ನೂತನ ವಾಲ್ಮೀಕಿ ಭವನಕ್ಕೆ 24ಲಕ್ಷ: ಭವನ ನಿರ್ಮಾಣಕ್ಕೆ ಸಕಲ ಸಿದ್ಧತೆ: ಮುಂದಿನ ವರ್ಷ ನೂತನ ವಾಲ್ಮೀಕಿ ಭವನದಲ್ಲಿಯೇ ವಾಲ್ಮೀಕಿ ಜಯಂತಿ ಆಚರಣೆ- ಶಾಸಕ ಭರವಸೆ

ರಾಮಾಯಣ ಮಹಾಕಾವ್ಯದಲ್ಲಿ ಬದುಕಿನ ಮೌಲ್ಯಗಳನ್ನು ಕಾಣಬಹುದಾಗಿದ್ದು, ಇಂತಹ ಕಾವ್ಯ ರಚಿಸಿದ ವಾಲ್ಮೀಕಿ ಮನುಕುಲಕ್ಕೆ ನೀಡಿದ ಕೊಡುಗೆ ಸ್ಮರಣೀಯ. ಇವರ ತತ್ವಾದರ್ಶಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ನಡೆದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು.

ರಾಮಾಯಣ ಮತ್ತು ಮಹಾಭಾರತಗಳು ಜಗತ್ತಿನ ಶ್ರೇಷ್ಟ ಕಾವ್ಯಗಳಾಗಿದ್ದು, ಎಲ್ಲೆಡೆ ಮನ್ನಣೆ ಪಡೆದಿವೆ. ಈ ಕಾವ್ಯಗಳ ಸಂದೇಶಗಳು ಬದುಕಿಗೆ ದಾರಿದೀಪವಾಗಿವೆ. ಆದರೆ ಇಂದು ಜಗತ್ತು ಸ್ವಾರ್ಥಪರವಾಗಿ ನಡೆಯುತ್ತಿದ್ದು, ಇನ್ನೊಬ್ಬರ ಏಳಿಗೆ ಸಹಿಸದ ವಾತಾವರಣ ಸೃಷ್ಟಿಯಾಗುತ್ತಿದೆ. ಈ ದಿಸೆಯಲ್ಲಿ ಜೀವನದಲ್ಲಿ ಸಂಸ್ಕಾರ ಅಳವಡಿಸಿಕೊಳ್ಳಬೇಕು. ಜಾಗತಿಕ ಶಾಂತಿಗಾಗಿ ಎಲ್ಲರೂ ಒಂದಾಗಬೇಕಿದೆ ಎಂದರು.

ಮುಂದಿನ ವರ್ಷ ಭವನ ನಿರ್ಮಾಣ

ವಾಲ್ಮೀಕಿ ಸಮುದಾಯದ ಅಭಿವೃದ್ದಿಗೆ ನನ್ನ ಸಹಕಾರವಿದೆ. ಶಾಸಕರ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಪರಿಶಿಷ್ಟವರ್ಗದವರಿಗೆ ದೊರಕುವ ₹24 ಲಕ್ಷಗಳನ್ನು ನಗರದ ಸಂಜಯನಗರದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನಕ್ಕೆ ನೀಡಲಾಗುತ್ತಿದೆ. ಮುಂದಿನ ವರ್ಷ ನೂತನ ವಾಲ್ಮೀಕಿ ಭವನದಲ್ಲಿಯೇ ವಾಲ್ಮೀಕಿ ಜಯಂತಿ ಆಚರಿಸಲಾಗುವುದು ಎಂದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಹೊಸಕೋಟೆ ರೇಷ್ಮೆ ಇಲಾಖೆ ಉಪನಿರ್ದೇಶಕ ಚಿನ್ನಕೈವಾರಯ್ಯ, ವಾಲ್ಮೀಕಿ ಒಬ್ಬ ಸಾಧಾರಣ ಬೇಡನಾಗಿದ್ದು, ಆ ನಂತರ ನಾರದ ಮಹರ್ಷಿಗಳ ಮಾತಿನಿಂದ ಪ್ರೇರಣೆಗೊಂಡು ಮಹಾ ಋಷಿಯಾಗಿದ್ದು, ರಾಮಾಯಣ ಮಹಾಕಾವ್ಯವನ್ನು ಬರೆದು ಬದುಕಿಗೆ ರಾಮನ ಮೂಲಕ ತತ್ವಾದರ್ಶಗಳನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥಹರ್ತಿ,ನಗರಸಭೆ ಪೌರಾಯುಕ್ತ ಆರ್.ಕಾರ್ತಿಕೇಶ್ವರ, ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಪಿ.ಎನ್.ಶೇಷಾದ್ರಿ, ವಾಲ್ಮೀಕಿ ಸಮುದಾಯದ ಮೆಳೇಕೋಟೆಯ ಬ್ರಹ್ಮಾನಂದ ಸ್ವಾಮೀಜಿ, ತಾಲ್ಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್, ಉಪಾಧ್ಯಕ್ಷ ಕುಮಾರ್, ಗೌರವ ಅಧ್ಯಕ್ಷ ಮುನಿಕೃಷ್ಣಪ್ಪ,ಸಂಘಟನಾ ಕಾರ್ಯದರ್ಶಿ ಕೇಬಲ್ ರಾಮಚಂದ್ರ, ಮುಖಂಡರಾದ ಸಂಜೀವ್ನಾಯ್ಕ್, ಮುನಿಕೃಷ್ಣ ಇದ್ದರು.

ಸಮಾರಂಭಕ್ಕೂ ಮುನ್ನ ತಾಲ್ಲೂಕು ಕಚೇರಿ ವೃತ್ತದ ಬಳಿಯಿಂದ ಅಂಬೇಡ್ಕರ್ ಭವನದವರೆಗೆ ವಾಲ್ಮೀಕಿ ಭಾವಚಿತ್ರದ ನಡೆದ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು.

Leave a Reply

Your email address will not be published. Required fields are marked *

error: Content is protected !!