2025ರ ಮಹಿಳಾ ವಿಶ್ವಕಪ್ ಫೈನಲ್‌: ವಿಶ್ವಕಪ್ ಗೆದ್ದು ಇತಿಹಾಸ ಬರೆದ ಭಾರತೀಯ ಮಹಿಳಾ ತಂಡ: ಚಾಂಪಿಯನ್ ತಂಡಕ್ಕೆ ಸಿಕ್ಕಿದ ಬಹುಮಾನದ ಮೊತ್ತ ಎಷ್ಟು ಗೊತ್ತಾ….?

ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

2025ರ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ಬರೆದಿದೆ.
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್ ಗಳ ಅಂತರದಲ್ಲಿ ಮಣಿಸಿ ಭರ್ಜರಿ ಜಯ ದಾಖಲಿಸಿತು.

ಭಾರತ ನೀಡಿದ್ದ 299 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್ ನಲ್ಲಿ 246 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದು ಕೊಂಡು 52 ರನ್ ಗಳ ಅಂತರದಲ್ಲಿ ಭಾರತದ ಎದುರು ಮಂಡಿಯೂರಿತು.

ಈ ಐತಿಹಾಸಿಕ ಗೆಲುವಿನೊಂದಿಗೆ ತಂಡವು ದಾಖಲೆಯ ಮೊತ್ತದ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಘೋಷಿಸಿದಂತೆ, ಚಾಂಪಿಯನ್ ಭಾರತ ತಂಡವು ಬರೋಬ್ಬರಿ 39.78 ಕೋಟಿ ರೂಪಾಯಿ (4.48 ಮಿಲಿಯನ್ ಡಾಲರ್‌) ಬಹುಮಾನವನ್ನು ಪಡೆಯಲಿದೆ. ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿಯೇ ನೀಡಲಾದ ಅತಿ ದೊಡ್ಡ ಬಹುಮಾನದ ಮೊತ್ತವಾಗಿದೆ. 2022ರಲ್ಲಿ ಆಸ್ಟ್ರೇಲಿಯಾ ಗೆದ್ದಿದ್ದ 1.32 ಮಿಲಿಯನ್ ಡಾಲರ್‌ಗೆ ಹೋಲಿಸಿದರೆ, ಈ ಬಾರಿಯ ಬಹುಮಾನದ ಮೊತ್ತದಲ್ಲಿ ಶೇ. 239ರಷ್ಟು ಹೆಚ್ಚಳವಾಗಿದೆ. ರನ್ನರ್ – ಅಪ್ ಆದ ದಕ್ಷಿಣ ಆಫ್ರಿಕಾ ತಂಡವು 19.88 ಕೋಟಿ ರೂಪಾಯಿ (2.24 ಮಿಲಿಯನ್ ಡಾಲರ್‌) ಪಡೆಯಲಿದೆ.

ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯ ಒಟ್ಟು ಬಹುಮಾನದ ಮೊತ್ತವನ್ನು ಐಸಿಸಿ 123 ಕೋಟಿ ರೂಪಾಯಿಗೆ (13.88 ಮಿಲಿಯನ್ ಡಾಲರ್‌) ಹೆಚ್ಚಿಸಿತ್ತು. ಇದು 2022ರ ನ್ಯೂಜಿಲೆಂಡ್ ಆವೃತ್ತಿಯ 3.5 ಮಿಲಿಯನ್ ಡಾಲರ್‌ಗೆ ಹೋಲಿಸಿದರೆ ಶೇ. 297ರಷ್ಟು ಹೆಚ್ಚಾಗಿದೆ.

ಸೆಮಿಫೈನಲ್‌ನಲ್ಲಿ ಸೋತ ಪ್ರತಿ ತಂಡಕ್ಕೂ 9.94 ಕೋಟಿ ರೂ. (1.12 ಮಿಲಿಯನ್ ಡಾಲರ್‌) ನೀಡಲಾಗಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎಲ್ಲಾ ಎಂಟು ತಂಡಗಳಿಗೆ ತಲಾ 250,000 ಡಾಲರ್ ಹಾಗೂ ಲೀಗ್ ಹಂತದ ಪ್ರತಿ ಗೆಲುವಿಗೆ 34,314 ಡಾಲರ್ ಹೆಚ್ಚುವರಿ ಮೊತ್ತವನ್ನು ನೀಡಲಾಗಿದೆ.

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಮಹಿಳಾ ತಂಡಕ್ಕೆ ಬಂಪರ್ ಬಹುಮಾನ ನೀಡಲು ಪರಿಗಣಿಸುತ್ತಿದೆ. 2024ರ ಟಿ20 ವಿಶ್ವಕಪ್ ಗೆದ್ದ ಪುರುಷರ ತಂಡಕ್ಕೆ ನೀಡಲಾಗಿದ್ದ 125 ಕೋಟಿ ರೂಪಾಯಿ ಬಹುಮಾನವನ್ನು ಮಹಿಳಾ ತಂಡಕ್ಕೂ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

“ಬಿಸಿಸಿಐ ಪುರುಷರು ಮತ್ತು ಮಹಿಳೆಯರಿಗೆ ಸಮಾನ ವೇತನವನ್ನು ಬೆಂಬಲಿಸುತ್ತದೆ. ನಮ್ಮ ಹುಡುಗಿಯರು ವಿಶ್ವಕಪ್ ಗೆದ್ದರೆ, ಪುರುಷರ ಜಾಗತಿಕ ಗೆಲುವಿಗೆ ಹೋಲಿಸಿದರೆ ಪ್ರತಿಫಲ ಕಡಿಮೆಯಿರಬಾರದು ಎಂಬ ಚರ್ಚೆಗಳು ನಡೆದಿವೆ,” ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಗೆಲುವು ಮತ್ತು ದಾಖಲೆಯ ಬಹುಮಾನವು ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಹೊಸ ದಿಕ್ಕನ್ನು ನೀಡಲಿದೆ.

Leave a Reply

Your email address will not be published. Required fields are marked *

error: Content is protected !!