
ಕೃಷಿ ಕೆಲಸ ಕಷ್ಟದ ಕೆಲಸ. ವ್ಯವಸಾಯ ಮನೆ ಮಕ್ಕಳೆಲ್ಲಾ ಸಾಯ. ರೈತರಿಗೆ ಪ್ರತಿ ತಿಂಗಳಿಗೆ ಸಂಬಳ ಬರುವುದಿಲ್ಲ, ನಿವೃತ್ತಿ ಬಳಿಕ ಪೆನ್ಷನ್ ಬರುವುದಿಲ್ಲ. ಹೀಗಾಗಿ ರೈತರಿಗೆ ಹೆಣ್ಣು ಕೊಡಲು ಜನ ಯೋಚಿಸುತ್ತಿರುವ ಕಾಲದಲ್ಲಿ ರೈತನದ್ದು ಸ್ವಾಭಿಮಾನದ ಜೀವನ. ರೈತ ಅನ್ನದಾತ, ರೈತ ಕೊಡುವವನೇ ಹೊರತು ಬೇಡುವವನಲ್ಲ ಎಂದು ನಂಬಿದ ಪದವೀಧರೆ ಕೃಷಿಕನನ್ನು ಮದುವೆಯಾಗಿ ಇಬ್ಬರು ಮಕ್ಕಳಿಗೆ ತಾಯಿಯಾಗಿ ಮುಂದೆ ತಾನೇ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡಿರುವ ತಾಜಾ ಉದಾಹರಣೆ ನಮ್ಮ ದೊಡ್ಡಬಳ್ಳಾಪುರದಲ್ಲಿದೆ…

ಯೆಸ್, ಹೆಣ್ಣು ಹೆತ್ತ ತಂದೆ-ತಾಯಿ ತನ್ನ ಮಗಳನ್ನು ಚೆನ್ನಾಗಿ ಓದಿಸಿ, ಮುದ್ದಾಗಿ ಸಾಕಿ, ಮಗಳು ಸುಖವಾಗಿ ಇರಲೆಂದು ಸರ್ಕಾರಿ ಕೆಲಸ, ಸಾಫ್ಟ್ ವೇರ್ ಉದ್ಯೋಗಿ, ಒಳ್ಳೆ ದುಡ್ಡುಕಾಸು ಇರುವವನಿಗೆ ಕೊಟ್ಟು ಮದುವೆ ಮಾಡಿಕೊಡಬೇಕು ಎಂದು ಸದಾ ಚಿಂತನೆ ಮಾಡುತ್ತಿರುತ್ತಾರೆ. ರೈತನಿಗೆ ಹೆಣ್ಣು ಸಿಗುವುದು ಅಪರೂಪ, ಅಂತಹದರಲ್ಲಿ ಇಲ್ಲೊಬ್ಬ ತಂದೆತಾಯಿ ಬಿಕಾಂ ಪದವೀಧರೆಯನ್ನು ರೈತನಿಗೆ ಕೊಟ್ಟು ಮದುವೆ ಮಾಡುತ್ತಾರೆ. ಕೃಷಿಕನನ್ನು ಕಟ್ಟಿಕೊಂಡ ಪದವೀಧರೆ ಯಾವ ಕಾರ್ಪೋರೇಟ್ ಕೆಲಸಕ್ಕೆ ಹೋಗದೇ, ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸದೇ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಗಂಡನ ಜೊತೆ ಕೃಷಿಯಲ್ಲಿ ಭಾಗಿಯಾಗಿ, ಕೃಷಿ ಕೆಲಸವನ್ನು ಕಲಿತು, ಇದೀಗ ಗಂಡನ ಸಹಾಯ ಪಡಿಯದೇ ತಾನೇ ಬೆಳೆಗಳನ್ನು ಬೆಳೆದು ಅದರಲ್ಲಿ ಯಶಸ್ಸು ಕಂಡು ಲಕ್ಷ ಲಕ್ಷ ಆದಾಯ ಪಡೆಯುತ್ತಿದ್ದಾರೆ.

