ಮನೆ ಮನೆಗೆ ಸರ್ಕಾರ – ಜಿಲ್ಲಾಧಿಕಾರಿ ಎ.ಬಿ ಬಸವರಾಜು

ಮನೆ ಮನೆಗೆ ಪೋಲಿಸ್ ಅಭಿಯಾನದ ಜೊತೆಯಲ್ಲಿ ಇದೀಗ ಮನೆ-ಮನೆಗೆ ಸರ್ಕಾರ ಎಂಬ ಅಭಿಯಾನವನ್ನು ನಡೆಸಲು ಸರ್ಕಾರ ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ 2025 ನೇ ಸಾಲಿನ ಮೂರನೇ ತ್ರೈಮಾಸಿಕ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ, ಪಿಇಎಂಎಸ್ ಮತ್ತು ಆರ್ ಕಾಯ್ದೆ 2013 ರ ಸಮಿತಿ ಸಭೆ, ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನೆ ಮನೆಗೆ ಕಾರ್ಯಾಂಗ ಎಂಬ ಅಭಿಯಾನದಲ್ಲಿ ಪ್ರತಿ ಮನೆಗೆ ಒಂದು ಕ್ಯೂಆರ್ ಕೋಡ್ ಅನ್ನು ಅಂಟಿಸಲಾಗುವುದು ಅದನ್ನು ಸ್ಕ್ಯಾನ್ ಮಾಡಿದರೆ ಗ್ರಾಮ ಪಂಚಾಯತಿಯಿಂದ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳ ಸಂಪರ್ಕ ಸಂಖ್ಯೆ ಸಿಗುತ್ತದೆ. ಜೊತೆಗೆ ನಿಮ್ಮ ಸಮಸ್ಯೆಯನ್ನು ಅವರಿಗೆ ಕ್ಷಣಾರ್ಧದಲ್ಲಿ ತಿಳಿಸಬಹುದು. ಇದರಿಂದ ಅಧಿಕಾರಿಗಳನ್ನು ಹುಡುಕಿಕೊಂಡು ಕಚೇರಿಗಳಿಗೆ ಸುತ್ತುವುದು ತಪ್ಪುತ್ತದೆ ನಿಮ್ಮ ಸಮಸ್ಯೆಗೆ ಬೇಗನೆ ಪರಿಹಾರ ಸಿಗುತ್ತದೆ ಎಂದರು.

ಮನೆ ಮನೆಗೆ ಸರ್ಕಾರ ಅಭಿಯಾನದಡಿ ಸರ್ಕಾರದ ಕಾರ್ಯಾಂಗ ವೈಖರಿ ಸಾರ್ವಜನಿಕರಿಗೆ ಇನ್ನಷ್ಟು ಹತ್ತಿರ ವಾಗಬೇಕು ಎಂಬ ಉದ್ದೇಶ. ಆರಂಭಿಕ ಹಂತದಲ್ಲಿ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮ ಪಂಚಾಯತಿಯನ್ನು ಆಯ್ಕೆ ಮಾಡಲಾಗಿದ್ದು ಕಾರ್ಯಾರಂಭ ಮಾಡಲಾಗುತ್ತದೆ ಎಂದರು.

*13 ದೌರ್ಜನ್ಯ ಪ್ರಕರಣ ದಾಖಲು*
ಜುಲೈ 1 ರಿಂದ ಇಲ್ಲಿಯವರೆಗೂ ಒಟ್ಟು 13 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು ಪರಿಹಾರ ಧನದ ಮಂಜೂರಾತಿ ವಿವರಗಳ ಪರಿಶೀಲನೆ ನಡೆಸಿ 13 ಪ್ರಕರಣಗಳಲ್ಲಿ ನೊಂದ 44 ಸಂತ್ರಸ್ತರಿಗೆ ಒಟ್ಟು 22.30 ಲಕ್ಷ ರೂ.ಗಳ ಪರಿಹಾರ ಧನವನ್ನು ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

