ಸಂಪೂರ್ಣ ಮದ್ಯಪಾನ ನಿಷೇಧ ಕಷ್ಟವೇ ?

ಮತ್ತೆ ಮಧ್ಯಪಾನ ನಿಷೇಧ ಹೋರಾಟ ಜೋರಾಗಿ ಕೇಳಿ ಬರುತ್ತಿದೆ. ಯಾವುದೇ ನಾಗರೀಕ ಸಮಾಜ ಅದರಲ್ಲೂ ಭಾರತದಂತ ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆಯ ದೇಶದಲ್ಲಿ ಮದ್ಯಪಾನವೆಂಬುದು ಬೃಹತ್ ಉದ್ಯಮವಾಗಿದೆ ಎಂಬುದೇ ನಾಚಿಕೆ ಪಟ್ಟುಕೊಳ್ಳಬೇಕಾದ ವಿಷಯ. ಅದನ್ನು ನಿಷೇಧ ಮಾಡುವುದು ಕೇಂದ್ರ ಮತ್ತು ಬಹುತೇಕ ರಾಜ್ಯ ಸರ್ಕಾರಗಳಿಗೆ ತುಂಬಾ ತುಂಬಾ ಕಷ್ಟ ಎನಿಸುತ್ತದೆ. ಏಕೆಂದರೆ ಅದು ನೀಡುವ ಆದಾಯ ಬಜೆಟ್ಟಿನ ಬಹುದೊಡ್ಡ ಭಾಗವಾಗಿರುತ್ತದೆ.
ಕರ್ನಾಟಕದಲ್ಲಂತೂ ಮದ್ಯಪಾನ ಲಾಬಿ ಮೊದಲಿನಿಂದಲೂ ಪ್ರಭಾವಶಾಲಿಯಾಗಿಯೇ ಕೆಲಸ ಮಾಡಿಕೊಂಡು ಬರುತ್ತಿದೆ.

ಹಾಗಾದರೆ ಸಂಪೂರ್ಣ ಸಾರಾಯಿ ನಿಷೇಧ ಕಷ್ಟವೇ ? ಹೌದು ಈ ಕ್ಷಣದಲ್ಲಿ ಸ್ವಲ್ಪ ಮಟ್ಟಿಗೆ ಕಷ್ಟ. ಆದರೆ ಕೆಲವು ಸಲಹೆ ಸೂಚನೆಗಳನ್ನು ಪಾಲಿಸಿದರೆ ನಿಧಾನವಾಗಿ ಸಂಪೂರ್ಣ ಪಾನ ನಿಷೇಧದತ್ತ ಸಾಗಬಹುದು.

1) ಸಂಪೂರ್ಣ ಪಾನ ನಿಷೇಧ ಜಾರಿಯಾಗಲು ಹತ್ತು ವರ್ಷಗಳಷ್ಟು ದೀರ್ಘ ಕಾಲಾವಧಿಯ ಯೋಜನೆಯನ್ನು ರೂಪಿಸಬೇಕು. ಹಂತ ಹಂತವಾಗಿ ವರ್ಷಕ್ಕೆ ಶೇಕಡಾ ಹತ್ತರಷ್ಟು ಅನುಮತಿಯನ್ನು, ಕ್ರಮಬದ್ಧವಾಗಿ ಕೆಲವು ಮಾನದಂಡಗಳನ್ನು ಉಪಯೋಗಿಸಿ ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶದವರೆಗೆ ಹಿಂಪಡೆಯಬೇಕು.

ಹೀಗೆ ಮಾಡುವ ಮುಖಾಂತರ ನಿಧಾನವಾಗಿ ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸಬೇಕು ಹಾಗೂ ಈ ಉದ್ಯೋಗದಲ್ಲಿ ಅವಲಂಬಿತರಾದವರಿಗೆ ಪರ್ಯಾಯ ಔದ್ಯೋಗಿಕ ಮಾರ್ಗಗಳನ್ನು ಸೃಷ್ಟಿಸಬೇಕು. ಅವರನ್ನು ನಿರುದ್ಯೋಗಿಗಳಾಗಲು, ಅವರ ಜೀವನ ಕಷ್ಟಕ್ಕೆ ಸಿಲುಕಲು ಬಿಡಬಾರದು.