ಹೌದು… ಕೃಷಿಯಲ್ಲಿ ಯಶಸ್ಸು ಕಂಡ ಹಲವು ಮಹಿಳೆಯರಿದ್ದಾರೆ. ಅವರಲ್ಲಿ ಕೆಲವರು ಸಾವಯವ ಕೃಷಿ, ಹೈನುಗಾರಿಕೆ ಮತ್ತು ವೈವಿಧ್ಯಮಯ ಬೆಳೆಗಳನ್ನು ಬೆಳೆಯುವ ಮೂಲಕ ಯಶಸ್ವಿಯಾಗಿದ್ದಾರೆ. ಅದೇರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಗ್ರಾಮದ ಪ್ರತಿಭಾನ್ವಿತ ರೈತ ಮಹಿಳೆ ಅನುಷಾ ಅರುಣ್(28) ಅವರ ಯಶಸ್ಸಿನ ಕಥೆ ಕೂಡ ಕೇಳಿ. ಬೈಕ್ ಏರಿದ್ರೆ ರೈಡರ್.. ಟ್ರ್ಯಾಕ್ಟರ್ ನಲ್ಲಿ ಕುಳಿತ್ರೆ ವಿಲೀಂಗ್. ಹಳ್ಳಿಯ ಪವರ್ ಫುಲ್ ಲೇಡಿ ಈಕೆ, ತೋಟಗಾರಿಕೆಯಲ್ಲಿ ಪ್ರಗತಿಪರ ರೈತ ಮಹಿಳೆಯಾಗಿ, ಹೈನುಗಾರಿಕೆಯಲ್ಲಿ ಸ್ವಾವಲಂಬಿ ಮಹಿಳೆ. ಮನೆಯಲ್ಲಿ ಪಕ್ಕಾ ಗೃಹಿಣಿ.. ತೋಟಕ್ಕೆ ಬಂದ್ರೆ ಶ್ರಮ ಜೀವಿ. ಪದವಿಧರೆಯಾಗಿದ್ರು ಕೃಷಿಯನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಈಕೆ ಯುವತಿಯರಿಗೆ ರೋಲ್ ಮಾಡಲ್ ಆಗಿದ್ದಾರೆ.

ಅನುಷಾ ಅವರು ಸರಿಸುಮಾರು 6 ಎಕರೆಯ ಭೂಮಿ ಹೊಂದಿದ್ದಾರೆ. ಇವರಿಗೆ ತಮ್ಮ ಹೊಲದಲ್ಲಿ ವ್ಯವಸಾಯ ಮಾಡಿ ಏನಾದರೂ ಉತ್ಪಾದಕ ಕೆಲಸ ಮಾಡಬೇಕೆಂಬ ಛಲವಿತ್ತು. ಈ ಹಿನ್ನೆಲೆ ಮೊದಲು ತನ್ನ ಗಂಡ ಅರುಣ್ ಸಹಾಯ ಪಡೆದುಕೊಂಡು ಕೃಷಿ ಚಟುವಟಿಕೆಗಳ ಬಗ್ಗೆ ಅರಿತು, ಈಗ ತಾನೇ ಸ್ವತಹ ಉಳುಮೆ ಮಾಡುವುದರಿಂದ ಹಿಡಿದು ಬೆಳೆ ಬೆಳೆದು ಫಸಲನ್ನು ಮಾರುಕಟ್ಟೆಗೆ ಹಾಕಿ ಲಕ್ಷಲಕ್ಷ ಹಣ ಎಣಿಸಿ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿ, ಎಲ್ಲರಿಂದ ಶಹಬ್ಬಾಸ್ ಎನಿಸಿಕೊಂಡಿದ್ದಾರೆ. ಕೃಷಿಯಲ್ಲಿ ಯಶಸ್ಸು ಕಾಣುತ್ತಿರುವ ಅನುಷಾ ತಮ್ಮ ಊರಿನ ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.

