ನೆಲಮಂಗಲ: ರೈತರ ಸಬ್ಸಿಡಿ ಯೂರಿಯಾ ಅಕ್ರಮ ದಾಸ್ತಾನು, ಕಾಳ ಸಂತೆಯಲ್ಲಿ ಮಾರಾಟ…!: 200 ರೂ. ಯೂರಿಯಾ 1,500 ರೂ.ಗೆ ಮಾರಾಟ: ಅಕ್ರಮವಾಗಿ ಸಂಗ್ರಹಿಸಿದ್ದ  2 ಸಾವಿರ ಕೆಜಿ ಯೂರಿಯಾ DRI ವಶ

ರಾಜ್ಯಕ್ಕೆ ವಿನಾಯಿತಿ ಮೇಲೆ ಕೇಂದ್ರ ಸರ್ಕಾರ ಕೊಡುತ್ತಿರುವ ಯೂರಿಯಾದ ಅಭಾವದಿಂದಾಗಿ ಈ ಬಾರಿ ರೈತರು ಪರದಾಟ ನಡೆಸಿದ ಸಾಕಷ್ಟು ಘಟನೆಗಳು ನಡೆದಿತ್ತು.

ಕಿಲೋ ಮೀಟರ್​​ಗಟ್ಟಲೆ ಉದ್ದದ ಸರತಿ ಸಾಲಲ್ಲಿ ನಿಂತರೂ ಯೂರಿಯಾ ಸಿಗದೆ ಅದೆಷ್ಟೋ ರೈತರು ವಾಪಸ್ ಆಗಿದ್ದರು. ಈ ನಡುವೆ ರೈತರಿಗೆ ಹಂಚಿಕೆಯಾಗಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟವಾಗಿರುವ ಆತಂಕಕಾರಿ ವಿಷಯ ಬಹಿರಂಗವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೆಜ್ಜಗದಹಳ್ಳಿ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾವನ್ನು DRI ವಶಕ್ಕೆ ಪಡೆದಿದೆ.

ದಾಳಿಯ ವೇಳೆ ಗೆಜ್ಜಗದಹಳ್ಳಿಯಲ್ಲಿ 2 ಸಾವಿರ ಕೆಜಿ ಯೂರಿಯಾವನ್ನು DRI ವಶಕ್ಕೆ ಪಡೆದಿದೆ. 6 ತಿಂಗಳ ಹಿಂದೆ ತಜೀರ್ ಖಾನ್ ಯೂಸುಫ್ ಎಂಬವರು ತಿಂಗಳಿಗೆ 40 ಸಾವಿರಕ್ಕೆ ಶೆಡ್​​ ಬಾಡಿಗೆಗೆ ಪಡೆದಿದ್ದರು. ಇಲ್ಲಿಂದ ಯೂರಿಯಾ ಪ್ಯಾಕ್ ಮಾಡಿ ತಮಿಳುನಾಡಿಗೆ ಕಳುಹಿಸಲಾಗ್ತಿತ್ತು. ತಮಿಳುನಾಡಿನಲ್ಲಿ ದಾಳಿ ವೇಳೆ DRI ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಡ್ತಿದ್ದ 45 ಕೆಜಿ ತೂಕದ ಯೂರಿಯಾವನ್ನು ಶೆಡ್​ಗಳಿಗೆ ತಂದು ದಾಸ್ತಾನು ಮಾಡಲಾಗ್ತಿತ್ತು. ಬಳಿಕ ಅದನ್ನು ಬೇರೆ ಚೀಲಗಳಿಗೆ ತುಂಬಿ 50 ಕೆಜಿ ಚೀಲವನ್ನಾಗಿ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಕೇವಲ 266 ರೂ.ಗೆ ರೈತರಿಗೆ ನೀಡಬೇಕಿದ್ದ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ 2000 ರೂ.ಗೆ ದಂಧೆಕೋರರು ಮಾರಾಟ ಮಾಡುತ್ತಿದ್ದರು.

ಕೇಂದ್ರವು 45 ಕೆಜಿ ತೂಕದ 2321 ರೂ. ಬೆಲೆಯ ಯೂರಿಯಾಗೆ 2054 ರೂ. ಸಬ್ಸಿಡಿ ನೀಡಿ 266 ರೂಪಾಯಿಗೆ ರಾಜ್ಯಕ್ಕೆ ನೀಡುತ್ತದೆ. ಅದನ್ನೇ ಇವರು ಕಾಳಸಂತೆಯಲ್ಲಿ 2500 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವುದೀಗ ಬಯಲಾಗಿದೆ.

ಕೇಂದ್ರ ಸರ್ಕಾರದಿಂದ ಯೂರಿಯಾ ರಾಜ್ಯದ ಕೃಷಿ ಇಲಾಖೆಗೆ ವರ್ಗಾವಣೆ ಆಗುತ್ತದೆ. ಆ ಬಳಿಕ ಇಲಾಖೆಯೇ ರೈತರಿಗೆ ಇವನ್ನು ವಿತರಣೆ ಮಾಡಬೇಕು. ಹೀಗಿರುವಾಗ ಅವು ದಂಧೆಕೋರರ ಕೈಸೇರುತ್ತಿರೋದಾದರೂ ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲಿ ಈಗ ಉದ್ಭವಿಸಿದೆ.

Leave a Reply

Your email address will not be published. Required fields are marked *

error: Content is protected !!