ಕೆಟ್ಟುನಿಂತ ಶುದ್ದ ಕುಡಿಯುವ ನೀರಿನ ಘಟಕ: ಕೆಟ್ಟುನಿಂತು ಹಲವು ತಿಂಗಳು ಕಳೆದರೂ ರಿಪೇರಿಯಾಗದೆ ನಿರುಪಯುಕ್ತ: ಶುದ್ಧ ಕುಡಿಯುವ ನೀರು ಸಿಗದೇ ಜನ ಪರದಾಟ

 

ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹಾದ್ರಿಪುರ ಗ್ರಾಮ‌ಪಂಚಾಯಿತಿ ವ್ಯಾಪ್ತಿಯ ಚಿಕ್ಕಹೆಜ್ಜಾಜಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ಹಾಗೂ ನೈರ್ಮಲ್ಯ ಇಲಾಖೆಯಿಂದ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟುನಿಂತು ಹಲವು ತಿಂಗಳು ಕಳೆದರೂ ರಿಪೇರಿಯಾಗದೆ ನಿರುಪಯುಕ್ತವಾಗಿದೆ….

ಇದು ಆರಂಭಗೊಂಡು ಕೆಲವು ತಿಂಗಳು ಕಳೆದ ನಂತರ ಕೆಟ್ಟು ನಿಂತಿದೆ. ಇದಾಗಿ ಹಲವು ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ತಿ ಕಂಡಿಲ್ಲ. ಇದರಿಂದ ಸ್ಥಳೀಯರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಈ ಗ್ರಾಮವು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಯಾವ ಪ್ರಯೋಜನವಾಗಿಲ್ಲ. ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಈ ಘಟಕವನ್ನೇ ಆಶ್ರಯಿಸಿದ್ದಾರೆ. ಆದರೆ, ಘಟಕ ಬಂದ್ ಆಗಿರುವುದರಿಂದ ದೂರದ ದೊಡ್ಡಬೆಳವಂಗಲ ಹಾಗೂ ಸುತ್ತಮುತ್ತಲಿನ ನೀರಿನ ಘಟಕದಿಂದ ಶುದ್ಧ ನೀರು ತಂದು ಕುಡಿಯುತ್ತಿದ್ದಾರೆ. ಘಟಕ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಗ್ರಾಮ ಪಂಚಾಯಿತಿ ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ನೀರಿನ ಘಟಕದಿಂದ ಒಂದು ಹನಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ತಕ್ಷಣ ರಿಪೇರಿ ಮಾಡಿಸಿ ಜನರಿಗೆ ನೀರಿನ ಪೂರೈಕೆ ಮಾಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಊರಿನ‌ ಗ್ರಾಮಸ್ಥ ಸುಧೀರ್ ಒತ್ತಾಯಿಸಿದರು.

ಈ ಕುರಿತು ಒಂದು ವರ್ಷದ ಹಿಂದೆಯೇ ಶಾಸಕ ಧೀರಜ್ ಮುನಿರಾಜ್ ಅವರ ಗಮನಕ್ಕೆ ತರಲಾಗಿತ್ತು. ಆದರೂ ಏನೂ ಪ್ರಯೋಜನವಾಗಿಲ್ಲ. ನೀರಿನ‌ಘಟಕದ ಸುತ್ತಾಮುತ್ತ ಗಿಡಗಂಟಿಗಳು ಬೆಳೆದುಕೊಂಡು ಹುಳ ಹುಪ್ಪಟೆ ಸೇರಿಕೊಂಡಿವೆ. ನೀರು ಸರಬರಾಜು ಮಾಡುವ ಯಂತ್ರೋಪಕರಣಗಳು ತುಕ್ಕು‌ಹಿಡಿಯುತ್ತಿವೆ. ನಾವಂತೂ ಕುಡಿಯುವ ನೀರಿಗಾಗಿ ಹಾಹಾಕರಿಸುತ್ತಿದ್ದೇವೆ. ದಯವಿಟ್ಟು ಆದಷ್ಟು ಬೇಗ ಸಂಬಂಧಪಟ್ಟವರು ಕೂಡಲೇ ಕ್ರಮಕೈಗೊಂಡು ಕೆಟ್ಟುನಿಂತ ಶುದ್ದ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿ ಜನ ಬಳಕೆಗೆ ಅನುವುಮಾಡಿಕೊಡಬೇಕಾಗಿದೆ ಎಂದು ಒತ್ತಾಯಿಸಿದರು…

Leave a Reply

Your email address will not be published. Required fields are marked *

error: Content is protected !!