ಇದರಿಂದಾಗಿ ಸರ್ಕಾರದ ಆದಾಯವು ಸಹ ದಿಢೀರನೆ ಕುಸಿಯುವುದಿಲ್ಲ. ಸಣ್ಣ ಪ್ರಮಾಣದ ಕುಸಿತ ಉಂಟಾಗಬಹುದು. ಅದನ್ನು ಸರಿದೂಗಿಸಲು ಅನ್ಯ ಮಾರ್ಗಗಳು ಇರುತ್ತವೆ.

2) ಪಾನ ನಿಷೇಧ ಕೇವಲ ನಿಷೇಧ ಮಾತ್ರವಾಗಿರದೆ ಸಾಧ್ಯವಾದಷ್ಟು ಆರೋಗ್ಯಪೂರ್ಣವಾದ, ಆರೋಗ್ಯಕ್ಕೆ ಹಾನಿಕಾರಕವಲ್ಲದ ಅದೇ ರೀತಿಯ ಕೆಲವು ಪಾನೀಯಗಳನ್ನು ಹೆಚ್ಚು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುಖಾಂತರ ಜನರ ಆರೋಗ್ಯ ಮತ್ತು ಆದಾಯವನ್ನು ಸರಿದೂಗಿಸಲು ಪ್ರಯತ್ನಿಸಬೇಕು.

3) ಒಂದು ವೇಳೆ ವಿದೇಶಿಯರಿಗಾಗಿ ಅಥವಾ ಪ್ರವಾಸೋದ್ಯಮ ದೃಷ್ಟಿಯಿಂದ ಸಣ್ಣ ಪ್ರಮಾಣದಲ್ಲಿ ಮದ್ಯಪಾನವನ್ನು ಅದರಲ್ಲೂ ವಿದೇಶಿ ಮದ್ಯವನ್ನು ಅನುಮತಿ ನೀಡುವುದು ಕಾನೂನಾತ್ಮಕವಾಗಿ ಅಥವಾ ವ್ಯಾವಹಾರಿಕವಾಗಿ ಕಡ್ಡಾಯವಾದರೆ ಅದಕ್ಕಾಗಿ ಬಿಗಿಯಾದ ನಿಯಮಗಳನ್ನು ರೂಪಿಸಿ ಅಲ್ಲಿ ಕೆಲವು ಕಡೆ ಮಾತ್ರ ಸಿಗುವಂತೆ ಮಾಡಬೇಕು.

3) ಮದ್ಯಪಾನ ಸಂಪೂರ್ಣ ನಿಷೇಧ ಜಾರಿಯಾಗುವವರೆಗೂ ಅಕ್ರಮ ಮದ್ಯವನ್ನು
ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

4) ಒಂದು ವೇಳೆ ಮಧ್ಯಪಾನ ನಿಷೇಧಿಸುವುದು ತುಂಬಾ ಕಷ್ಟದ ಕೆಲಸವಾದರೆ ಮದ್ಯಪಾನದಲ್ಲಿರುವ ಆಲ್ಕೋಹಾಲ್ ಕಂಟೆಂಟ್ ಅನ್ನು ವೈದ್ಯರ ಸಲಹೆ ಮೇರೆಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇಟ್ಟು ತಯಾರ ಮಾಡುವಂತೆ ನೋಡಿಕೊಳ್ಳಬೇಕು.

