
ಟಗರು ಮತ್ತು ಬಂಡೆ……
ಒಂದು ರಾಜಕೀಯ ಪ್ರಹಸನ
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಟಗರು ಮತ್ತು ಬಂಡೆ ಎಂಬ ಎರಡು ಪಾತ್ರಗಳ ನಡುವಿನ ಸಂಭಾಷಣೆ………
****************************
ಟಗರಿನ ಮನೆಗೆ ಬಂಡೆ ಬರುತ್ತದೆ…..
ಟಗರು : ( ಸ್ವಾಗತಿಸುತ್ತಾ ) ಹೇ ಶಿವಕುಮಾರ್ ಬಾರಪ್ಪ ಬಾ ನಿನಗೆ ಸುಸ್ವಾಗತ ಕಣಯ್ಯ..
ಬಂಡೆ : ಥ್ಯಾಂಕ್ಯು ಸಾರ್, ಗುಡ್ ಮಾರ್ನಿಂಗ್…
ಟಗರು : ಹೂಂ, ಬಾ ಮೊದಲು ತಿಂಡಿಗೆ ಹೋಗೋಣ. ಅಲ್ಲೇ ಕೂತ್ಕೊಂಡು ಮಾತಾಡೋಣ. (ಸಹಾಯಕರಿಗೆ) ಹೇ ಡೈನಿಂಗ್ ಟೇಬಲ್ ಮೇಲೆ ಬ್ರೇಕ್ ಫಾಸ್ಟ್ ರೆಡಿ ಮಾಡ್ರೋ…., ಹಾಗೇ ಎಲ್ರೂ ನಾನು ಕರೆಯುವವರೆಗೂ ಸ್ವಲ್ಪ ಆಚೆ ಇರಿ…..
ಬಂಡೆ : ಆಯ್ತು ನಡೀರಿ. ನಾನು ಅದಕ್ಕೆ ಬಂದಿರೋದು…..
ಇಬ್ಬರೂ ಡೈನಿಂಗ್ ಟೇಬಲ್ ಮೇಲೆ ಕುಳಿತು ತಿಂಡಿ ತಿನ್ನುತ್ತಾ……
ಟಗರು : ಏಯ್ ಶಿವಕುಮಾರ್ ಇನ್ನೊಂದ್ ಎರಡು ಇಡ್ಲಿ ಹಾಕ್ಕೋ…
ಬಂಡೆ : ಸಾಕು ಸರ್. ಜಾಸ್ತಿ ತಿನ್ನೋದಿಲ್ಲ ಬೆಳಿಗ್ಗೆ.
ಟಗರು : ಏಯ್ ತಿನ್ನಯ್ಯ. ನೀನು ಕನಕಪುರದ ಬಂಡೆ. ಇನ್ನೂ ವಯಸ್ಸು ಇದೆ. ಚೆನ್ನಾಗಿ ತಿನ್ನು. ನನಗೇನೋ ವಯಸ್ಸಾಯ್ತು…
ಬಂಡೆ : ಸಾರ್ ನನಗೂ ವಯಸ್ಸಾಯ್ತು. ನಾನೇನು ಹುಡುಗ ಅಲ್ಲ. ನೀವೇ ನನಗಿಂತ ಹೆಚ್ಚು ಆರೋಗ್ಯವಾಗಿದೀರಾ…
ಟಗರು : ನೀನೇ ಹಿಂಗಂದ್ರೆ ಹೆಂಗೆ ? ನಿನಗೆ ಎಷ್ಟು ವಯಸ್ಸು. 62/63 ಆಗಿರಬೇಕಲ್ವಾ. ಇನ್ನು ಬಹಳ ಐತೆ ಬಿಡೋ.
ಬಂಡೆ : ಅದಿರ್ಲಿ ಸಾರ್ , ಏನ್ ಮಾಡಿದ್ರಿ ? ನೀವು ಕೊಟ್ಟ ಮಾತು ಉಳಿಸಿಕೊಳ್ತಿಲ್ಲ.
