
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ವೇಳೆ ವಾಲ್ಮೀಕಿ ಸಮುದಾಯದ ಬಗ್ಗೆ ರಮೇಶ್ ಕತ್ತಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಖಂಡನೀಯ, ರಮೇಶ್ ಕತ್ತಿ ಮೇಲೆ ಎಸ್.ಸಿ/ಎಸ್.ಟಿ ದೌರ್ಜನ್ಯ ಕಾಯ್ದೆಯಡಿ ಜಾತಿ ನಿಂದನೆ ಪ್ರಕರಣ ದಾಖಲು ಮಾಡಬೇಕೆಂದು ವಾಲ್ಮೀಕಿ ಸಮುದಾಯದ ಮುಖಂಡರು ಅಗ್ರಹಿಸಿದರು.
ಈ ಕುರಿತು ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದ ಆಡಿಯೋ ವೈರಲ್ ಆಗಿದೆ. ರಮೇಶ್ ಕತ್ತಿ ಅವರ ವಿರುದ್ಧ ಎಫ್ ಐಆರ್ ದಾಖಲು ಮಾಡಿ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಬಹುದೊಡ್ಡ ಸಂಖ್ಯೆಯ ವಾಲ್ಮೀಕಿ ಸಮುದಾಯವನ್ನು ನಿಂದಿಸುವ ಮೂಲಕ ರಮೇಶ್ ಕತ್ತಿ ದೊಡ್ಡ ತಪ್ಪು ಮಾಡಿದ್ದಾರೆ. ಸದಾ ಹೋರಾಟದ ಬದುಕನ್ನು ಸಾಗಿಸಿ ಶಾಂತಿ ಸೌಹಾರ್ದಕ್ಕೆ ಹೆಸರಾದ ನಮ್ಮ ಸಮುದಾಯವನ್ನು ಕೆದಕುವ ಮೂಲಕ ರಾಜ್ಯದಲ್ಲಿ ಶಾಂತಿ ಕದಡಿದ್ದಾರೆ ಎಂದು ಗುಡುಗಿದರು.
ಇವರು ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ವ್ಯಕ್ತಿಯಾಗಿದ್ದು, ಇಂತಹವರಿಂದ ನಮ್ಮ ಜಾತಿ/ಜನಾಂಗದವರಿಗೆ ತುಂಬಾ ಹೀನಾಯವಾಗಿ ಅವಾಚ್ಯ ಶಬ್ದಗಳಿಂದ ಬೈದಿರುವುದು ಕಾನೂನು ವಿರುದ್ಧವಾಗಿರುತ್ತದೆ. ಮಾಜಿ ಸಂಸದ ರಮೇಶ್ ಕತ್ತಿ ಮೇಲೆ ಎಸ್.ಸಿ/ಎಸ್.ಟಿ ದೌರ್ಜನ್ಯ ಕಾಯ್ದೆಯಡಿ ಕಾನೂನು ರೀತಿ ಕ್ರಮ ಜರುಗಿಸಿ ಅವರ ಮೇಲೆ ದೌರ್ಜನ್ಯ ಕಾಯ್ದೆಯಡಿ ಎಫ್.ಐ.ಆರ್ ದಾಖಲು ಮಾಡಿ ಇವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಿ, ಬಂಧಿಸಿ ನಾಯಕ ಜಾತಿ/ಜನಾಂಗದವರಿಗೆ ಮಾಡಿರುವ ಅವಮಾನಕ್ಕೆ ತಕ್ಕ ಶಿಕ್ಷೆ ಕೊಡಬೇಕೆಂದು ಡಿವೈಎಸ್ಪಿ ರವಿ ಪಿ ಅವರಿಗೆ ಮನವಿ ಮಾಡಿದರು.
ಈ ವೇಳೆ ವಾಲ್ಮೀಕಿ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಪ್ರೇಮಕುಮಾರ್, ತಾಲ್ಲೂಕು ಅಧ್ಯಕ್ಷ ಮುನಿಕೃಷ್ಣಪ್ಪ, ತಾಲ್ಲೂಕು ಉಪಾಧ್ಯಕ್ಷ ಸಿ ಕುಮಾರ್, ತಾಲ್ಲೂಕು ನಿರ್ದೇಶಕರಾದ ವೆಂಕಟಾಚಲಯ್ಯ, ನಗರ ಅಧ್ಯಕ್ಷ ಕೇಶವಮೂರ್ತಿ, ನಗರ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ರಾಜು, ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.