ವನ್ಯಜೀವಿ ಬೇಟೆ: ಕಾಡು ಹಂದಿ ಸಾರು, ಆಮೆ ಸುಕ್ಕಾ ಸಮೇತ ಮೂವರ ಬಂಧನ

ಶಿರಸಿ: ವನ್ಯಜೀವಿಗಳ ಬೇಟೆ ಮತ್ತು ಅವುಗಳ ಮಾಂಸದಿಂದ ಅಡುಗೆ ತಯಾರಿಸುತ್ತಿದ್ದ ಜಾಲದ ಮೇಲೆ ಶಿರಸಿಯ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಬನವಾಸಿ ವಲಯದ ಎಕ್ಕಂಬಿ ಸಮೀಪದ ಮೂಡೆಬೈಲ್‌ನಲ್ಲಿ ನಡೆದ ದಾಳಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಬನವಾಸಿ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು, ಮೂಡೆಬೈಲ್‌ನ ಶಂಕರ ಲಕ್ಷ್ಮಣ ನಾಯ್ಕ ಎಂಬ ಆರೋಪಿಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆತನ ಮನೆಯಲ್ಲಿ ಕಾಡು ಹಂದಿಯ ಸಾರು ಮತ್ತು ಆಮೆಯ ಸುಕ್ಕಾ ತಯಾರಿಸುತ್ತಿದ್ದಾಗ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಕಾಡುಹಂದಿ ಮಾಂಸ ಹಾಗೂ ಆಮೆಯ ಮಾಂಸವನ್ನು ಪಾತ್ರೆಗಳ ಸಮೇತ ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐವರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಶಂಕರ ಲಕ್ಷ್ಮಣ ನಾಯ್ಕ, ಗಂಗಾಧರ ಗಣಪತಿ ಗೌಡ, ಮತ್ತು ಶಂಕರ ಬೊಮ್ಮು ಗೌಡ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳಾದ ರವಿ ಮಾದೇವ ಗೌಡ ಮತ್ತು ಗಣಪತಿ ಬೊಮ್ಮು ಗೌಡ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಬನವಾಸಿ ವಲಯ ಅರಣ್ಯಾಧಿಕಾರಿ (RFO) ಭವ್ಯಾ ನಾಯ್ಕ ಅವರ ನೇತೃತ್ವದ ಉಪವಲಯ ಅಧಿಕಾರಿ ಗಜೇಂದ್ರ ಮೊಗೇರ, ಬಾಲರಾಜ ಡಿ, ಯಶೋಧಾ ನಾಯ್ಕ, ಮಂಜುನಾಥ ಗಂಗಮತ, ಗಸ್ತು ಅರಣ್ಯ ಪಾಲಕರಾದ ಭೋಜು ಚೌಹಾಣ್, ಅಮೃತ್ ಅರಿಬೆಂಚಿ ಕನಕಪ್ಪ ತಳವಾರ, ಮಲ್ಲಿಕಾರ್ಜುನ ಗುದಗಿ, ಮತ್ತು ರಮೇಶ್ ಎಚ್ ಸಿ, ಅರಣ್ಯ ವೀಕ್ಷಕರಾದ ಈಶ್ವರಪ್ಪ ಎಚ್.ಎಸ್ ಹಾಗೂ ಮಂಜುನಾಥ ಜೆ ನಾಯ್ಕ ಹಾಗೂ ಸಿಬ್ಬಂದಿಗಳು ಈ ಮಹತ್ವದ ಕಾರ್ಯಾಚರಣೆ ನಡೆಸಿದೆ. ವನ್ಯಜೀವಿ ಬೇಟೆಯ ಕುರಿತು ಅರಣ್ಯ ಇಲಾಖೆ ತನಿಖೆ ಮುಂದುವರೆಸಿದೆ.

Leave a Reply

Your email address will not be published. Required fields are marked *

error: Content is protected !!