ಟಗರು : ಹೇ ಶಿವಕುಮಾರ್ ನಾನೆಲ್ಲಿ ಇಲ್ಲ ಅಂದೆ. ಆದರೆ ಈಗ ಸೆಷನ್ ನಡೀತಾ ಇದೆ. ಅಲ್ದೆ ಈಗ ನಿನ್ನ ಪರಿಸ್ಥಿತಿನೂ ಚೆನ್ನಾಗಿಲ್ಲ. ನಿನ್ನ ಮೇಲೆ ಜಾಸ್ತಿ ಕೇಸ್ ಇದೆ. ಆ ಬಿಜೆಪಿಯವರು ನೀನು ಅಧಿಕಾರಕ್ಕೆ ಬರ್ತಾ ಇದ್ದಂಗೆ ಯಾವುದೋ ಕೇಸ್ ಹಾಕಿ ತೊಂದ್ರೆ ಕೊಡ್ತಾರೆ. ಅದಕ್ಕೆ ನಾನು ಹೇಳೋದು ಕೇಳು. ನಾನು ಮಾತು ಕೊಟ್ಟಿದ್ದೀನಿ ನಿಜ. ಬೇಕು ಅಂದ್ರೆ ಬಿಟ್ಕೊಡ್ತೀನಿ. ಆದರೆ ನಿನ್ನೊಳ್ಳೆದಿಕ್ಕೆ ಹೇಳ್ತೀನಿ ಕೇಳು. ಈ ಪೂರ್ತಿ ಅವಧಿ ನಾನ್ ಇರ್ತೀನಿ. ಆಮೇಲೆ ನೆಕ್ಸ್ಟ್ ನಿನ್ನ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ. ನಾವೇ ಗೆಲ್ತೀವಿ. ಆಮೇಲೆ ಮುಂದೆ ಐದು ವರ್ಷ ನೀನೇ ಮಾಡಪ್ಪ.
ಬಂಡೆ : ಅದೆಲ್ಲಾ ಬೇಡ ಸಾರ್. ಅವತ್ತು ಏನು ಹೇಳಿದ್ರಿ ಹಂಗ್ ನಡ್ಕೊಳ್ಳಿ. ನಾನು ಈ ಎರಡೂವರೆ ವರ್ಷ ನಿಮಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ. ಒಂದು ದಿನಕ್ಕೂ ತೊಂದರೆ ಕೊಟ್ಟಿಲ್ಲ. ನಿಮ್ಮ ವಿರುದ್ಧ ಯಾವುದೇ ಸಂಘಟನೆ ಮಾಡ್ಲಿಲ್ಲ. ನೀವು ಈಗ ಈ ತರಹ ಮಾತಾಡಿದ್ರೆ ಹೆಂಗೆ. ಸಾರ್ ನನಗೂ ವಯಸ್ಸಾಯ್ತು. ಆರೋಗ್ಯದ ಸಮಸ್ಯೆನೂ ಇದೆ. ನಾನೂ ಒಂದೆರಡು ವರ್ಷ ಮುಖ್ಯಮಂತ್ರಿ ಆಗ್ಬಾರ್ದಾ ಸಾರ್. ಪಕ್ಷಕ್ಕಾಗಿ ದುಡಿದಿಲ್ವಾ. ಕೇಸ್ ಎಲ್ಲಾ ನಾನು ನೋಡಿಕೊಳ್ಳುತ್ತೇನೆ.