ಕೃಷಿ ಎಸಿ ರೂಂನಲ್ಲಿ ಕುಳಿತು ಲಕ್ಷಗಟ್ಟಲೇ ಹಣ ಎಣಿಸುವ ವೃತ್ತಿಯಲ್ಲ. ಕೃಷಿಯನ್ನು ಹೆಚ್ಚಾಗಿ ಪುರುಷರೇ ನೋಡಿಕೊಳ್ಳುತ್ತಾರೆ. ಇದಕ್ಕೆ ಸೆಡ್ಡು ಹೊಡೆದು ಮಹಿಳೆಯರೂ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ಸು ಕಾಣಬಹುದು ಎಂದು ಅನುಷಾ ಅವರು ಸಾಧಿಸಿ ತೋರಿಸಿದ್ದಾರೆ.

ಅನುಷಾ ಹಾಗೂ ಅರುಣ್ ದಂಪತಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಈಕೆ ಬೆಳಗ್ಗೆ ಸುಮಾರು 4 ಗಂಟೆಗೆ ಎದ್ದು, ಹಾಲು ಕರೆದು ಡೈರಿಗೆ ಹಾಕಿ, ಮನೆ ಕೆಲಸ ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸಿ, ಅತ್ತೆ, ಮಾವ, ಗಂಡನಿಗೆ ಹಾಗೂ ಸಂಬಂಧಿಕರಿಗೆ ಊಟ ಕೊಟ್ಟು, ನೇರವಾಗಿ ಹೊಲದ ಕಡೆ ನಡೆದು ಹೂ ಬಿಡಿಸಿ ಮಾರುಕಟ್ಟೆಗೆ ಹಾಕಿ ಮತ್ತೆ, ಹೊಲದಲ್ಲಿ ಬೆಳೆಗಳಿಗೆ ನೀರು ಹಾಯಿಸುವುದು, ಔಷಧಿ ಸಿಂಪಡಣೆ, ಉಳುಮೆ, ಕಳೆ ಕೀಳುವುದು ಹೀಗೆ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿ ಮತ್ತೆ ಸಾಯಂಕಾಲ ಹಾಲು ಕರೆದು ಡೈರಿಗೆ ಹಾಕಿ ಶಾಲೆಯಿಂದ ಬಂದ ಮಕ್ಕಳನ್ನು ಮುದ್ದಾಡಿ, ಅವರಿಗೆ ಸ್ವಲ್ಪ ಓದಿಸಿ ಮತ್ತೆ ಅಡುಗೆ ಮಾಡಿ ಎಲ್ಲರೊಟ್ಟಿಗೆ ಊಟ ಮಾಡಿ ಮಲಗುವಷ್ಟರಲ್ಲಿ ರಾತ್ರಿ ಹತ್ತಾಗುತ್ತದೆ. ಮತ್ತದೇ ಬೆಳಗ್ಗೆ ಎದ್ದ ಕೂಡಲೇ ಅದೇ ಕೆಲಸ.

