ಥೆ ಅಷ್ಟೊಂದು ಕಠೋರವಾಗಿ ವರ್ತಿಸುವುದಿಲ್ಲ. ಅಷ್ಟಕ್ಕೇ ಎಲ್ಲಾ ಸರಿಯಿದೆ ಎಂದು ಭಾವಿಸದಿರಿ……

ಜನಸಂಖ್ಯೆಯ ಅತಿಯಾದ ಒತ್ತಡ, ಮೌಲ್ಯಗಳ ಕುಸಿತ, ವೇಗದ ಮತ್ತು ದುರಾಸೆಯ ಜೀವನಶೈಲಿ, ಬೇಗನೆ ನಿರಾಸೆಗೊಳ್ಳುವ ಮನಸ್ಥಿತಿ, ಅದರಿಂದಾಗಿಯೇ ಉಂಟಾದ ಉದಾಸೀನತೆ ಜನರನ್ನು ಒತ್ತಡದಲ್ಲಿಟ್ಟಿದೆ……

ಆದ್ದರಿಂದಲೇ ಅಪಘಾತಗಳಂತ ಸಂದರ್ಭಗಳಲ್ಲಿ ಜನರಿಗೆ ಸಹಾಯಕ್ಕಿಂತ ಸೆಲ್ಫಿಯೇ ಮುಖ್ಯವಾಗುತ್ತದೆ…..

ಅದರೆ,
ಕೆಲವು ಅಪರೂಪದ ಸಂದರ್ಭಗಳಲ್ಲಿ ಅಪಘಾತದ ಭೀಕರತೆ ಬಹುಶಃ ಅಲ್ಲಿದ್ದ ಜನರು ರಕ್ತ ಮತ್ತು ದೇಹದ ಭಾಗಗಳ ಚೆಲ್ಲಾಪಿಲ್ಲಿಯಿಂದ, ಭಯ ಆತಂಕದಿಂದ ಮನಸ್ಸಿದ್ದರೂ ಸಹಾಯಕ್ಕೆ ಬರದಿರುವ ಸಾಧ್ಯತೆಯೂ ಇರುತ್ತದೆ……

ನಮ್ಮ ಆತ್ಮೀಯರು ಅಲ್ಲಿದ್ದರೆ ಅವರಿಗೆ ಸಹಾಯ ಖಂಡಿತ ಸಿಗುತ್ತದೆ. ಅಪರಿಚಿತರ ಬಗ್ಗೆ ಮಾತ್ರ ಈ ಧೋರಣೆಯಿದೆ. ಏಕೆಂದರೆ ಟಿವಿಯಲ್ಲಿ ಆ ದೃಶ್ಯ ನೋಡುವಾಗಲೇ ಮೈ ನಡುಗುತ್ತದೆ. ಇನ್ನು ಆರು ಸ್ಥಳದಲ್ಲಿಯೇ ಇದ್ದರೆ ತಲೆತಿರುಗಿ ಬಿದ್ದರೂ ಆಶ್ಚರ್ಯವಿಲ್ಲ. ಇಲ್ಲಿ ಕುಳಿತುಕೊಂಡು ಹೇಳುವಷ್ಟು ಸುಲಭ ಸ್ಥಿತಿ ಈ ವಿಷಯದಲ್ಲಿ ಕಷ್ಟ……

ಆದ್ದರಿಂದ ಕೇವಲ ಇದೊಂದೆ ವಿಷಯದಲ್ಲಿ ಸುಧಾರಣೆ ಸಾಧ್ಯವಿಲ್ಲ. ಇಡೀ ವ್ಯವಸ್ಥೆಯ ಮಾನಸಿಕ – ನೈತಿಕ ಗಟ್ಟಿತನವನ್ನು ಪುನರ್ ರೂಪಿಸಬೇಕಾದ ಅವಶ್ಯಕತೆ ಇದೆ……

ಮಾನವೀಯ ಮೌಲ್ಯಗಳ ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ ಎಂದು ಆಶಿಸುತ್ತಾ …

ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Leave a Reply

Your email address will not be published. Required fields are marked *

error: Content is protected !!