ಟಗರು : ಏಯ್ ಶಿವಕುಮಾರ್ ನಾನೆಲ್ಲಿ ಇಲ್ಲ ಅಂದೆ. ಈಗ್ಲೂ ನೀನೇ ಸೂಪರ್ ಸಿಎಂ ಕಣಯ್ಯ. ನಿನ್ನ ಕೆಲಸದಲ್ಲಿ ನಾನ್ಯಾವತ್ತಾದ್ರೂ ಅಡ್ಡಿ ಮಾಡಿದಿನಾ ? ನೀನೇ ಸೂಪರ್ ಪವರ್. ಈಗ ಕ್ಯಾಬಿನೆಟ್ ಪುನರ್ ರಚನೆ ಸಮಯದಲ್ಲಿ ಕೂಡ ಜಾಸ್ತಿ ನಿನ್ನ ಕಡೆಯವರಿಗೇ ಕೊಡ್ತೀನಿ. ಆರೋಗ್ಯದಲ್ಲಿ ಏನು ಸಮಸ್ಯೆ ಇಲ್ಲ. ಬಿಪಿ, ಶುಗರ್ ಎಲ್ಲಾ ಕಾಮನ್ ಕಣಯ್ಯ. ನನಗೂ 30/40 ವರ್ಷದಿಂದ ಇದೆ. ನೀನು ಗುಂಡುಕಲ್ಲಿದ್ದಂಗ್ಗೆ ಇದೀಯ. ಅದರ ಬಗ್ಗೆ ಚಿಂತೆ ಮಾಡಬೇಡ.
ಬಂಡೆ : ಸರ್ ಅದೆಲ್ಲಾ ಬೇಡ. ಹೈಕಮಾಂಡ್ ನವರು ಫೋನ್ ಮಾಡಿದ್ರು. ರಾಜ್ಯದಲ್ಲಿ ಇದೇನಪ್ಪ ನಿಮ್ಮಿಬ್ಬರ ಗಲಾಟೆ. ಪಕ್ಷದ ಮಾನ ಮರ್ಯಾದೆ ತೆಗಿಬ್ಯಾಡ್ರಿ. ನೀವೇ ಕುತ್ಕೊಂಡು. ಮಾತಾಡಿ. ನಮಗೇ ಇಬ್ಬರೂ ಮುಖ್ಯ ಅಂದ್ರು…
ಟಗರು : ಹೌದು ನನಗೂ ಫೋನ್ ಮಾಡಿದ್ರು. ಸಿದ್ದರಾಮಯ್ಯನವರೇ , ನೀವು ಸೀನಿಯರ್ ಇದೀರಿ. ಇಬ್ಬರೂ ಕೂತು ಮಾತನಾಡಿ. ನಮಗೆ ಇಬ್ರೂ ಬೇಕು ಅಂತ ನನಗೂ ಹೇಳಿದರು. ಅದಕ್ಕೆ ಫೋನ್ ಮಾಡಿ ನಾನೇ ನಿನ್ನ ಕರೆದಿದ್ದು. ಈಗ ಏನ್ ಮಾಡೋಣ ಹೇಳಯ್ಯ ಶಿವಕುಮಾರ್…
ಬಂಡೆ : ಸರ್, ನೀವು ಅವತ್ತು ಏನ್ ಹೇಳಿದ್ರಿ ಅದನ್ನು ಪಾಲಿಸಬೇಕು. ಅಷ್ಟೇ ನಾನು ಹೇಳೋದು.
ಟಗರು : ಶಿವಕುಮಾರ್ ಹಠ ಮಾಡಬೇಡ ಕಣಯ್ಯ. ನಿನ್ನೋಳ್ಳೇದಕ್ಕೆ ಹೇಳೋದು. ನಿನಗಿಂತ ನನಗೆ ರಾಜಕೀಯ ಅನುಭವ ಜಾಸ್ತಿ ಇದೆ.
ಬಂಡೆ : ಸಾರ್ ಅದೆಲ್ಲಾ ಬೇಡ. ಮಾತು ಅಂದ್ರೆ ಮಾತು. ಅಲ್ದೇ ಒಂದು ವೇಳೆ ನಾನು ಮುಖ್ಯಮಂತ್ರಿ ಆಗದಿದ್ದರೆ ನಮ್ಮ ಒಕ್ಕಲಿಗರು ಬಹಳ ಕೋಪ ಮಾಡಿಕೊಂಡು ಕಾಂಗ್ರೆಸ್ ನಿಂದ ಶಾಶ್ವತವಾಗಿ ದೂರ ಹೋಗ್ತಾರೆ ಅಷ್ಟೇ.