*ಸಫಾಯಿ ಕರ್ಮಚಾರಿಗಳಿಗೆ ನಿಗದಿತ ಸಮಯಕ್ಕೆ ವೇತನ ನೀಡಿ*
ಸಫಾಯಿ ಕರ್ಮಚಾರಿಗಳಿಗೆ ನಿಗದಿತ ಸಮಯಕ್ಕೆ ವೇತನ ಪಾವತಿಯಾಗಿಲ್ಲ. ಕೂಡಲೇ ವೇತನ ಪಾವತಿ ಮಾಡಿ ಪಾವತಿಯಲ್ಲಿ ವಿಳಂಬವಾದರೆ ಕ್ರಮ ವಹಿಸಲಾಗುವುದು. ಅವರಿಗೆ ಸಿಗಬೇಕಾದಂತಹ ನಿವೇಶನ, ಮನೆ ಒದಗಿಸಬೇಕು, ಸರ್ಕಾರದಿಂದ ಸಿಗುವಂತಹ ಸಾಲ ಸೌಲಭ್ಯ ಕಲ್ಪಿಸಿ. ಸಫಾಯಿ ಕರ್ಮಚಾರಿಗಳ ಕುಟುಂಬಗಳಿಗೆ ವ್ಯಾಪಾರ, ವ್ಯವಹಾರಕ್ಕಾಗಿ ವಿವಿಧ ಕೌಶಲ್ಯ ತರಬೇತಿ, ಮಾರ್ಗದರ್ಶನ ನೀಡಿ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು

ಸಫಾಯಿ ಕರ್ಮಚಾರಿಗಳಿಗೆ ಕೆಲಸದ ಜೊತೆಗೆ ಆರೋಗ್ಯ ಕಾಳಜಿ ಮುಖ್ಯ, ಕೆಲಸದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಕೈ-ಕಾಲಿಗೆ ಗ್ಲೌಸ್, ರಕ್ಷಣಾತ್ಮಕ ಬಟ್ಟೆ ಧರಿಸುವುದರ ಬಗ್ಗೆ ಅರಿವಿರುವುದಿಲ್ಲ. ಪ್ರತಿ ತಿಂಗಳು ಸಫಾಯಿ ಕರ್ಮಚಾರಿಗಳ ಆರೋಗ್ಯ ತಪಾಸಣೆ ಹಾಗೂ ಕೆಲಸದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಾಗಾರ ಏರ್ಪಡಿಸಿ ಜಾಗೃತಿ ಮೂಡಿಸಿ ಎಂದು ಆರೋಗ್ಯ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೋಲಿಸ್ ವರಷ್ಠಾಧಿಕಾರಿ ಸಿ.ಕೆ ಬಾಬಾ ಅವರು ಮಾತಾನಾಡಿ ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಒಂದು ಕ್ಯೂಆರ್ ಕೋಡ್ ಅಂಟಿಸಲಾಗಿದೆ ನೀವು ಅದನ್ನು ಸ್ಕ್ಯಾನ್ ಮಾಡಿ ಅದರಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದು ಮತ್ತು ಕೆಲವು ಬಾರಿ ಪೊಲೀಸ್ ಅಧಿಕಾರಿಗಳು ದೂರು ತೆಗೆದುಕೊಳ್ಳುವುದಿಲ್ಲ ಎಂಬ ಮಾತು ಕೇಳಿ ಬರುತ್ತವೆ ಅದಕ್ಕಾಗಿ ನೀವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಅದರಲ್ಲಿ ಜಿಲ್ಲೆಯ ಎಲ್ಲಾ ಪೋಲಿಸ್ ಅಧಿಕಾರಿಗಳನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆ ಸಿಗುತ್ತದೆ ನೀವು ಅದರ ಮೂಲಕ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಇನ್ನೂ ಮುಂದೆ ಕುಂದು ಕೊರತೆ ಸಭೆಗಳನ್ನು ಠಾಣಾ ವ್ಯಾಪ್ತಿಯಲ್ಲಿ ನಡೆಸುವುದಿಲ್ಲ ನಾವೇ ನಿಮ್ಮ ಬಳಿ ಬಂದು ಸಭೆಯನ್ನು ನಡೆಸುತ್ತೇವೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ಎನ್.ಅನುರಾಧ, ಡಿವೈಎಸ್ಪಿ ರವಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಟಿ.ಎಲ್.ಎಸ್. ಪ್ರೇಮ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಜಾಗೃತಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!