ನನಗಿಂತ ಅಂದ-ಚೆಂದವಾಗಿದ್ದಾರೆ ಅಂತಾ ಸ್ವಂತ ಮಗು ಸೇರಿ 4 ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ಕಿರಾತಕಿ…!

ಹರಿಯಾಣದ ಪಾಣಿಪತ್‌ನಲ್ಲಿ ನಡೆದ ಸರಣಿ ಕೊಲೆ ಪ್ರಕರಣವೊಂದು ಜನರನ್ನು ಬೆಚ್ಚಿಬೀಳಿಸಿದೆ. ಇಲ್ಲೊಬ್ಬ ತಾಯಿ ತನ್ನ ಸ್ವಂತ ಮಗುವನ್ನು ಸೇರಿದಂತೆ ಸಂಬಂಧಿಕರ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ.

ನೌಲ್ತಾ ಗ್ರಾಮದ 32 ವರ್ಷದ ಪೂನಂ ಎಂಬ ಮಹಿಳೆ ಕಳೆದ ಎರಡು ವರ್ಷಗಳಲ್ಲಿ, ತನ್ನದೇ ಮೂರು ವರ್ಷದ ಮಗುವೂ ಸೇರಿದಂತೆ ನಾಲ್ಕು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

ಸದ್ಯ ನಾಲ್ಕು ಮಕ್ಕಳ ಕೊಲೆ ಆರೋಪದ ಮೇಲೆ ಆ ಮಹಿಳೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಮಕ್ಕಳ ಸೌಂದರ್ಯದ ಬಗ್ಗೆ ತನಗಿದ್ದ ಅತಿಯಾದ ಅಸೂಯೆಯೇ ಈ ಕೊಲೆಗಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಭೂಪೇಂದ್ರ ಸಿಂಗ್ ಅವರು ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ್ದು, “ಡಿಸೆಂಬರ್ 1ರ ಸಂಜೆ ನೌಲತಾ ಗ್ರಾಮದಲ್ಲಿ 6 ವರ್ಷದ ಬಾಲಕಿ ವಿಧಿ ತನ್ನ ಕೋಣೆಯೊಳಗೆ ನೀರಿನ ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿತ್ತು. ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಹುಡುಗಿಯ ಶವ ಪತ್ತೆಯಾದ ಕೋಣೆ ಹೊರಗಿನಿಂದ ಲಾಕ್ ಆಗಿರುವುದು ಕಂಡುಬಂದಿತ್ತು. ಹೀಗಾಗಿ, ಪ್ರಕರಣ ಅನುಮಾನಾಸ್ಪದವಾಗಿತ್ತು. ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು ಹಾಗೂ ಕೊಲೆ ಶಂಕೆಯ ಮೇಲೆ ಪ್ರಕರಣ ದಾಖಲಿಸಲಾಗಿದೆ” ಎಂದಿದ್ದಾರೆ.

ಡಿಸೆಂಬರ್ 2 ರಂದು ಅಪರಾಧ ತಂಡ ಮತ್ತು ಡಿಎಸ್​​ಪಿ ನವೀನ್ ನೇತೃತ್ವದಲ್ಲಿ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಯಿತು. ತನಿಖೆಯಲ್ಲಿ ಬಾಲಕಿ ವಿಧಿ ಪಾಲ್ ಸಿಂಗ್ ಅವರ ಮನೆಯಲ್ಲಿ ವಿವಾಹ ಸಮಾರಂಭ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಮದುವೆ ಮೆರವಣಿಗೆ ಹೋದ ನಂತರ ಆಕೆ ಇದ್ದಕ್ಕಿದ್ದಂತೆ ಕಾಣೆಯಾಗಿ, ನಂತರ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು ಎಂದು ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ ಕೊಲೆ ಆರೋಪಿ ಮಹಿಳೆ ತಾನು ಸುಂದರ ಹುಡುಗಿಯರನ್ನು ದ್ವೇಷಿಸುತ್ತೇನೆ ಮತ್ತು ಅವಕಾಶ ಸಿಕ್ಕಾಗಲೆಲ್ಲ ಅವರನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುತ್ತೇನೆ ಎಂದು ಹೇಳಿದ್ದಾಳೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಅವಳು 2023ರಲ್ಲಿ ಸೋನಿಪತ್‌ನ ಭವಾರ್ ಗ್ರಾಮದಲ್ಲಿ ತನ್ನ ಸ್ವಂತ ಮಗನನ್ನೇ ನೀರಿನಲ್ಲಿ ಮುಳುಗಿಸಿ ಕೊಂದಿದ್ದಳು. ಅದೇ ರೀತಿ ಅವಳು ಇನ್ನೂ ಇಬ್ಬರು ಮಕ್ಕಳನ್ನು ಕೊಂದಿದ್ದಳು. ಈ ಪ್ರಕರಣ ಕುರಿತಂತೆ ಇಲ್ಲಿಯವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!