ಟಗರು : ಏಯ್ ಕೇಳಪ್ಪ ಇಲ್ಲಿ. ಕಾಂಗ್ರೆಸ್ಸಿಗೆ ಒಕ್ಕಲಿಗರಿಗಿಂತ ಅಹಿಂದಾ ವರ್ಗದವರೇ ಮೊದಲಿನಿಂದಲೂ ಪಕ್ಕಾ ಬೆಂಬಲಿಗರು. ಒಕ್ಕಲಿಗರು, ಲಿಂಗಾಯಿತರು ಕ್ಯಾಂಡಿಡೇಟ್ ನೋಡಿಕೊಂಡು ಆ ಕಡೆನೂ ಹೋಗ್ತಾರೆ, ಈ ಕಡೆನೂ ಹೋಗ್ತಾರೆ. ಈಗ ಅದೆಲ್ಲಾ ಬೇಡ. ನಿನಗೂ ನನಗೂ ಎಲ್ಲ ಗೊತ್ತಿರೋದೆ. ಹೋಗ್ಲಿ ಒಂದು ಕೆಲಸ ಮಾಡು. ಈ ಸಾರಿ ಬಜೆಟ್ ನಾನೇ ಮಂಡಿಸ್ತೀನಿ. ಅದಾದ್ಮೇಲೆ ಮೇ, ಜೂನ್ ಅಷ್ಟೊತ್ತಿಗೆ ನಿನಗೆ ಬಿಟ್ಟು ಕೊಡ್ತೀನಿ. ಇನ್ನೂ ಎರಡು ವರ್ಷ ಇರುತ್ತೆ.
ಬಂಡೆ : ಸಾರ್ ಅದೆಲ್ಲಾ ಬೇಡ. ಕೊಟ್ಟ ಮಾತು ಉಳಿಸಿಕೊಳ್ಳಿ. ದಯವಿಟ್ಟು ನನಗೆ ಅಧಿಕಾರ ಬಿಟ್ಟುಕೊಡಿ. ನೀವೇನ್ ಹೇಳ್ತೀರೋ ಹಂಗೇ ಕೇಳ್ತೀನಿ. ನೀವು ಯಾರಿಗೆ ಹೇಳ್ತಿರೋ ಅವರು ಕೆಪಿಸಿಸಿ ಪ್ರೆಸಿಡೆಂಟ್ ಆಗಲಿ. ಉಪಮುಖ್ಯಮಂತ್ರಿಯಾಗಿ ನಿಮ್ಮ ಕಡೆಯವರೇ ಇರಲಿ. ನಿಮ್ಮ ಮಗನಿಗೂ ಕೂಡ ಒಳ್ಳೆ ಪೋರ್ಟ್ಫೋಲಿಯೋ ಕೊಡೋಣ. ನೋಡಿ ಈ ತಮ್ಮನ ಮೇಲೆ ಕೃಪೆ ತೋರಿ ಆಶೀರ್ವಾದ ಮಾಡಿ.
ಟಗರು : ನೀನೇನಯ್ಯ ಇಲ್ಲಿ ಬಂಡೆ ತರ ಗಟ್ಟಿಯಾಗಿ ಅದೇ ಹಠ ಮಾಡ್ತಿದ್ದೀಯಾ. ಹೋಗ್ಲಿ ಒಂದು ಕೆಲಸ ಮಾಡೋಣ. ಈಗ ಪ್ರೆಸ್ ಮೀಟ್ ಮಾಡಿ ಇಬ್ಬರೂ ಏನು ಆಗಿಲ್ಲ, ನಾವಿಬ್ರೂ ಒಂದೇ ಅಂತ ಹೇಳಿ ಎಲ್ಲ ಜವಾಬ್ದಾರಿನೂ ಹೈಕಮಾಂಡ್ ಮೇಲೆ ಹಾಕ್ಬಿಡೋಣ. ಅವರೇ ಡಿಸೈಡ್ ಮಾಡ್ಲಿ. ಈಗ ಸೆಷನ್ ಮುಗಿಯೋವರೆಗೂ ಈ ಸಬ್ಜೆಕ್ಟ್ ಮಾತಾಡೋದೇ ಬೇಡ ಏನಂತೀಯಾ.