ಸದ್ಯ ಅನುಷಾ ಅವರು ಒಂದೂವರೆ ಎಕರೆಯಲ್ಲಿ ರೋಜ್ (ಮಿರಾಬಲ್), ಮುಕ್ಕಾಲು ಎಕರೆಯಲ್ಲಿ ಟೊಮೆಟೊ, ಮುಕ್ಕಾಲು ಎಕರೆಯಲ್ಲಿ ಸೇವಂತಿಗೆ, ಅರ್ಧ ಎಕರೆಯಲ್ಲಿ ಅಡಿಕೆ ಹಾಕಿದ್ದಾರೆ. ಎಲ್ಲಾ ತರಕಾರಿ ಬೆಳೆಗಳನ್ನು ಬೆಳೆದು ಫಸಲನ್ನು ಸ್ವತಃ ತಾವೇ ಟ್ರ್ಯಾಕ್ಟರ್ ಗೆ ತುಂಬಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಾರೆ. ಟ್ರ್ಯಾಕ್ಟರ್ ನಲ್ಲಿ ಉಳುಮೆ ಮಾಡುವುದು, ಬೈಕ್, ಕಾರು, ಟೆಂಪೋ ಸೇರಿದಂತೆ ಇತರೆ ವಾಹನಗಳನ್ನು ಲೀಲಾಜಾಲವಾಗಿ ಚಲಾಯಿಸುವುದು ಇವರೇ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರೈತ ಮಹಿಳೆ ಅನುಷಾ, ನಮ್ಮ ಊರು ಮಾರಹಳ್ಳಿ, ನಾನು ಬಿಕಾಂ ಪದವೀಧರೆ, ಕಳೆದ ಒಂಬತ್ತು ವರ್ಷದಿಂದೆ ಗುರುಹಿರಿಯರ ನಿಶ್ವಯದಂತೆ ಹಾಡೋನಹಳ್ಳಿಯ ಕೃಷಿಕ ಕುಟುಂಬದಲ್ಲಿ ಜನಿಸಿರೋ ಅರುಣ್ ಅವರೊಂದಿಗೆ ಮದುವೆಯಾಯಿತು. ಮದುವೆಯಾದಗಿನಿಂದಲೂ ಗಂಡನ ಜೊತೆ ಕೃಷಿ ಮಾಡುತ್ತಿದ್ದೇನೆ. ನನ್ನ ಗಂಡ ಬೇರೆ ಕೆಲಸದಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಗಂಡನ ಸಹಾಯಪಡಿಯದೇ ನಾನೇ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ನನಗೆ ಯಾರ ಬಲವಂತವಿಲ್ಲ. ಕೃಷಿಯನ್ನು ಇಷ್ಟಾಪಟ್ಟು ಮಾಡುತ್ತಿದ್ದೇನೆ. ಕೃಷಿ ಮಾಡುವುದರಿಂದ ನನಗೆ ಮುಜುಗರವಿಲ್ಲ ಸಂತೋಷವಿದೆ ಎಂದು ಬಹಳ ಹೆಮ್ಮೆಯಿಂದ ಹೇಳಿದರು.

ನನ್ನ ಗಂಡ ರೈತ. ರೈತನನ್ನು ಮದುವೆಯಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ದೇಶದ ಬೆನ್ನೆಲೆಬು ರೈತ, ದೇಶಕ್ಕೆ ಅನ್ನ ಹಾಕೋ ರೈತ ಕಟ್ಟಿಕೊಂಡಿರುವ ಹೆಂಡತಿಗೆ ಹಾಕಲ್ವಾ…ಅದಕ್ಕೆ ಇಷ್ಟಾ ಪಟ್ಟು ರೈತನನ್ನು ಮದುವೆಯಾದೆ. ನಾನು ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿರುವುದರಿಂದ ನನ್ನ ಗಂಡ ಬೋರ್ ವೆಲ್ ಲಿಫ್ಟಿಂಗ್ ಕೆಲಸಕ್ಕೆ ಹೋಗುತ್ತಿದ್ದಾರೆ. ಕೃಷಿಯಲ್ಲಿ ಲಾಭನೂ ಇದೆ ನಷ್ಟನೂ ಇದೆ ಎದೆಗುಂದದೆ ಭೂಮಿ ತಾಯಿಯನ್ನು ನಂಬಿ ಬೆಳೀಬೇಕು. ನಾನು ಎಲ್ಲಾದರೂ ಕಂಪನಿಯಲ್ಲಿ ಕೆಲಸಕ್ಕೆ ಹೋಗಿದ್ದರು ಕನಿಷ್ಟ 10-15ಸಾವಿರ ಸಂಬಳ ಪಡೆಯುತ್ತಿದೆ. ಅದು ನಮ್ಮ ಮಕ್ಕಳ ಶಾಲೆಯ ಫೀಸ್ ಕಟ್ಟೋದಕ್ಕೆ ಆಗುತ್ತಿರಲಿಲ್ಲ. ಆದರೆ ಬೆಳೆಯಲ್ಲಿ ತಿಂಗಳಿಗೆ ಒಂದೂವರೆ ಲಕ್ಷ ಆದಾಯ ಪಡೆಯುತ್ತೇವೆ ಎಂದರು…

