
ತಾಯಿ ಭಾಷೆ…..
ಕನ್ನಡ ರಾಜ್ಯೋತ್ಸವ……..
ಕರ್ನಾಟಕ ಎಂಬುದೇನು
ಹೆಸರೇ ಬರಿಯ ಮಣ್ಣಿಗೆ,
ಮಂತ್ರ ಕಣಾ ಶಕ್ತಿ ಕಣಾ
ತಾಯಿ ಕಣಾ ದೇವಿ ಕಣಾ
ಬೆಂಕಿ ಕಣಾ ಸಿಡಿಲು ಕಣಾ
ಕಾವ ಕೊಲುವ ಒಲವ ಬಲವಾ
ಪಡೆದ ಚೆಲುವ ಚೆಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ,
ರಾಷ್ಟ್ರ ಕವಿ ಕುವೆಂಪು….
ತಾಯಿ ಭಾಷೆ ಉಳಿಯದಿದ್ದರೆ ನಮ್ಮ ಬದುಕು ಸಹಜವಾಗಿ ಉಳಿಯುವುದು ಕಷ್ಟ. ಅದು ಅಸಹಜವಾಗಿ ಬೆಳೆಯುತ್ತದೆ.
ಭಾಷೆ ಎಂಬುದು ಭಾವ ಕಡಲು,
ಭಾಷೆ ಎಂಬುದು ಒಡಲಾಳದ ಉಸಿರು,
ಭಾಷೆ ಎಂಬುದು ಸಂಸ್ಕೃತಿಯ ಬೇರು, ಭಾಷೆ ಎಂಬುದು ಸಂಪರ್ಕ ಮಾಧ್ಯಮ,
ಭಾಷೆ ಎಂಬುದು ಸಾಂಸ್ಕೃತಿಕ ವಾಹಕ, ಭಾಷೆ ಎಂಬುದು ಜ್ಞಾನದ ಹೆಬ್ಬಾಗಿಲು, ಭಾಷೆ ಎಂಬುದು ಬದುಕು ರೂಪಿಸುವ ಸಾಧನ,
ಒಟ್ಟಾರೆ ಭಾಷೆ ಎಂಬುದು ಸಾಮಾಜಿಕ ಮತ್ತು ವೈಯಕ್ತಿಕ ಬದುಕಿನ ಜೀವದ್ರವ್ಯ………..
ನವಂಬರ್ ೧ ಕನ್ನಡ ರಾಜ್ಯೋತ್ಸವ….
ಭಾರತದ ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆ ಸ್ಥಾಪಿತವಾಗಿರುವುದೇ ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ. ಭಾಷೆಯೇ ಇಲ್ಲಿನ ಬಹುತ್ವ ಸಂಸ್ಕೃತಿಯ ಪ್ರತಿಬಿಂಬ.
ಕನ್ನಡ ನಮ್ಮ ತಾಯಿ ಭಾಷೆ , ಭಾರತದಲ್ಲಿ ಕೆಲವು ಭಾಷೆಗಳು ಅಧಿಕೃತವು, ಕೆಲವು ಅನಧೀಕೃತವೂ, ಇನ್ನೂ ಕೆಲವು ಭಾಷೆಗಳು ಶಾಸ್ತ್ರೀಯ ಸ್ಥಾನಮಾನ ಪಡೆದಿದ್ದರೂ ಸಾವಿರಾರು ಭಾಷೆಗಳು ಇನ್ನೂ ಅಸ್ತಿತ್ವದಲ್ಲಿವೆ. ಅವುಗಳಲ್ಲಿ ಕನ್ನಡಕ್ಕೂ ಕೂಡ ಅತ್ಯಂತ ಪ್ರಮುಖ ಸ್ಥಾನವಿದೆ……..