5) ಇದಲ್ಲದೆ ಇನ್ನೂ ಅನೇಕ ರೀತಿಯ ಉಪಯುಕ್ತ ಸಲಹೆಗಳು ಬೇರೆ ಮೂಲಗಳಿಂದ ಖಂಡಿತ ಸಿಗುತ್ತದೆ. ಅದಕ್ಕಾಗಿ ವೈದ್ಯರು, ಮಾನಸಿಕ ತಜ್ಞರು, ಪೊಲೀಸರು, ಕಾನೂನು ತಜ್ಞರು, ಆಡಳಿತ ತಜ್ಞರು, ಮಧ್ಯಪಾನ ವಿರೋಧಿ ಸದಸ್ಯರು ಮುಂತಾದ ಎಲ್ಲಾ ಪರಿಣಿತರನ್ನು ಒಳಗೊಂಡ ಒಂದು ಅಧ್ಯಯನ ಸಮಿತಿ ರಚಿಸಬೇಕು. ಅದರ ವರದಿಯನ್ನು ತರಿಸಿಕೊಂಡು ಜಾರಿಗೊಳಿಸಲು ಪ್ರಯತ್ನಿಸಬೇಕು. ಜೊತೆಗೆ ನಿರಂತರವಾಗಿ ಸಲಹೆ ಸೂಚನೆ ನೀಡಲು ಆ ತಜ್ಞರ ಸಮಿತಿಗೆ ಒಂದು ಕಾನೂನಾತ್ಮಕ ಶಾಶ್ವತು ಆಯೋಗದ ಮಾನ್ಯತೆ ನೀಡಬೇಕು.

ವಾಸ್ತವವಾಗಿ ಮದ್ಯಪಾನ ಸಂಪೂರ್ಣ ನಿಷೇಧ ಮಾಡಿ ಎಂದು ಸಾರ್ವಜನಿಕರು ಸರ್ಕಾರವನ್ನು ಬೇಡಿಕೊಳ್ಳುವ ಸ್ಥಿತಿ ಬರಬಾರದು. ಏಕೆಂದರೆ ಸಾರ್ವಜನಿಕರಿಗಿಂತ ಹೆಚ್ಚು ಬುದ್ಧಿವಂತರು, ಅಧಿಕಾರ ಹೊಂದಿರುವವರು, ಸಮಾಜದ ಗಣ್ಯ ವ್ಯಕ್ತಿಗಳು, ಜವಾಬ್ದಾರಿ ಇರುವವರು ಸರ್ಕಾರದ ಮೂರೂ ಅಂಗಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಅದು ಅವರ ಜವಾಬ್ದಾರಿ. ಇದನ್ನು ಅವರು ಕಡ್ಡಾಯವಾಗಿ ಮಾಡಲೇಬೇಕು. ಇದನ್ನು ಮಾಡದೇ ಅಭಿವೃದ್ಧಿ, ಸಾಮಾಜಿಕ ಸಮಾನತೆ, ಸಾಮಾಜಿಕ ನ್ಯಾಯ ಎಲ್ಲವೂ ನಿಷ್ಪಲವಾಗುತ್ತದೆ.

ಕೆಲವೊಮ್ಮೆ ಕೆಲವು ವಿಚಾರವಾದಿಗಳು ಪಾನ ನಿಷೇಧ ಸರ್ವಾಧಿಕಾರಿ ಧೋರಣೆ. ಪ್ರಜಾಪ್ರಭುತ್ವದ ಮೌಲ್ಯಗಳ ಅಡಿಯಲ್ಲಿ ಪಾನ ಅವರವರ ಆಯ್ಕೆಗೆ ಬಿಟ್ಟದ್ದು. ಭಾರತದ ಸಂಸ್ಕೃತಿ ಸಂಪ್ರದಾಯಲ್ಲಿ ಪುರಾಣ ಕಾಲದಿಂದ, ಇತಿಹಾಸ ಕಾಲದಿಂದ ಸುರಪಾನದ ಬಗ್ಗೆ ಎಲ್ಲ ಕಡೆಗಳಲ್ಲೂ ಉಲ್ಲೇಖಗಳಿವೆ. ಇದೀಗ ಆ ಸುಖದಿಂದ ನಮ್ಮನ್ನು ವಂಚಿತಗೊಳಿಸಬೇಡಿ. ಅದರ ಆಯ್ಕೆಯನ್ನು ಸಾರ್ವಜನಿಕರಿಗೇ ಬಿಡಿ ಎಂದು ವಾದಿಸುವವರಿದ್ದಾರೆ.