ನಂತರ ಅನುಷಾ ಗಂಡ ರೈತ ಅರುಣ್ ಮಾತನಾಡಿ, ಚೆನ್ನಾಗಿ ಓದಿರುವ ಹೆಣ್ಣನ್ನು ನನಗೆ ಮಾದುವೆ ಮಾಡಿದರು. ಬಿಸಲನ್ನೇ ನೋಡದ ನನ್ನ ಹೆಂಡತಿ ಈಗ ಕೃಷಿಯಲ್ಲಿ ಯಶಸ್ಸು ಕಂಡು ಎಲ್ಲರಿಗೂ ಮಾದರಿಯಾಗಿರುವುದು ನನಗೆ ಸಂತೋಷ ತಂದಿದೆ. ಮೊದಮೊದಲು ಕೃಷಿ ಮಾಡಬೇಕಾದರೆ ಅವರಿಗೆ ಕಷ್ಟ ಅನಿಸಿತು. ನಂತರ ಎಲ್ಲಾ ಕಲಿತನಂತರ ಈಗ ನನ್ನ ಉಪಸ್ಥಿತಿ ಇಲ್ಲದಿದ್ದರೂ ಬೆಳೆಗಳನ್ನು ಬೆಳೆಯುತ್ತಾರೆ. ನಾನು ಅನುಷಾ ಅವರನ್ನು ಮದುವೆಯಾಗುವುದಕ್ಕೆ ಪುಣ್ಯ ಮಾಡಿದ್ದೆ. ನನಗೆ ಒಳ್ಳೆ ಹೆಂಡತಿ ಸಿಕ್ಕಿದ್ದಾಳೆ. ರೈತನಗಿರುವ ಬೆಲೆ ಯಾವುದಕ್ಕೂ ಇಲ್ಲ. ಒಂದು ಎಕರೆ ಕೋಟಿಗಟ್ಟಲೇ ಬೆಲೆ ಬಾಳುತ್ತದೆ. ಇವತ್ತು ಜಮೀನು ಮಾರಿ ಸರ್ಕಾರಿ ಪಡೆಯುವ ಕಾಲ. ಅದೇ ಜಮೀನು ಇದ್ದು, ಇನ್ನು ಮೂವತ್ತು ಕಳೆದರೆ ಅದಕ್ಕೆ ಚಿನ್ನದ ಬೆಲೆ ಸಿಕ್ಕಿ ಅವರ ಮಕ್ಕಳು ಮೊಮ್ಮಕ್ಕಳಿಗೆ ಅನುಕೂಲವಾಗುತ್ತದೆ ಎಂಬುದು ಗೊತ್ತಿಲ್ಲ. ಆದ್ದರಿಂದ ಯಾರೂ ಜಮೀನು ಕಳೆದುಳ್ಳಬಾರದು ಎಂದರು.

ಒಟ್ಟಿನಲ್ಲಿ ಜಗತ್ತು ರೈತನಿಗೆ ನೀಡುವ ಗೌರವದಲ್ಲಿ ಬದಲಾಗಬೇಕಿದೆ. ಈ ರೈತನ ಚಿತ್ರ ಬಿಡಿಸಲು ಹೇಳಿದರೆ ಹರಕು ಪಂಚೆ ಉಟ್ಟು ಮೋಡ ನೋಡುತ್ತಿರುವ ರೈತರನ್ನು ಮಕ್ಕಳು ಚಿತ್ರಿಸುತ್ತಾರೆ. ಆದರೆ, ಇದು ಬದಲಾಗಬೇಕು ರೈತರ ಚಿತ್ರ ಬಿಡಿಸಲು ಹೇಳಿದರೆ ಎಸಿ ಕಾರ್ ನಲ್ಲಿ ಕೋಟ್ ಹಾಕಿ ಕುಳಿತು ಸೆಲ್ಫಿ ಕ್ಲಿಕ್ಕಿಸುವ ಚಿತ್ರವನ್ನು ಬಿಡಿಸುವಂತಾಗಬೇಕು.