ನ.2ಕ್ಕೆ ಟಿಎಪಿಎಂಸಿಎಸ್ ಚುನಾವಣೆ: ನಾಮಪತ್ರಗಳ ಸಲ್ಲಿಕೆ ಗುರುವಾರದಿಂದ ಪ್ರಾರಂಭ: ಮೊದಲ ದಿನ ‘ಎ’ ತರಗತಿಯಿಂದ 9 ಜನ ಹಾಗೂ ‘ಬಿ’ ತರಗತಿಯಿಂದ 26 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ನವಂಬರ್ 2 ರಂದು ನಡೆಯಲಿರುವ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಸಿಎಸ್) ಚುನಾವಣೆ ನಡೆಯಲಿದೆ.

ಈ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ ಗುರುವಾರದಿಂದ ಪ್ರಾರಂಭವಾಗಿದ್ದು, ಮೊದಲ ದಿನವೆ ‘ಎ’ ತರಗತಿಯಿಂದ 9 ಜನ ಹಾಗೂ ‘ಬಿ’ ತರಗತಿಯಿಂದ 26 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣ ಅಧಿಕಾರಿ ಆರ್.ರಾಮಾಂಜಿನಪ್ಪ ತಿಳಿಸಿದ್ದಾರೆ.

ನಾಮ ಪತ್ರಗಳನ್ನು ಸಲ್ಲಿಸಲು ಅ.25 ಕೊನೆಯ ದಿನವಾಗಿದೆ. ನಾಮ ಪತ್ರಗಳನ್ನು ಹಿಂದಕ್ಕೆ ಪಡೆಯಲು ಅ.27 ಕೊನೆಯ ದಿನ.

13 ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಟಿಎಪಿಎಂಸಿಎಸ್ ನಲ್ಲಿ ‘ಎ’ ತರಗತಿಗೆ 5 ಸ್ಥಾನ, ‘ಬಿ’ ತರಗತಿಗೆ 8 ಸ್ಥಾನಗಳಿವೆ. 8 ಜನ ನಿರ್ದೇಶಕ ಸ್ಥಾನಗಳ ಪೈಕಿ 2 ಸಾಮಾನ್ಯ ಅಭ್ಯರ್ಥಿಗಳಿಗೆ, 1 ಬಿಸಿಎಂ ‘ಬಿ’, 1 ಬಿಸಿಎಂ ‘ಎ’, 2 ಮಹಿಳಾ ಅಭ್ಯರ್ಥಿಗಳಿಗೆ, 1 ಪರಿಶಿಷ್ಟ ಜಾತಿ, 1 ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿದೆ. ಉಳಿದಂತೆ ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿಯಾಗಿ 1 ಹಾಗೂ ಸರ್ಕಾರದ ನಾಮನಿರ್ದೇಶನದ ಮೂಲಕ ಒಬ್ಬರು ನೇಮಕವಾಗಲಿದೆ.

ತಾಲ್ಲೂಕಿನಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಯಾರೊಂದಿಗು ಮೈತ್ರಿ ಇಲ್ಲದೆ ಎಲ್ಲಾ 13 ಸ್ಥಾನಗಳಿಗು ತಮ್ಮ ಅಭ್ಯರ್ಥಿಗಳನ್ನು ಚುನಾವಣ ಕಣಕ್ಕೆ ಇಳಿಸಿದೆ.

‘ಎ’ ತರಗತಿಯಿಂದ ಎಲ್ಲಾ ಐದು ಸ್ಥಾನಗಳಿಗು ಕಾಂಗ್ರೆಸ್ ಅಭ್ಯರ್ಥಿಗಳು ಮೊದಲ ದಿನವೇ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಇದೇ ಪ್ರಥಮ ಬಾರಿಗೆ ರಾಜ್ಯ ರೈತ ಸಂಘವು ಎಲ್ಲಾ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಪರಿಶಿಷ್ಟ ಪಂಗಡ ಅಭ್ಯರ್ಥಿಗೆ ಮೀಸಲಾಗಿರುವ ಒಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಿದೆ.
ಎನ್‌ಡಿಎ ಬಣದಲ್ಲಿ ‘ಬಿ’ ತರಗತಿಯಿಂದ ಜೆಡಿಎಸ್ ಪಕ್ಷಕ್ಕೆ 5 ಹಾಗೂ ಬಿಜೆಪಿ ಪಕ್ಷಕ್ಕೆ 3 ಸ್ಥಾನಗಳಂತೆ ಹಂಚಿಕೆಯಾಗಿವೆ. ಹಾಗೆಯೇ ‘ಎ’ ತರಗತಿಯಿಂದ ಜೆಡಿಎಸ್ 2, ಬಿಜೆಪಿ 3 ಸ್ಥಾನ ಹಂಚಿಕೆ ಮಾಡಿಕೊಂಡಿವೆ.

ಅ.24 ರಿಂದ(ಶುಕ್ರವಾರ) ತಾಲ್ಲೂಕಿನ ತೂಬಗೆರೆ ಹೋಬಳಿಯ ಸಾಧುಮಠದಲ್ಲಿ ಬೆಳಿಗ್ಗೆ 10 ಗಂಟೆಗೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಎನ್‌ಡಿಎ ಅಭ್ಯರ್ಥಿಗಳು ಒಟ್ಟಾಗಿ ಚುನಾವಣ ಪ್ರಚಾರ ಪ್ರಾರಂಭಿಸಲಿದ್ದಾರೆ.

ಈ ಬಾರಿ ಟಿಎಪಿಎಂಸಿಎಸ್ ಚುನಾವಣೆ ಕಣ ಹಿಂದೆಂದಿಗಿಂತಲು ಹೆಚ್ಚು ರಂಗೇರಿದೆ. ತಾಲ್ಲೂಕಿನಲ್ಲಿ ಮುಂದಿನಗಳಲ್ಲಿ ಬರಲಿರುವ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಟಿಎಪಿಎಂಸಿಎಸ್ ಎನ್‌ಡಿಎ ಮೈತ್ರಿ ದಿಕ್ಸೂಚಿಯಾಗಲಿದೆ ಎನ್ನುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *

error: Content is protected !!