ಹಾಗೆಯೇ ಮದ್ಯಪಾನದಿಂದ ನಾಶವಾದ ವ್ಯಕ್ತಿಗಳು, ಕುಟುಂಬಗಳು, ಅದರಿಂದಾಗುವ ಅಪರಾಧಗಳು, ಆತ್ಮಹತ್ಯೆಗಳು ಅನಾರೋಗ್ಯಗಳು ಇವುಗಳ ಬಗ್ಗೆ ದೊಡ್ಡ ಪಟ್ಟಿ ನೀಡುವ ಹೋರಾಟಗಾರರೂ ಇದ್ದಾರೆ.

ಅದಕ್ಕಾಗಿ ಒಂದು ತಜ್ಞರ ಸಮಿತಿಯೇ ಇದನ್ನು ನಿರ್ಧರಿಸಲಿ. ಜೊತೆಗೆ ಇದರ ಇನ್ನೊಂದು ಸಾಧ್ಯತೆಯನ್ನೂ ಪರಿಶೀಲಿಸೋಣ….

ಈ ವಿಷಯದಲ್ಲಿ ನಗುವುದೋ ಅಳುವುದೋ ಅರ್ಥವಾಗುತ್ತಿಲ್ಲ. ಏಕೆಂದರೆ,

ಖಂಡಿತ ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಸಂಪೂರ್ಣ ಪಾನ ನಿಷೇಧ ಕರ್ನಾಟಕ ಸರ್ಕಾರ ಮಾಡುವುದೇ ಇಲ್ಲ. ಬಹುತೇಕ ಇದು ಸ್ಪಷ್ಟ. ನಮ್ಮ ಇಡೀ ಸಮಾಜವೇ ಹಣ, ಅಧಿಕಾರ, ಮತ್ತಿನ ಹಿಂದೆ ಬಿದ್ದಿದೆ. ಆರೋಗ್ಯ ಮತ್ತು ಮೌಲ್ಯಗಳು ಹೆಚ್ಚು ಕಡಿಮೆ ಪಾಳು ಬಿದ್ದಿದೆ. ಈ ಹೋರಾಟಗಳು ಕೇವಲ ಸಾಂಕೇತಿಕ.

ಇನ್ನು ಕುಡುಕರು ಮತ್ತು ಅದರ ಮಾರಾಟಗಾರರು ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿದೆ, ಏಕೆಂದರೆ ಅಮಲನ್ನು ಮಾರುವ ಮತ್ತು ಕುಡಿದು ಸಂಭ್ರಮಿಸುವ ವಿಕೃತವನ್ನು ಉದ್ಯೋಗವನ್ನಾಗಿಸಿಕೊಂಡಿರುವುದಕ್ಕೆ.

ಸರ್ಕಾರ ಇದನ್ನು ಅಧೀಕೃತ ಮಾಡಿರುವುದು ಮತ್ತು ಅದನ್ನು ‌ನಾವೆಲ್ಲಾ ಸಹಿಸುತ್ತಿರುವುದು ಇನ್ನೊಂದು ದುರಂತ…..

ಮದ್ಯಪಾನ ಸರ್ಕಾರದ ಬೊಕ್ಕಸಕ್ಕೆ ಹಣ ತರುತ್ತದೆ ಮತ್ತು ಅದೇ ಜನರ ಆರೋಗ್ಯ ಹಾಗು ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ. ಆದರೆ ಇದರ ಇನ್ನೊಂದು ಮುಖವೆಂದರೆ ಹಾಳಾಗುವ ಬಹುತೇಕ ಜನರು ಬಡವರೇ ಆಗಿರುತ್ತಾರೆ. ಅವರಿಗೆ ದೊರೆಯುವುದು ಅತಿಹೆಚ್ಚು ವಿಷಕಾರಿ ಮದ್ಯಪಾನ ಮತ್ತು ಅತ್ಯಂತ ಕಡಿಮೆ ದರ್ಜೆಯ ವೈದ್ಯಕೀಯ ಸೌಲಭ್ಯ. ಜೊತೆಗೆ ಬದುಕಿನ ಏರಿಳಿತಗಳ ಮೇಲೆ ನಿಯಂತ್ರಣವೂ ಇರುವುದಿಲ್ಲ. ಅದರಿಂದ ಮಾನಸಿಕ ಅಸ್ವಸ್ಥತೆ ಉಂಟಾಗಿ ಇನ್ನೂ ಹೆಚ್ಚು ಕುಡಿತಕ್ಕೆ ದಾಸರಾಗುತ್ತಾರೆ.

