
ರಾಮಯ್ಯನಪಾಳ್ಯ ಅಪಘಾತ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಬಲಿ ಪಡೆದು ಪರಾರಿಯಾಗಿದ್ದ ಲಗೇಜ್ ಆಟೋವನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಪತ್ತೆಯಾಗಿದ್ದು ಹೇಗೆ…….?
ಸಿಸಿಟಿವಿ ಫೂಟೇಜ್ ಆಧಾರದ ಮೇಲೆ ಗುದ್ದೋಡೋಗಿದ್ದ ಆಟೋ ಹಾಗೂ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ…
ಕೊಡಿಗೇಹಳ್ಳಿ ಮೂಲದ ವ್ಯಕ್ತಿಯೊಬ್ಬರು ಮಗನ ಹೆಸರಿನಲ್ಲಿರುವ ತರಕಾರಿ ಹೊತ್ತು ತರುವ ಲಗೇಜ್ ಆಟೋವನ್ನು ಚಾಲನೆ ಮಾಡುತ್ತಿರುತ್ತಾರೆ. ಆರೋಪಿ ಹೆಸರಲ್ಲಿ ವಾಹನ ಚಾಲನೆ ಪರವಾನಗಿ ಹಾಗೂ ಇತರೆ ಯಾವುದೇ ದಾಖಲೆಗಳು ಇರುವುದಿಲ್ಲ ಎಂದು ತಿಳಿದುಬಂದಿದೆ.

ಇಬ್ಬರು ಯುವಕರ ತಲೆ ಹಾಗೂ ಎದೆ ಮೇಲೆ ಆಟೋ ಹರಿದಿದ್ದು, ಇದರ ಪರಿಣಾಮ ಯುವಕರು ಪ್ರಾಣಬಿಟ್ಟಿದ್ದರು. ಅಪಘಾತವಾದ ಕೂಡಲೇ ಜೀವ ಭಯದಿಂದ ಆಟೋ ಚಾಲಕ ಆಟೋ ಸಮೇತ ಚಿಕ್ಕಬಳ್ಳಾಪುರದ ಆರ್ ಎಂಸಿಗೆ ಪರಾರಿಯಾಗುತ್ತಾನೆ. ಸಿಸಿಟಿವಿ ಆಧಾರದ ಮೇಲೆ ಚಿಕ್ಕಬಳ್ಳಾಪುರದ ಆರ್ ಎಂಸಿಗೆ ಭೇಟಿ ಕೊಟ್ಟು ಪರಿಶೀಲಿಸಿದ ಪೊಲೀಸರು ಆರೋಪಿಯ ಮಗನ ವಿವರ ಪತ್ತೆಯಾಗುತ್ತದೆ. ಮಗನನ್ನು ವಿಚಾರಣೆ ನಡೆಸಿದಾಗ ಆರೋಪಿ ಕೊಡಿಗೇಹಳ್ಳಿಯವನು ಎಂದು ಗೊತ್ತಾಗಿ ಆಟೋ ಹಾಗೂ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

ಘಟನೆ ವಿವರ…
ಅ.28ರ ಮುಂಜಾನೆ ತೂಬಗೆರೆ ಮೂಲದ ಮೂವರು ಯುವಕರು ಒಂದೇ ಬೈಕಿನಲ್ಲಿ ದೊಡ್ಡಬಳ್ಳಾಪುರದ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆಂದು ಬರುತ್ತಿದ್ದರು. ಈ ವೇಳೆ ರಾಮಯ್ಯನಪಾಳ್ಯದ ಸಮೀಪ ವಾಕಿಂಗ್ ಮಾಡುತ್ತಿದ್ದ ಅಜ್ಜಿ ಬೈಕಿಗೆ ಅಡ್ಡಬಂದಿದ್ದು, ಅಜ್ಜಿಯನ್ನು ಅಪಘಾತದಿಂದ ಪಾರು ಮಾಡಲು ಹೋಗಿ ಬೈಕ್ ಸವಾರರು ಆಯಾ ತಪ್ಪಿ ಕೆಳಗೆ ಬೀಳುತ್ತಾರೆ. ಇದೇವೇಳೆ ದೊಡ್ಡಬಳ್ಳಾಪುರದಿಂದ ತೂಬಗೆರೆ ಕಡೆಗೆ ಹೋಗುತ್ತಿದ್ದ ಲಗೇಜ್ ಆಟೋ ಇಬ್ಬರು ಯುವಕರ ಎದೆ ಹಾಗೂ ತಲೆ ಮೇಲೆ ಹರಿದಿದೆ. ತೀವ್ರ ರಕ್ತ ಸ್ರಾವದಿಂದ ತೂಬಗೆರೆ ಮೂಲದ ನಂದನ್ ಕುಮಾರ್ (22) ಮತ್ತು ದೊಡ್ಡತಿಮ್ಮನಹಳ್ಳಿ ರವಿಕುಮಾರ್(24) ಸಾವನ್ನಪ್ಪುತ್ತಾರೆ. ಮತ್ತೊಬ್ಬ ಯುವಕ ಹಾಗೂ ಅಜ್ಜಿಗೆ ಗಾಯಗಳಾಗಿದ್ದು, ತುಸು ಚೇತರಿಸಿಕೊಂಡಿದ್ದಾರೆ. ಅಪಘಾತವಾದ ಕೂಡಲೇ ಲಗೇಜ್ ಆಟೋ ಅಲ್ಲಿಂದ ಪರಾರಿಯಾಗುತ್ತದೆ.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುತ್ತದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಫೂಟೇಜ್ ಆಧಾರದ ಮೇಲೆ ಗುದ್ದೋಡೋಗಿದ್ದ ಆಟೋವನ್ನು ಪತ್ತೆ ಮಾಡಿ ತನಿಖೆ ಮುಂದುವರಿಸಿದ್ದಾರೆ…
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ….