
ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದ ಒಳಾಂಗಣ ದುರಸ್ತಿ ಕಾರ್ಯ ಬರದಿಂದ ಸಾಗುತ್ತಿದೆ.
ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ರಚನೆ ಆದ ನಂತರ ಮೊದಲ ಬಾರಿಗೆ ದೇವಾಲಯದ ಒಳಾಂಗಣ ಭಾಗದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ದೇವಾಲಯ ಹಾಗೂ ಭಕ್ತಾಧಿಗಳ ಸಹಕಾರದಿಂದ ದುರಸ್ತಿ ಕಾರ್ಯ ನಡೆಯುತ್ತಿದೆ. ಮುಂಬರುವ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವ ವೇಳೆಗೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ರಂಗಪ್ಪ ತಿಳಿಸಿದರು.
ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯವು ಮುಜರಾಯಿ ಇಲಾಖೆಗೆ ಒಳಪಡುತ್ತದೆ. ಭಕ್ತಾಧಿಗಳ ಅನುಕೂಲಕ್ಕೆ ತಕ್ಕಂತೆ ದೇವಾಲಯವನ್ನು ಕಾಲಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಲಾಗುವುದು.

ಘಾಟಿ ದೇವಾಲಯವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಮಾದರಿ ಅಭಿವೃದ್ಧಿಪಡಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಸಚಿವ ಕೆ.ಎಚ್ ಮುನಿಯಪ್ಪನವರ ಆಸೆ. ಅದರಂತೆ ದೇವಾಲಯಕ್ಕೆ ಸಂಬಂಧಪಟ್ಟ ಒಂದೊಂದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.
ಕ್ಯೂ ನಿಲ್ಲುವ ಸಂಕಿರಣ, ದಾಸೋಹ ಭವನ ನಿರ್ಮಿಸಲು ಪ್ಲ್ಯಾನ್ ಮಾಡಲಾಗಿದೆ. ಅದನ್ನು ಆದಷ್ಟು ಬೇಗ ಕಾಮಗಾರಿ ನಡೆಸಲಾಗುವುದು ಎಂದು ಹೇಳಿದರು.
ಘಾಟಿ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ದೇವಾಲಯದ ಸುತ್ತಾಮುತ್ತ ಪ್ಲಾಸ್ಟಿಕ್ ನಿಷೇಧ ಕುರಿತು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಭಕ್ತಾಧಿಗಳು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ನಂತರ ಪ್ರಾಧಿಕಾರದ ಸದಸ್ಯ ಆರ್.ವಿ ಮಹೇಶ್ ಮಾತನಾಡಿ, ಪ್ರತಿ ವರ್ಷ ಕೋಟ್ಯಾಂತರ ಭಕ್ತಾಧಿಗಳು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಭಕ್ತಾಧಿಗಳ ಅನೂಕಲಕ್ಕೆ ತಕ್ಕಂತೆ ದಾಸೋಹ ಭವನ ನಿರ್ಮಾಣ ಮಾಡಲಾಗುತ್ತದೆ ಎಂದರು.

ಕ್ಷೇತ್ರದಲ್ಲಿ ವೈಜ಼್ಞಾನಿಕ ಕಸ ವಿಲೇವಾರಿ ಮಾಡಿ, ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಕ್ಷೇತ್ರಕ್ಕೆ ಸಂಬಂಧಿಸಿದ ಒತ್ತುವರಿಯಾಗಿರುವ ಜಮೀನನ್ನು ಬಿಡಿಸುಕೊಳ್ಳಲಾಗುವುದು. ದೇವಸ್ಥಾನಕ್ಕೆ ಬರುವ ಮಾರ್ಗದಲ್ಲಿ ಬೀದಿ ದೀಪ ಒದಗಿಸಲಾಗುವುದು ಎಂದು ತಿಳಿಸಿದರು.
ಪ್ರಥಮ ಚಿಕಿತ್ಸೆ ಕೇಂದ್ರವನ್ನು ಆಧುನೀಕರಣಗೊಳಸಿ ಉನ್ನತೀಕರಣ ಮಾಡಲಾಗುವುದು. ಅತೀಶೀಘ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.
ತಿರುಪತಿ ಹಾಗೂ ಧರ್ಮಸ್ಥಳ ಮಾದರಿಯಲ್ಲಿ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುವುದು. ಕುಡಿಯುವ ನೀರು, ಶೌಚಾಲಯ, ಕ್ಯಾಂಟೀನ್, ಮಕ್ಕಳ ಆರೈಕೆ ಕೇಂದ್ರ ನಿರ್ಮಾಣ ಮಾಡಲಾಗುವುದು ಎಂದರು.