ವೈಯಕ್ತಿಕವಾಗಿ ಹೇಳಬೇಕೆಂದರೆ ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಎಲ್ಲಾ ರೀತಿಯ ಒಳಿತು ಕೆಡುಕುಗಳು ಇದ್ದೇ ಇರುತ್ತವೆ.

ಸರ್ಕಾರದಿಂದ ಯಾವುದೇ ಒತ್ತಾಯವಿಲ್ಲದ ಈ ಮದ್ಯಪಾನ ಅವರವರ ಇಚ್ಚೆಗೆ ಒಳಪಡುವುದರಿಂದ ಸರ್ಕಾರ ಏನಾದರೂ ಮಾರಾಟ ಮಾಡಲಿ, ಎಷ್ಟಾದರೂ ಮಾರಾಟ ಮಾಡಲಿ ನಾವು ಸ್ವಯಂ ನಿಯಂತ್ರಣ ಸಾಧಿಸಿ ಈ ದುರಾಭ್ಯಾಸಗಳಿಂದ ದೂರವಿರುವುದು ಅತ್ಯುತ್ತಮ ವಿಧಾನ ಎನಿಸುತ್ತದೆ.

ಈ ಮತಿಹೀನ ಭ್ರಷ್ಟ ಸರ್ಕಾರಗಳಿಗೆ ಬುದ್ದಿ ಹೇಳುವುದಕ್ಕಿಂತ ನಮ್ಮ ಜನಗಳಿಗೆ ತಿಳಿವಳಿಕೆ ನೀಡಿ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮುಂತಾದ ಕಡೆ ಜನ ಪ್ರತಿನಿಧಿಗಳೇ ಇದನ್ನು ಬಹಿಷ್ಕರಿಸಿದರೆ ವ್ಯಾಪಾರವಿಲ್ಲದೆ ಮದ್ಯಪಾನ ಅಂಗಡಿಗಳು ತಾನೇ ತಾನಾಗಿ ಮುಚ್ಚುತ್ತವೆ. ಅದನ್ನು ತಯಾರು ಮಾಡುವವರು ಮತ್ತು ಮಾರಾಟ ಮಾಡುವವರನ್ನು ಕೀಳಾಗಿ ಕಂಡರೆ ಇಡೀ ಕುಡಿತದ ಉದ್ಯಮವೇ ಕುಸಿಯುತ್ತದೆ.

ಇದು ಒಂದು ಸಾಮೂಹಿಕ ಚಳವಳಿಯಾಗಿ ರೂಪಗೊಳ್ಳಲಿ.

ನಿಮಲ್ಲಿ ಒಂದಷ್ಟು ಮಾನವೀಯ ಗುಣವಿದ್ದರೆ, ಸಮಾಜದ ಬಗ್ಗೆ ಸ್ವಲ್ಪ ಪ್ರೀತಿ ಇದ್ದರೆ ಕುಡಿತವನ್ನು ಇಂದಿನಿಂದಲೇ ಬಹಿಷ್ಕರಿಸಿ ಮತ್ತು ನಿಮ್ಮ ನಿಯಂತ್ರಣದಲ್ಲಿರುವ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಿ.

ನಾನು ಇಲ್ಲಿಯವರೆಗೂ ಒಮ್ಮೆಯೂ ಮದ್ಯಪಾನ ಮಾಡಿಲ್ಲ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!