
ಎಲ್ಲರ ಚಿತ್ತ ಮೈಸೂರಿನ ದಸರಾ ಸಂಭ್ರಮದತ್ತ. ನಾಡಿನ ಎಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ದಸರಾ ಅಂದ ಕೂಡಲೇ ಥಟ್ ಅಂತ ನೆನಪಿಗೆ ಬರೋದು ಬೊಂಬೆಗಳ ಪೂಜೆ. ಹಾಗಾಗಿ ದೇಶ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ನಾಡಿನ ಕಲೆ, ಸಂಸ್ಕೃತಿ, ಈ ನೆಲ, ಜಲದ ಬಗ್ಗೆ ಅರಿವು ಮೂಡಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೊಂಬೆಗಳ ಪ್ರದರ್ಶನ ಮಾಡಿದೆ.
ಹೌದು, ಹೀಗೆ ಡೊಳ್ಳು ಕುಣಿತಕ್ಕೆ ಭರ್ಜರಿ ಸ್ಟೆಪ್ಸ್ ಹಾಕುತ್ತಿರುವ ಸಿಬ್ಬಂದಿ, ಬೊಂಬೆಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಪ್ರಯಾಣಿಕರು, ವಿವಿಧ ಕಥೆಗಳನ್ನ ಸಾರುವ ಬೊಂಬೆಗಳ ಪ್ರದರ್ಶನ ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಬಳಿ. ನವರಾತ್ರಿ ಆಚರಣೆ ಹಿನ್ನೆಲೆ ಮನೆಗಳಲ್ಲಿ ಬೊಂಬೆ ಪೂಜೆ ಮಾಡುವುದು ವಾಡಿಕೆ. ಕೆಲವರು ಕೆಲಸದ ಒತ್ತಡದಿಂದ ಬೊಂಬೆ ಪೂಜೆ ಮಾಡುವುದಿಲ್ಲ. ಹಾಗಾಗಿ ಏರ್ಪೋರ್ಟ್ ನಲ್ಲಿ ಈ ಬಾರಿ ಕಮಲಾಕೃತಿಯಲ್ಲಿ ಬೊಂಬೆಗಳನ್ನ ಪ್ರದರ್ಶನಕ್ಕೆ ಇರಿಸಲಾಗಿದೆ. ಪ್ರಮುಖವಾಗಿ ರಾಮಾಯಣ, ಕುರುಕ್ಷೇತ್ರ, ನರಸಿಂಹ ಅವತಾರಗಳನ್ನು ಸಾರುವ ಬೊಂಬೆಗಳ ಜೊತೆಯಲ್ಲಿ ಗಣಪತಿ, ಚಾಮುಂಡಿ, ಲಕ್ಷ್ಮೀ ಸೇರಿ ವಿವಿಧ ದೇವರ ಬೊಂಬೆಗಳ ಪ್ರದರ್ಶನ ಮಾಡಲಾಗಿದೆ.

ಇನ್ನೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದಲ್ಲಿಯೇ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ. ಹಾಗಾಗಿ ಇಲ್ಲಿಗೆ ದೇಶ ವಿದೇಶದಿಂದ ಪ್ರಯಾಣಿಕರು ಆಗಮಿಸುತ್ತಾರೆ. ಹಾಗಾಗಿಯೇ ಏರ್ಪೋರ್ಟ್ ಆಡಳಿತ ಮಂಡಳಿ ಕರ್ನಾಟಕದ ನೆಲ, ಜಲ, ಸಂಸ್ಕೃತಿ ಸಾರವು ಕಲಾತಂಡಗಳನ್ನು ಕರೆಸಿ ನೃತ್ಯ ಮಾಡಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಡೊಳ್ಳು ಕುಣಿತ, ಗಾರುಡಿ ಗೊಂಬೆ, ಬೇಡರ ನೃತ್ಯ, ತಮಟೆ ವಾದ್ಯ, ಗೊಂಬೆಯಾಟ, ಯಕ್ಷಗಾನ, ಸುಗಮ ಸಂಗೀತ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಟ್ಟು 9 ದಿನಗಳ ಕಾಲ ಆಯೋಜನೆ ಮಾಡಿದ್ದಾರೆ. ಇನ್ನೂ ಈ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಲು ಈ ಬಾರಿ ಸಾರ್ವಜನಿಕರಿಗೂ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ಟಿಕೆಟ್ ಅಥವಾ ದರ ಇಲ್ಲ, ಎಲ್ಲರಿಗೂ ಉಚಿತವಾಗಿ ನೋಡಬಹುದು.
ಒಟ್ಟಾರೆ…ಎಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದ್ದು, ಏರ್ಪೋರ್ಟ್ ನಲ್ಲಿಯೂ ಕೂಡ ದಸರಾ ಸಂಭ್ರಮ ಕಳೆಗಟ್ಟಿದೆ. ಉತ್ತರ ಭಾರತದ ಪ್ರಯಾಣಿಕರು ದಸರಾ ಬೊಂಬೆಗಳನ್ನು ನೋಡಿ ಸಂತಸಪಟ್ಟು, ಸೆಲ್ಫಿ ತೆಗೆದುಕೊಂಡು ಸಂಭ್ರಮಪಟ್ಟರು.