ಇದುವರೆಗಿನ ಮಾನವ ಇತಿಹಾಸದಲ್ಲಿ, ಆತ ಇಲ್ಲಿಯವರೆಗೆ ಬೆಳೆದ ರೀತಿಯನ್ನು ಅವಲೋಕಿಸಿದಾಗ ಮನುಷ್ಯರಲ್ಲಿ ಅರಿವನ್ನು ಮೂಡಿಸುವ ಅತ್ಯಂತ ಪ್ರಬಲ ಮಾಧ್ಯಮ ಭಾಷೆ……………
ಆ ಭಾಷೆಗಳಲ್ಲಿ ಆತನ ಜ್ಞಾನವನ್ನು ಆಳವಾಗಿ ಬೆಳೆಸುವುದು, ಸಂವೇದನೆ ಉಂಟುಮಾಡುವುದು ಮತ್ತು ವ್ಯಕ್ತಿತ್ವ ರೂಪಿಸುವುದು ಅವರವರ ತಾಯಿ ಭಾಷೆ ಎಂದು ಖಚಿತವಾಗಿ ಹಾಗು ವೈಜ್ಞಾನಿಕವಾಗಿ ದೃಢಪಟ್ಟಿದೆ.
ಕೋಟ್ಯಾನುಕೋಟಿ ಭಾಷೆಗಳಿದ್ದರೂ, ಅವುಗಳು ಹೆಚ್ಚು ಕಡಿಮೆ ಒಂದೇ ರೀತಿಯ ಉಗಮ, ಹಿನ್ನೆಲೆ, ಪ್ರೌಢಿಮೆ, ಶ್ರೇಷ್ಠತೆ ಹೊಂದಿದ್ದರೂ ಸಂವೇದನೆಯ ದೃಷ್ಟಿಯಿಂದ ಅವರವರ ತಾಯಿ ಭಾಷೆಗಳೇ ಸರ್ವಶ್ರೇಷ್ಠ ಎಂದು ಸಾಬೀತಾಗಿದೆ.
ಆದ್ದರಿಂದ,…
ನನ್ನ ತಾಯಿಭಾಷೆ ಕನ್ನಡವೇ ನಮಗೆ ಸರ್ವಶ್ರೇಷ್ಠ.
ಇಲ್ಲಿನ ನೀರು ನೆಲ ಗಾಳಿಯಲ್ಲದೆ, ನಮ್ಮ ತಂದೆ, ತಾಯಿ, ಬಂಧು ಬಳಗಗಳ ರಕ್ತ ಮಿಳಿತವಾಗಿ ನಮ್ಮನ್ನು ರೂಪಿಸಿದ ಕನ್ನಡವೇ ನಮ್ಮ ಜೀವಂತ ಅಸ್ತಿತ್ವದ ಕುರುಹು.
ಅದರಲ್ಲೂ ಶಿಕ್ಷಣ ಮಾಧ್ಯಮಕ್ಕೆ ಬಂದರೆ ತಾಯಿ ಭಾಷೆಗಿರುವ ಅದಮ್ಯ ಶಕ್ತಿ ಬೇರೆ ಯಾವ ಭಾಷೆಗೂ ಇರುವುದಿಲ್ಲ. ನಿಮಗೆ ಬೇರೆ ಭಾಷೆಗಳಲ್ಲಿ ಪಾಂಡಿತ್ಯವಿರಬಹುದು, ಪರೀಕ್ಷೆಯ ಆ ವಿಷಯಗಳಲ್ಲಿ 100/100 ಅಂಕಗಳನ್ನು ಪಡೆಯಬಹುದು. ಅದು ಕೇವಲ ನಿಮ್ಮ ನೆನಪಿನ ಶಕ್ತಿಯ ಅಕ್ಷರ ಜ್ಞಾನದ, ವಿದ್ಯಾಭ್ಯಾಸ ಕ್ರಮದ ಅಂಕಗಳೇ ಹೊರತು ಅವು ನಿಮ್ಮ ವ್ಯಕ್ತಿತ್ವದ ಅರಿವಿನ ಅಂಶಗಳಲ್ಲ.