ಬಂಡೆ : ಆಯ್ತು ಸಾರ್. ಸೆಷನ್ ಮುಗೀಲಿ. ನನಗೇನು ಆತುರ ಇಲ್ಲ. ಆದರೆ ನೀವು ಯಾವಾಗ ಬಿಟ್ಟು ಕೊಡ್ತೀರಾ ಅದನ್ನ ಕನ್ಫರ್ಮ್ ಆಗಿ ಹೇಳಿ.
ಟಗರು : ನೋಡಯ್ಯ ನನಗೂ ರಾಜಕೀಯ ಸಾಕಾಗಿದೆ. ಬೇಗ ಬಿಟ್ಕೊಡ್ತೀನಿ. ಆದ್ರೆ ಬೆಂಬಲಿಗರ ಎಲ್ಲಾ ಇದ್ದಾರಲ್ಲ. ಅವರನ್ನು ಸಮಾಧಾನ ಮಾಡ್ಲಿಲ್ಲ ಅಂದ್ರೆ ನಿನಗೂ ನೆಮ್ಮದಿಯಾಗಿ ಆಡಳಿತ ಮಾಡೋಕೆ ಬಿಡೋದಿಲ್ಲ. ರಾಜಕೀಯ ಅಷ್ಟು ಒಳ್ಳೆಯದಾಗಿಲ್ಲ ಶಿವಕುಮಾರ್. ತುಂಬಾ ಕಷ್ಟ.
ಬಂಡೆ : ನನಗೂ ಗೊತ್ತಲ್ಲ ಸಾರ್. ಏನೋ ಸಾಯೋ ಮೊದ್ಲು ನಿಮ್ಮ ಆಶೀರ್ವಾದದಿಂದ ಒಂದು ಸಾರಿ ಮುಖ್ಯಮಂತ್ರಿಯಾಗೋಣ. ದಯವಿಟ್ಟು ಇಲ್ಲ ಅನ್ನಬೇಡಿ. ನಡೀರಿ. ಈಗ ಪ್ರೆಸ್ ಮೀಟ್ ಮಾಡೋಣ. ಸೆಷನ್ ಮುಗಿಸಿ ಡೆಲ್ಲಿಗೆ ಹೋಗಿ ಸೆಟ್ಲ್ ಮಾಡೋಣ. ಆದರೆ ನೀವು ಕೊಟ್ಟ ಮಾತು ಮಾತ್ರ ಮರೀಬೇಡಿ. ತಮ್ಮ ಅಂತ ತಿಳ್ಕೊಂಡು ಆಶೀರ್ವಾದ ಮಾಡಿ. ನಾನು ನಿಮಗೆ ಯಾವಾಗಲೂ ಋಣಿಯಾಗಿ ಇರ್ತೇನೆ.
ಟಗರು : ಆಯ್ತು ನೋಡೋಣ ಬಿಡಯ್ಯ ಏನಾಗುತ್ತೊ ಆಗಲಿ. ನಡಿ ಹೋಗೋಣ.
ಬಂಡೆ : ಆಯ್ತು ಸರ್, ನಾನಂತೂ ದೇವರನ್ನು ನಂಬಿದ್ದೇನೆ. ದೇವರು ನನ್ನ ಕೈ ಬಿಡಲ್ಲ. ನಿಮಗೂ ಒಳ್ಳೆಯದು ಮಾಡಲಿ ನಡ್ರಿ…
ಟಗರು : ದೇವರು ಇಲ್ಲ, ದಿಂಡರು ಇಲ್ಲ, ನಾನು, ನೀನು ಹೈಕಮಾಂಡ್ ಇಷ್ಟೇ. ಆಯ್ತು ಒಳ್ಳೆದಾಗುತ್ತೆ ನಡಿ.
ಇಬ್ಬರು ಪತ್ರಿಕಾಗೋಷ್ಠಿಗೆ ಬಂದು ಏನು ಮಾತನಾಡಿದಿರೋ ನೀವೆಲ್ಲಾ ನೇರವಾಗಿ ನೋಡಿದ್ದೀರಿ.
ಪ್ರಹಸನ ಮುಕ್ತಾಯ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