
ಆಂಧ್ರಪ್ರದೇಶದ ಕರ್ನೂಲ್‌ನ ಬೆಂಗಳೂರು – ಹೈದರಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಇಡೀ ಬಸ್ ಬೆಂಕಿಗೆ ಆಹುತಿಯಾಗಿದೆ.
ಇದರ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದಾರೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಐಷಾರಾಮಿ ಬಸ್ ಕರ್ನೂಲ್ ಜಿಲ್ಲೆಯ ಚಿನ್ನತೆಕುರು ಗ್ರಾಮದ ಬಳಿ ಶುಕ್ರವಾರ ಬೆಳಗಿನ ಜಾವ 3.30ರ ಸುಮಾರಿಗೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿಗೆ ಆಹುತಿಯಾಗಿ 25ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು 40 ಪ್ರಯಾಣಿಕರನ್ನು ಹೊತ್ತಿದ್ದ ಈ ಸ್ಲೀಪರ್ ಕೋಚ್ ಬಸ್, ವಿರುದ್ಧ ದಿಕ್ಕಿನಿಂದ ಬಂದ ಮೋಟಾರ್ ಬೈಕ್‌ಗೆ ಡಿಕ್ಕಿ ಹೊಡೆದ ಕೂಡಲೇ ಬಸ್‌ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಕೆಲವೇ ಕ್ಷಣಗಳಲ್ಲಿ ಬೆಂಕಿ ವೇಗವಾಗಿ ಹರಡಿ ಇಂಧನ ಟ್ಯಾಂಕ್ ಸ್ಫೋಟಗೊಂಡಿದೆ. ಈ ಘಟನೆಯ ತೀವ್ರತೆಯಿಂದಾಗಿ ಬಸ್ ಕ್ಷಣಾರ್ಧದಲ್ಲಿ ಜ್ವಾಲೆಗಳಿಂದ ಕೂಡಿತ್ತು. ಬಸ್‌ನೊಳಗೆ ಗಾಢ ನಿದ್ದೆಯಲ್ಲಿದ್ದ ಪ್ರಯಾಣಿಕರು ಆಘಾತದಿಂದ ಎಚ್ಚರಗೊಂಡು, ಕಿರುಚಾಟ ಮತ್ತು ಗೊಂದಲದ ಮಧ್ಯೆ ಸಿಲುಕಿಕೊಂಡರು. ದಟ್ಟವಾದ ಹೊಗೆ ಮತ್ತು ಬೆಂಕಿಯಿಂದಾಗಿ ಹೊರಬರಲು ದಾರಿಯಿಲ್ಲದೆ ಅನೇಕರು ಬಸ್‌ನೊಳಗೆ ಸಿಲುಕಿಕೊಂಡರು. ಕೆಲವರು ತುರ್ತು ನಿರ್ಗಮನ ದ್ವಾರದ ಮೂಲಕ ತಪ್ಪಿಸಿಕೊಂಡರೂ, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.