
ದೊಡ್ಡಬಳ್ಳಾಪುರ: ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ನವಜಾತಾ ಶಿಶುವನ್ನು ದೊಡ್ಡಬಳ್ಳಾಪುರ ತಾಯಿ-ಮಗು ಆಸ್ಪತ್ರೆಯ ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸಿದ್ದಾರೆ. ವೈದ್ಯರ ಸಮಯಪ್ರಜ್ಞೆ ಹಾಗೂ ಸೇವಾ ಮನೋಭಾವಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಅಕ್ಟೋಬರ್ 7ರ ಮುಂಜಾನೆ ಉತ್ತರ ಪ್ರದೇಶದ ಆದರ್ಶ ಮತ್ತು ಗುಡಿಯ ಕುಮಾರಿ ದಂಪತಿಯ 19 ದಿನಗಳ ಶಿಶು ಉಸಿರಾಟ ಇಲ್ಲದೆ, ತನ್ನ ದೇಹದ ಸಂಪೂರ್ಣ ಸ್ವಾಧೀನ ಕಳೆದುಕೊಂಡ ಸ್ಥಿತಿಯಲ್ಲಿತ್ತು. ಕೂಡಲೇ ಆಸ್ಪತ್ರೆ ಆಂಬುಲೆನ್ಸ್ ಚಾಲಕ ಮಧು ಸ್ಥಳಕ್ಕೆ ಧಾವಿಸಿ ಮಗುವನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ತಲುಪಿಸಿದ್ದರು. ಪೋಷಕರೇ ನಮ್ಮ ಮಗು ನಮ್ಮ ಪಾಲಿಗಿಲ್ಲ ಎಂದು ಕೈಚಲ್ಲಿ ಕೂತಿದ್ದರು. ಆದರೆ, ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಗಾಯತ್ರಿ. ಸಹ ವೈದ್ಯರಾದ ಲಲಿತಾ, ಶ್ರುಶುಷಕಾಧಿಕಾರಿಗಳಾದ ಶೋಭಾ, ಲಾವಣ್ಯ ರವರ ಸಹಕಾರದೊಂದಿಗೆ ಕೂಡಲೇ ಕಾರ್ಯ ಪ್ರವೃತ್ತರಾಗಿ ತಮ್ಮ ಸೇವಾ ನಿಷ್ಠೆ ಮರೆಯದೇ ಮಗುವನ್ನು ಎನ್.ಬಿ.ಎಸ್.ಯು(NBSU) ತುರ್ತು ಘಟಕಕ್ಕೆ ರವಾನಿಸಿ ಅವಶ್ಯಕ ತುರ್ತು ಚಿಕಿತ್ಸೆ ನೀಡಿ ಮಗು ಮತ್ತೆ ಉಸಿರಾಡುವಂತೆ ಮಾಡಿದ್ದಾರೆ.
ಮಗುವಿನ ಉಸಿರಾಟದ ಸ್ಥಿತಿ ಹತೋಟಿಗೆ ಬಂದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ರವಾನಿಸಿದ್ದರು. ಇಂದು ಮಗು ಸಂಪೂರ್ಣ ಚೇತರಿಕೆ ಕಂಡು ತನ್ನ ಮನೆಗೆ ಹಿಂದಿರುಗಿದೆ. ಜೀವ ಉಳಿಸಿದ ಸಾರ್ವಜನಿಕ ಆಸ್ಪತ್ರೆ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಪೋಷಕರು ಅಭಿನಂದನೆ ಸಲ್ಲಿಸಿದ್ದು, ಸಾಮಾಜಿಕ ವಲಯದಲ್ಲಿ ವೈದ್ಯರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.