ಘಾಟಿ‌ ದನಗಳ ಜಾತ್ರೆಯಲ್ಲಿ ಮಿರಮಿರ ಮಿಂಚುತ್ತಿರುವ ಅಮೃತ್ ಮಹಲ್, ಹಳ್ಳಿಕಾರ್ ಹೋರಿಗಳು

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಶ್ರೀ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯು ದಕ್ಷಿಣ ಭಾರತದಲ್ಲೇ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ದನಗಳ ಜಾತ್ರೆ ಡಿ.10ರಿಂದ ಪ್ರಾರಂಭವಾಗಿದೆ. ತುಂಬು ಜಾತ್ರೆಗೆ ದೂರದ ಊರುಗಳಿಂದ ಹೊರಿಗಳೊಂದಿಗೆ ಸಾಲು ಸಾಲಾಗಿ ರೈತರು ಬರುತ್ತಿದ್ದಾರೆ.

ಕಳೆಗಟ್ಟಿದ ಘಾಟಿ ದನಗಳ ಸಂತೆ

ಜಾತ್ರೆಯಲ್ಲಿ ಹೋರಿಗಳನ್ನು ಕಟ್ಟುವ ಸ್ಥಳಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೈಟೆಕ್ ಮಾದರಿಯಲ್ಲಿ ಪೆಂಡಾಲ್ ಗಳನ್ನು ನಿರ್ಮಿಸುವ ರೈತರ ಸಂಖ್ಯೆಯು ಹೆಚ್ಚಾಗಿದೆ. ಹೋರಿಗಳು ಮಲಗಲು ವಿಶೇಷವಾಗಿ ನಿರ್ಮಿಸುವ ಮೆತ್ತನೆಯ ಹುಲ್ಲಿನ ಹಾಸಿಗೆ, ಪೆಂಡಾಲ್ ಅನ್ನು ಬಣ್ಣ ಬಣ್ಣದ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿ, ಕೊಳ್ಳುವವರಿಗೆ ಹಾಗೂ ನೋಡುಗರ ಕಣ್ಣಿಗೆ ಕುಕ್ಕುವಂತೆ ಶೃಂಗಾರ ಮಾಡಿ ಹೋರಿಗಳನ್ನ ನಿಲ್ಲಿಸಿದ್ದಾರೆ.

ನೆಚ್ಚಿನ ಹೋರಿಗಳನ್ನು ಖರೀದಿಯಲ್ಲಿ ನಿರತರಾದ ರೈತರು

ಮುಂಗಾರಿನ ಮಳೆ ಆಶ್ರಯದಲ್ಲಿ ಬೆಳೆಯಲಾಗುವ ಬೆಳೆಗಳ ಕೊಯ್ಲು ಮುಕ್ತಾಯವಾದ ನಂತರ ಪ್ರಥಮ ಬಾರಿಗೆ ನಡೆಯುವ ಘಾಟಿ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಕೃಷಿ ಕೆಲಸಕ್ಕೆ ಬೇಕಾಗುವ ಹೋರಿಗಳನ್ನು ಖರೀದಿಸಲು ರಾಜ್ಯದ ಬಳ್ಳಾರಿ, ದಾವಣಗೆರೆ, ರಾಯಚೂರು, ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯದ ತಮಿಳುನಾಡಿನ ಸೇಲಂ, ಹೊಸೂರು, ಆಂಧ್ರಪ್ರದೇಶದ ಹಿಂದೂಪುರ, ಅನಂತಪುರ, ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಸೇರಿದಂತೆ ನಾನಾ ಭಾಗಗಳಿಂದ ರೈತರು ಈಗಾಗಲೇ ಬಂದಿದ್ದಾರೆ.

ಅಮೃತ್ ಮಹಲ್, ಹಳ್ಳಿಕಾರ್ ತಳಿ ಫೇಮಸ್

ಘಾಟಿ ದನಗಳ ಜಾತ್ರೆಗೆ ಅಮೃತ್ ಮಹಲ್, ಹಳ್ಳಿಕಾರ್ ಸೇರಿದಂತೆ ಸ್ಥಳೀಯ ನಾಟಿ ಹೋರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಕ್ಕೆ ಬರುತ್ತವೆ. ಹೀಗಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದ ರೈತರು ಕೃಷಿ ಕೆಲಸಗಳಿಗೆ ಈ ಹೋರಿಗಳ ಖರೀದಿಗೆ ಬಂದಿದ್ದಾರೆ.

ದನಗಳ ಜಾತ್ರೆ ಕಣ್ತುಂಬಿಕೊಳ್ಳಲು ಬಂದ ಜನ

ಬೆಂಗಳೂರಿಗೆ ಸಮೀಪದಲ್ಲೇ ಇರುವ ಘಾಟಿ ಸುಬ್ರಹ್ಮಣ್ಯಸ್ವಾಮಿ ದನಗಳ ಜಾತ್ರೆ ವೀಕ್ಷಣೆಗೆ ನೋಡುಗರ ಸಂಖ್ಯೆಯು ಹೆಚ್ಚಾಗಿದೆ.

ಜಾತ್ರೆಯಲ್ಲಿ ಹೈಟೆಕ್ ಮಾದರಿಯ ಪೆಂಡಾಲ್ ಗಳನ್ನು ನಿರ್ಮಿಸುವುದು, ಹೋರಿಗಳನ್ನು ಮೇಯಿಸಿ ಜಾತ್ರೆಗೆ ಕರೆತುರುವುದು ಇತ್ತೀಚಿನ ದಿನಗಳಲ್ಲಿ ಕೆಲ ರೈತರಿಗೆ ಪ್ರತಿಷ್ಠೆಯ ಸಂಗತಿಯಾಗಿದ್ದು, ಲಕ್ಷಾಂತರ ರೂಪಾಯಿಗಳನ್ನು ಇದಕ್ಕಾಗಿಯೇ ಖರ್ಚು ಮಾಡಲಾಗುತ್ತಿದೆ.

