
ಹೊನ್ನಾವರ: ಮೈಸೂರಿನಿಂದ ಪ್ರವಾಸಕ್ಕೆಂದು ಹೊನ್ನಾವರಕ್ಕೆ ಬರುತ್ತಿದ್ದ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟು, 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ದಾರುಣ ಘಟನೆ ತಾಲೂಕಿನ ಸುಳೆ ಮುರ್ಕಿ ಕ್ರಾಸ್ ಬಳಿ ನಡೆದಿದೆ.
ಮೃತ ದುರ್ದೈವಿ ವಿದ್ಯಾರ್ಥಿಯನ್ನು ಮೈಸೂರಿನ ತರಳಬಾಳು ವಿದ್ಯಾ ಸಂಸ್ಥೆಯ ಪವನ್ (15) ಎಂದು ಗುರುತಿಸಲಾಗಿದ್ದು, ಈತ 10ನೇ ತರಗತಿ (SSLC) ಓದುತ್ತಿದ್ದನು.
ಮೈಸೂರಿನ ತರಳಬಾಳು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಶಾಲಾ ಬಸ್ ಮೂಲಕ ಪ್ರವಾಸಕ್ಕಾಗಿ ಹೊನ್ನಾವರಕ್ಕೆ ಆಗಮಿಸುತ್ತಿದ್ದರು. ಹೊನ್ನಾವರದ ಸುಳೆ ಮುರ್ಕಿ ಕ್ರಾಸ್ ಬಳಿ ಬರುತ್ತಿದ್ದಂತೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.
ಘಟನೆಯಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.