ಮುಂದಿನ ಪೀಳಿಗೆಗಾಗಿ ವನ ಸಂಪತ್ತು ದುಪ್ಪಟ್ಟಾಗಬೇಕು-ಅರವಿಂದ ಸಾಯಿಬಣ್ಣ ಹಾಗರಗಿ

ಪ್ರತಿ ವರ್ಷವೂ ಬಿಸಿಲಿನ ತಾಪಮಾನ ಏರಿಕೆಯಾಗುತ್ತಲೇ ಇದೆ. ಇದನ್ನು ತಗ್ಗಿಸಲು ಅರಣ್ಯ ಹಾಗೂ ಪ್ರಾಕೃತಿಕ ಸಂಪತ್ತು ಹೆಚ್ಚು ಮಾಡಲೇಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಅರವಿಂದ ಸಾಯಿಬಣ್ಣ ಹಾಗರಗಿ ಹೇಳಿದರು.

ನಗರದ ನ್ಯಾಯಾಲಯದ ಸಮೀಪ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಹಾಗೂ ವಯೋವೃದ್ಧರ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ‘ಊರಿಗೊಂದು ವನ ಊರಿಗೊಂದು ಕೆರೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.

ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದು ಮುಂದಿನ ಪೀಳಿಗೆಯ ದೃಷ್ಟಿಯಿಂದ ವನ ಸಂಪತ್ತು ಹೆಚ್ಚಾಗಬೇಕಿದೆ. ಆದರೆ ಇದು ಅರಣ್ಯ ಇಲಾಖೆಯ ಕಾರ್ಯವಷ್ಟೇ ಅಲ್ಲದೇ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರಕೃತಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದರು.

ಮಕ್ಕಳ ಮೇಲೆ ದೌರ್ಜನ್ಯ ಎಸಗುವವರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಿದೆ. ಬಾಲ ಕಾರ್ಮಿಕ ಪದ್ಧತಿ ಸಹ ಮಕ್ಕಳ ಮೇಲಿನ ಶೋಷಣೆಯ ಭಾಗವೇ ಆಗಿದೆ. ಇತ್ತೀಚೆಗೆ ಬಂದ ಯುಪಿಎಸ್‌ಸಿ ಫಲಿತಾಂಶದಲ್ಲಿ 25 ರಲ್ಲಿ 5 ಮಂದಿ ಕೆಳಸ್ತರದಿಂದ ಬಂದವರಾಗಿದ್ದು, ಶಿಕ್ಷಣಕ್ಕೆ ಒತ್ತು ನೀಡಿದರೆ ಎಂತಹ ಸಾಧನೆಯನ್ನಾದರೂ ಮಾಡುತ್ತಾರೆ ಎನ್ನುವುದಕ್ಕೆ ನಿದರ್ಶನವಾಗಿದೆ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ಆರ್.ದೀಪ ಮಾತನಾಡಿ, ಊರಿಗೊಂದು ವನ ಊರಿಗೊಂದು ಕೆರೆ ಕಾರ್ಯಕ್ರಮ ಜಿಲ್ಲೆಯಾದ್ಯಂತ 7 ಸಾವಿರ ಕಾರ್ಯಕ್ರಮ ನಡೆಯುತ್ತಿವೆ. ತಾಲ್ಲೂಕಿನಲ್ಲಿ 3 ಸಾವಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಿಡಗಳನ್ನು ನೆಡುವುದರ ಜತೆಗೆ ಪೋಷಣೆ ಮಾಡಬೇಕು. ಕೆರೆಗಳ ಮಲಿನವನ್ನು ತಡೆಯಬೇಕಿದೆ. ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಜಾರಿಗೆ ತಂದಿರುವ ಪೋಕ್ಸೊ ಕಾಯ್ದೆ ಬಗ್ಗೆ ಹೆಚ್ಚಿನ ಅರಿವು ಅಗತ್ಯವಿದೆ. 18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನಲ್ಲಿ ಮದುವೆ ಮಾಡಿದರೆ ಪೋಷಕರಾದಿಯಾಗಿ ಮದುವೆ ಮಾಡಿಸಿದವರೂ ಶಿಕ್ಷೆಗೆ ಒಳಗಾಗುತ್ತಾರೆ. ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಹಾಗೂ ವಯೋವೃದ್ಧರ ಹಿತರಕ್ಷಣಾ ಸಮಿತಿ ರಾಜ್ಯ ಅಧ್ಯಕ್ಷೆ ಎಚ್.ವಿ.ಭಾಗ್ಯಲಕ್ಷ್ಮಿ ಮಾತನಾಡಿ, ತಾಲ್ಲೂಕಿನ ಹಳೇಕೋಟೆ ಸುತ್ತಮುತ್ತ ಪರವಾನಿಗಿ ಪಡೆದಿರುವುದಕ್ಕಿಂತಲು ಹೆಚ್ಚಿನ ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಪ್ರಾಕೃತಿಕ ಸಂಪತ್ತನ್ನು ಬರಿದು ಮಾಡುತ್ತಿರುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು.

ಈ ವೇಳೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಂ.ಸುಷ್ಮಾ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಭಾರತಿ ಶ್ಯಾಮರಾಜ್ ಇದ್ದರು.

Leave a Reply

Your email address will not be published. Required fields are marked *