ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಸಿಎಂ ಸಭೆ- ಸಭೆ ಮುಖ್ಯಾಂಶುಗಳು ಇಲ್ಲಿವೆ ಓದಿ….

ಕಬ್ಬು ಬೆಳೆಗಾರರ ಸಮಸ್ಯೆ ಕುರಿತಾಗಿ ಇಂದು ವಿಧಾನಸೌಧದ ಸಭಾಂಗಣದಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತುಗಳು

• ಕಬ್ಬು ಬೆಳೆಗಾರರಿಗೆ ನೆರವಾಗುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜವಾಬ್ದಾರಿಯಾಗಿದೆ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎಫ್ಆರ್‌ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರದ ಕಾರ್ಯ. ಕೇಂದ್ರ ಸರ್ಕಾರ ದಿನಾಂಕ 6-05-2025ರಲ್ಲಿ ಎಫ್ಆರ್‌ಪಿ ನಿಗದಿಪಡಿಸಿದೆ. ಈ ಎಫ್ಆರ್‌ಪಿಯಲ್ಲಿ ಸಾಗಾಟ ಮತ್ತು ಕಟಾವು ವೆಚ್ಚ ಸಹ ಸೇರಿದೆ. ಸಕ್ಕರೆಯ ಎಂಎಸ್‌ಪಿ ಹೆಚ್ಚಳ ಮಾಡುವಂತೆ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಸಲ್ಲಿಸಿದ್ದೇವೆ. ಇದೀಗ ಕೇಂದ್ರ ಸರ್ಕಾರ ಸಮಸ್ಯೆ ಹುಟ್ಟು ಹಾಕಿದೆ.

• ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯುನಿಟ್‌ಗೆ 60 ಪೈಸೆ ತೆರಿಗೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಮರು ಪರಿಶೀಲಿಸಲಾಗುವುದು.

* ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರಕ್ಕೆ ಪೂರಕವಾಗಿ ಎಂಎಸ್‌ಪಿ ದರ ಏರಿಸುತ್ತಿಲ್ಲ. 2019 ರಿಂದ ಕೇಂದ್ರ ಎಂಎಸ್‌ಪಿ ದರ ಏರಿಸಿಲ್ಲ. ಎಥೆನಾಲ್ ದರವನ್ನೂ ಏರಿಸಿಲ್ಲ. ನಮ್ಮ ಈ ಸಮಸ್ಯೆ ಬಗ್ಗೆಯೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಬೇಕು ಎಂದು ಕಾರ್ಖಾನೆ ಮಾಲೀಕರು ಒತ್ತಾಯಿಸಿದ್ದಾರೆ. ಎಂಎಸ್‌ಪಿ ದರ ಹೆಚ್ಚಿಸುವಂತೆ ಬಹಳ ಹಿಂದೆಯೇ ಕೇಂದ್ರಕ್ಕೆ, ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಇಲ್ಲಿಯವರೆಗೂ ಕೇಂದ್ರ ಸರ್ಕಾರ ಎಂಎಸ್‌ಪಿ ದರ ಹೆಚ್ಚಿಸಿಲ್ಲ. ರಾಜ್ಯ ಪ್ರತಿ‌ನಿಧಿಸುವ ಕೇಂದ್ರ ಮಂತ್ರಿಗಳೂ ಕಬ್ಬು ಬೆಳೆಗಾರರಿಗೆ ಎಂಎಸ್‌ಪಿ ದರ ಹೆಚ್ಚಿಸುವುದಕ್ಕೆ ಸಹಕರಿಸಲಿಲ್ಲ, ಪ್ರಧಾನಿ ಅವರ ಜೊತೆ ಮಾತಾಡುತ್ತಿಲ್ಲ.

• ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಪ್ರಸ್ತುತ ಕಬ್ಬು ಬೆಳೆಗಾರರು ಬೀದಿಗಿಳಿದಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ರೂ.3,200 ರೂ. ನಿಗದಿಪಡಿಸಿದ್ದು, (ಕಟಾವು ಮತ್ತು ಸಾಗಾಟ ಹೊರತುಪಡಿಸಿ) ಇದಕ್ಕೆ ಕಾರ್ಖಾನೆಗಳು ಒಪ್ಪಿಕೊಂಡರೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬಹುದಾಗಿದೆ. ಆಯಾ ಪ್ರದೇಶದ ಇಳುವರಿ ರಿಕವರಿ ಪ್ರಮಾಣದ ಆಧಾರದಲ್ಲಿ ದರವನ್ನು ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ.

• ಸಹಕಾರಿ ರಂಗದ ಇಐಡಿ ಪ್ಯಾರಿ ಶುಗರ್ ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ ಪ್ರಸ್ತುತ ರೂ.3,211ಪಾವತಿಸುತ್ತಿದೆ. ಇದೇ ಮಾದರಿಯಲ್ಲಿ ಉಳಿದ ಕಾರ್ಖಾನೆಗಳು ರೈತರಿಗೆ ಪಾವತಿಸಿದರೆ ಅನುಕೂಲ‌ ಆಗಲಿದೆ.

• ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳನ್ನು ಆಲಿಸಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿಯೇ, ಸಕ್ಕರೆಯ ಎಂಎಸ್‌ಪಿ ರೂ.41ಕ್ಕೆ ನಿಗದಿಪಡಿಸಲು ಕೋರಿ ಪ್ರಧಾನಿಯವರಿಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಅವರು ಸಮಯ ನೀಡಿದರೆ ನಾಳೆಯೇ ನಿಯೋಗ ಕರೆದುಕೊಂಡು ಹೋಗಲು ಸಿದ್ಧರಿದ್ದೇವೆ.

• ಅವಧಿಗಿಂತ ಮೊದಲು ಕಬ್ಬು ಕಟಾವು ಮಾಡದಿರುವುದು ಸೇರಿದಂತೆ ಕಬ್ಬಿನ ಇಳವರಿ ರಿಕವರಿ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುವ ಕುರಿತು ರೈತರಿಗೆ ಜಾಗೃತಿ ಮೂಡಿಸುವುದು ಸಕ್ಕರೆ ಕಾರ್ಖಾನೆಗಳ ಜವಾಬ್ದಾರಿಯಾಗಿದೆ.

Leave a Reply

Your email address will not be published. Required fields are marked *

error: Content is protected !!