ಈ ಹಿಂದಿನ ಜಾತ್ರೆಯಲ್ಲಿ ಒಂದು ಜೋಡಿ ಹೋರಿಗಳನ್ನು ₹1.75 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಈ ಬಾರಿ ಇದಕ್ಕಿಂತಲು ಹೆಚ್ಚಿನ ಮೊತ್ತದ ಅಂದರೆ ಸುಮಾರು 12 ಲಕ್ಷ ಬೆಲೆ ಬಾಳುವ ಹೋರಿಗಳು ಬಂದಿವೆ.

ಬಣ್ಣದ ಬಾರು ಕೋಲುಗಳು

ಕೃಷಿ ಕೆಲಸ ಮಾಡುವ ಹೋರಿಗಳು ಸೇರಿದಂತೆ ರಾಸುಗಳ ಕೊರಣಿಗೆ ಕಟ್ಟುವ ಕಂಬಳಿ ದಾರ, ಘಂಟೆಗಳು, ಗೌಸಿಣಿಗೆ, ಬಣ್ಣ ಬಣ್ಣದ ಬಾರು ಕೋಲುಗಳು, ಘಂಟೆ ಸರ, ರಾಗಿ ಒಕ್ಕಣೆಯಲ್ಲಿ ಬಳಸುವ ವಿವಿಧ ಕೃಷಿ ಪರಿಕರಗಳನ್ನು ಮಾರಾಟ ಮಾಡುವ ಅಂಗಡಿಗಳು ಈಗಾಗಲೇ ವ್ಯಾಪಾರಕ್ಕೆ ಸಿದ್ಧಗೊಂಡಿವೆ.

ಈ ಹಿಂದೆ ಹೋರಿಗಳನ್ನು ಕಟ್ಟುವ ರೈತರು ಮಾತ್ರ ಬಾರು ಕೋಲುಗಳನ್ನು ಖರೀದಿಸುತ್ತಿದ್ದರು. ಆದರೆ ಇತ್ತೀಚಿಗೆ ಜಾತ್ರೆಯಲ್ಲಿ ಬಣ್ಣ ಬಣ್ಣದ ಬಾರು ಕೋಲುಗಳನ್ನು ಖರೀದಿ ಮನೆಗೆ ಕೊಂಡೊಯ್ಯುವುದು ಶೋಕಿಯ ಸಂಗತಿಯಾಗಿದೆ. ಹಾಗಾಗಿ ಜಾತ್ರೆಗೆ ಬರುವ ಮಕ್ಕಳು, ಅದರಲ್ಲೂ ಯುವ ಸಮುದಾಯ ಬಾರು ಕೋಲುಗಳನ್ನು ಖರೀದಿಸಿ ಜಾತ್ರೆಯಲ್ಲಿ ಕೈಯಲ್ಲಿಡಿದುಕೊಂಡು ಒಡಾಡುವ ದೃಶ್ಯಗಳು ಸಾಮಾನ್ಯವಾಗಿವೆ..

ಡಿಸೆಂಬರ್ ಚಳಿ ಪ್ರಾರಂಭ

ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ರೈತರು, ರಾಸುಗಳು ಚಳಿಯೊಂದಿಗೆ ಇರುವುದು ಮಾಮೂಲು.

ಜಾತ್ರೆಗೆ ಬರುವ ಎತ್ತುಗಳು, ವಾಹನಗಳಿಗೆ ಯಾವುದೇ ಸುಂಕವಿಲ್ಲ

ದನಗಳ ಜಾತ್ರೆಗೆ ತಮಿಳುನಾಡು, ಆಂಧ್ರ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಬರುವ ರೈತರಿಗೆ ಘಾಟಿ‌ ಸುಬ್ರಹ್ಮಣ್ಯ ದೇವಾಲಯದ ವತಿಯಿಂದ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಹಾಗೂ ರೈತರಿಗೆ ಬೆಳಗ್ಗೆ ತಿಂಡಿ ಮಧ್ಯಾಹ್ನ ಊಟ ಏರ್ಪಡಿಸಲಾಗಿರುತ್ತದೆ. ಜಾತ್ರೆಗೆ ಬರುವ ಎತ್ತುಗಳಿಗೆ ಯಾವುದೇ ಸುಂಕ ಇರುವುದಿಲ್ಲ.

ಪ್ಲಾಸ್ಟಿಕ್ ಬಳಕೆ ನಿಷೇಧ

ಜಾತ್ರೆಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ಲಾಸ್ಟಿಕ್ ಬಳಕೆಯನ್ನು ಜಿಲ್ಲಾಡಾಳಿತ ನಿಷೇಧಿಸಲಾಗಿದೆ. ದೇವಾಲಯ ಆವರಣದಲ್ಲಿರುವ ಅಂಗಡಿ ಮಳಿಗೆಗಳು‌, ಸಾರ್ವಜನಿಕರು ಪ್ಲಾಸ್ಟಿಕ್ ಬಳಸದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಸೂಕ್ತ ಬಂದೋಬಸ್ತ್ ವ್ಯವಸ್ಥೆ

ತುರ್ತು ಆರೋಗ್ಯ ಚಿಕಿತ್ಸಾ ಕೇಂದ್ರ ಹಾಗೂ ಅಂಬುಲೆನ್ಸ್ ಸೇವೆ ಒದಗಿಸುವಂತೆ ಆರೊಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಲಾಗಿದೆ. ಜಾತ್ರೆಯಲ್ಲಿ ಕಳ್ಳತನ, ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ತಡೆಯಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!