ತಾಯಿ ಭಾಷೆ ನಿಮ್ಮ ನರನಾಡಿಗಳ ಭಾವನೆಯ ಪ್ರತಿಬಿಂಬ ಎಂಬುದನ್ನು ಮರೆಯದಿರಿ. ವಿಶ್ವದ ಯಾವ ಭಾಷೆಗಳನ್ನು ಬೇಕಾದರು ಇಷ್ಟಪಡಿ, ಗೌರವಿಸಿ, ಕಲಿಯಿರಿ. ನಿಮಗೆ ಸಾಮರ್ಥ್ಯವಿದ್ದರೆ ಒಳ್ಳೆಯದು ಕೂಡ.
ಆದರೆ ಅದು ತಾಯಿ ಭಾಷೆಯಾಗಲಾರದು.
ಕನ್ನಡ ಅಕ್ಷರಗಳನ್ನೂ, ಪದಗಳನ್ನೂ ಮೀರಿ ನಮ್ಮನ್ನು ಆವರಿಸುತ್ತದೆ. ನಮ್ಮ ಕನ್ನಡ ಜ್ಞಾನ, ಕನ್ನಡ ಹೋರಾಟ, ನಮ್ಮ ಕನ್ನಡ ಸಾಹಿತ್ಯ, ಸಿನಿಮಾ, ಕಲೆ, ನಮ್ಮ ಕನ್ನಡ ಅಭಿಮಾನ ಅನಾವಶ್ಯಕವಾದ ತೋರಿಕೆಯಾಗಿರದೆ ಅದು ಉಸಿರಾಟದಷ್ಟೇ ಸಹಜ ಜೀವನ ಕ್ರಮವಾಗಿರಲಿ.
ಜೀನ್ಸ್ ಪ್ಯಾಂಟ್, ಪೀಜಾ ಬರ್ಗರ್, ಕಂಪ್ಯೂಟರ್, ವಿದೇಶ ವಾಸ ಏನೇ ಆಗಿರಲಿ ನಿಮ್ಮ ಖುಷಿ ನಿಮ್ಮ ಇಷ್ಡ. ಆದರೆ ನಾಲಗೆಯ ಮೇಲೆ ನಲಿಯುವ ಭಾಷೆ ಕನ್ನಡವೇ ಆಗಿರಲಿ. ಆ ಬಗ್ಗೆ ಯಾವ ಮೇಲರಿಮೆ ಕೀಳರಿಮೆ ಬೇಡವೇ ಬೇಡ.
ಸಿನಿಮಾ, ಧಾರಾವಾಹಿ, ಮಾಡೆಲಿಂಗ್ ನ ಕೆಲವು ನಟನಟಿಯರಂತೆ, ಇಂಗ್ಲಿಷ್ ಕಲಿಕೆಯಂದಾಗಿಯೇ ತಾವೇನೋ ಮಹಾನ್ ಶ್ರೇಷ್ಠರಂತೆ ಆಡುವ ಎಡಬಿಡಂಗಿ ವ್ಯಕ್ತಿತ್ವದ ತೋರಿಕೆಯಾಗದೆ, ಹಣಗಳಿಸುವ ಕಪಟಿಗಳಂತೆ ನಾವಾಗದೆ, ಕೃತಕ ಅಭಿಮಾನ ತೋರಿಸದೆ, ನಮ್ಮೆಲ್ಲರ ಸಹಜ ಸ್ವಾಭಾವಿಕ ಜೀವಭಾಷೆ ಕನ್ನಡವಾಗಲಿ.
ನಮ್ಮ ದಿನನಿತ್ಯದ ಜೀವನಶೈಲಿಯೇ ಕನ್ನಡವಾಗಲಿ.
ಹಾಗೆಯೇ ಕನ್ನಡ ಭಾಷೆಯೂ ಸಹ ನಿಂತ ನೀರಾಗಲು ಬಿಡದೆ ಆಧುನಿಕ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಾ, ಕನ್ನಡದ ಜೊತೆಗೆ ನಾವೂ ಬೆಳೆಯುತ್ತಾ ವಿಶ್ವ ನಾಗರಿಕರಾಗೋಣ.
ನಾನು ನಕ್ಕಾಗ ನಗಿಸಿದ್ದು ಕನ್ನಡ,
ನಾನು ಅತ್ತಾಗ ಅಳಿಸಿದ್ದು ಕನ್ನಡ,
ನಾನು ಪ್ರೀತಿಸಿದಾಗ ಮೂಡಿದ್ದು ಕನ್ನಡ,
ನಾನು ಪ್ರೇಮಿಸಿದಾಗ ಅರಳಿದ್ದು ಕನ್ನಡ,
ನಾನು ಕಾಮಿಸಿದಾಗ ಕನಲಿದ್ದು ಕನ್ನಡ,
ನನ್ನ ಖುಷಿಗೆ ಜೊತೆಯಾಗಿದ್ದು ಕನ್ನಡ,
ನನ್ನ ಕೋಪಕ್ಕೆ ಸೇರಿಕೊಂಡಿದ್ದು ಕನ್ನಡ,
ನನ್ನ ಖಿನ್ನತೆ ವ್ಯಕ್ತಪಡಿಸಿದ್ದು ಕನ್ನಡ,
ನನ್ನ ಭಕ್ತಿಯೂ ಕನ್ನಡ,
ನನ್ನ ಶಕ್ತಿಯೂ ಕನ್ನಡ
ನನ್ನ ಮುಕ್ತಿಯೂ ಕನ್ನಡ,
ನನ್ನಲ್ಲಿ ಅರಿವು ಮೂಡಿಸಿದ್ದು ಕನ್ನಡ,
ನನ್ನಲ್ಲಿ ಅಹಂಕಾರ ಬೆಳೆಸಿದ್ದೂ ಕನ್ನಡ,
ನನ್ನಲ್ಲಿ ಹೆಮ್ಮೆ ಬೆಳಗಿಸಿದ್ದೂ ಕನ್ನಡ,
ನನ್ನಲ್ಲಿ ಕೀಳರಿಮೆ ತಂದದ್ದೂ ಕನ್ನಡ,
ನನ್ನಲ್ಲಿ ಅಭಿಮಾನ ಸೇರಿಸಿದ್ದು ಕನ್ನಡ,
ನನಗೆ ದೃಷ್ಟಿಯಾಗಿ ಕಂಡದ್ದು ಕನ್ನಡ,
ನನಗೆ ಧ್ವನಿಯಾಗಿ ಕೇಳಿದ್ದು ಕನ್ನಡ,
ನನಗೆ ವಾಸನೆಯಾಗಿ ಗ್ರಹಿಸಿದ್ದು ಕನ್ನಡ,
ನನಗೆ ರುಚಿಯಾಗಿ ಸವಿದದ್ದು ಕನ್ನಡ,
ನನಗೆ ಸ್ಪರ್ಶವಾಗಿ ಮುಟ್ಟಿದ್ದು ಕನ್ನಡ,
ಮಾತು ಕಲಿಸಿದ್ದು ಕನ್ನಡ,
ವಿದ್ಯೆ ನೀಡಿದ್ದು ಕನ್ನಡ ,
ಉದ್ಯೋಗ ದೊರಕಿಸಿದ್ದು ಕನ್ನಡ,
ಬದುಕು ದಯಪಾಲಿಸಿದ್ದು ಕನ್ನಡ,
ನಮ್ಮ ನಿಮ್ಮ ಗೆಳೆತನಕ್ಕೆ ಸಾಕ್ಷಿಯಾದದ್ದು ಕನ್ನಡ,
ನಾನು ಕನ್ನಡ – ನೀವೂ ಕನ್ನಡ,
ಅವನೂ ಕನ್ನಡ – ಅವಳೂ ಕನ್ನಡ,
ಎಲ್ಲವೂ ಕನ್ನಡ – ಎಲ್ಲರೂ ಕನ್ನಡ,
ಎಲ್ಲೆಲ್ಲೂ ಕನ್ನಡ – ಎಂದೆಂದೂ ಕನ್ನಡ,
ನಮ್ಮೆಲ್ಲರ ಜೀವನವೇ,
ಕನ್ನಡ ಕನ್ನಡ ಕನ್ನಡ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