
ಪ್ರಧಾನಿ ನರೇಂದ್ರ ದಾಮೋದರ ಮೋದಿ ಅವರಿಗೆ ಜನುಮದಿನದ ಶುಭಾಶಯಗಳನ್ನು ಕೋರುತ್ತಾ…..
ನರೇಂದ್ರ ಮೋದಿ ಎಂಬ ಮನುಷ್ಯ ಸಾಮರ್ಥ್ಯದ ಅದ್ಭುತ ಜೀವಿಯ ಉದಾಹರಣೆ, ವೈಯಕ್ತಿಕವಾಗಿ ಎತ್ತರದ ಸಾಧನೆ, ಸಾಮಾಜಿಕ ಮೌಲ್ಯಗಳ ವಿಫಲತೆ, ಒಳಗಿನ ಕ್ರೌರ್ಯ ಎಲ್ಲವುಗಳ ಬಗ್ಗೆ ಒಂದು ಸಂಕ್ಷಿಪ್ತ ಅನಿಸಿಕೆ……
ಅದೃಷ್ಟದ ಬೆಂಬಲದೊಂದಿಗೆ, ಶ್ರಮ, ಕ್ರಿಯಾಶೀಲತೆ, ಆರೋಗ್ಯ, ತಂತ್ರ, ಪ್ರತಿತಂತ್ರ, ಕುಟಿಲ ತಂತ್ರ, ದ್ವೇಷ, ಅಸೂಯೆ, ಕ್ರೌರ್ಯ, ಭಂಡತನ, ಶತ್ರು ನಾಶ, ದೂರದೃಷ್ಟಿ, ಸಂಕುಚಿತತೆ, ಛಲ, ಉತ್ಸಾಹ ಎಲ್ಲವನ್ನು ಒಟ್ಟಿಗೆ ಮೇಳೈಸಿಕೊಂಡು ತನ್ನ ವ್ಯಕ್ತಿತ್ವದಲ್ಲಿ ಅಡಕಗೊಳಿಸಿ, ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಆಗಿ ಸುಮಾರು 13 ವರ್ಷಗಳು, ಭಾರತ ದೇಶದ ಪ್ರಧಾನಿಯಾಗಿ 12 ವರ್ಷಗಳ ಒಟ್ಟು ಸುಮಾರು 25 ವರ್ಷಗಳ ಸೋಲರಿಯದ ಸರದಾರನಾಗಿ, ಜಾಗತಿಕವಾಗಿ ಈ ಕ್ಷಣದಲ್ಲಿ ಮಹತ್ವದ ವ್ಯಕ್ತಿಯಾಗಿ ಭಾರತ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ದಾಮೋದರ ಮೋದಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತಾ……
ಹೊರಗೆ ಗಾಂಧಿ ಒಳಗೆ ಗೋಡ್ಸೆ ಮನಸ್ಥಿತಿಯ, ಈಗಲೂ ಅಂದರೆ 25 ವರ್ಷಗಳ ನಂತರವೂ ಬಹುತೇಕ ಭಾರತೀಯರಲ್ಲಿ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡು ಸಾಗುತ್ತಿರುವ ನರೇಂದ್ರ ಮೋದಿಯವರನ್ನು ವಿಮರ್ಶಿಸುವುದು ಈ ಕಾಲಘಟ್ಟದಲ್ಲಿ ಅಷ್ಟು ಸುಲಭವಲ್ಲ. ಎರಡು ಅತಿರೇಕಗಳ ಮಧ್ಯೆ ಸಿಲುಕಿರುವ ಇಂದಿನ ಜನರ ಮಾನಸಿಕತೆಯಲ್ಲಿ ನರೇಂದ್ರ ಮೋದಿ ಕೆಲವರಿಗೆ ದೇವರಾಗಿ ಮತ್ತೆ ಕೆಲವರಿಗೆ ಹಿಟ್ಲರ್ ಮಾದರಿಯ ಸರ್ವಾಧಿಕಾರಿ, ಕ್ರೂರ ವ್ಯಕ್ತಿಯಾಗಿ ಕಾಣುತ್ತಿರುವಾಗ ಯಾರಿಗೂ ಸೇರದ ಪ್ರದೇಶದಲ್ಲಿ ನಿಂತು ವಿಮರ್ಶಿಸುವುದು ತುಂಬಾ ಕಷ್ಟ. ಆದರೂ ಸತ್ಯದ ಹುಡುಕಾಟದಲ್ಲಿ ನಮಗನಿಸಿದ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಭಾರತದ ಸಂವಿಧಾನ ನೀಡಿರುವುದರಿಂದ ಅದನ್ನು ಉಪಯೋಗಿಸಿಕೊಳ್ಳುತ್ತಾ,.
ಟೀ ಮಾರುತ್ತಿದ್ದ ಸಾಮಾನ್ಯ ವ್ಯಕ್ತಿಯೊಬ್ಬ, ಉನ್ನತ ವ್ಯಾಸಂಗವನ್ನೂ ಪಡೆಯದ ವ್ಯಕ್ತಿ ಒಬ್ಬ ತನ್ನೆಲ್ಲ ಸಾಮರ್ಥ್ಯ ಬಳಸಿಕೊಂಡು ಈ ಉನ್ನತ ಸ್ಥಾನಕ್ಕೇರಲು ಕಾರಣವಾದ ಭಾರತದ ಸಂವಿಧಾನಕ್ಕೆ ಕೃತಜ್ಞತೆಯನ್ನು ಅರ್ಪಿಸುತ್ತಾ ,
ದೇಶದ ಪ್ರಧಾನಮಂತ್ರಿಯಾಗಿ ಸಹಜವಾಗಿಯೇ ಲಭಿಸುವ ಅತ್ಯಂತ ಶ್ರೀಮಂತ ಬದುಕನ್ನು ಬದುಕುತ್ತಾ ಅತ್ಯಂತ ಸರಳ ವ್ಯಕ್ತಿ ಎಂದು ಸಾರ್ವಜನಿಕವಾಗಿ ಬಿಂಬಿಸಿಕೊಳ್ಳುವ ಮತ್ತು ಅದನ್ನು ಸಾಮಾನ್ಯ ಜನರ ಮನಸ್ಸಿನಲ್ಲಿ ಹೌದು, ಹೌದು ಎನಿಸಿಕೊಳ್ಳುವ ಚಾಕಚಕ್ಯತೆ ನರೇಂದ್ರ ಮೋದಿಯವರಿಗಿದೆ.
ಕಡು ಭ್ರಷ್ಟಾಚಾರಿಗಳೊಂದಿಗೆ ಸ್ನೇಹ ಬೆಳೆಸುತ್ತಾ, ಅಧಿಕಾರ ಹಂಚಿಕೊಳ್ಳುತ್ತಾ ತಾನೊಬ್ಬ ಭ್ರಷ್ಟಾಚಾರ ನಿರ್ಮೂಲನೆಗಾಗಿ ಸದಾ ಪಣತೊಟ್ಟು ದುಡಿಯುವ ಸ್ವಚ್ಛ ಆಡಳಿತಗಾರ ಎಂದು ಕರೆಸಿಕೊಳ್ಳುವ ಬುದ್ಧಿವಂತಿಕೆಯು ನರೇಂದ್ರ ಮೋದಿಯವರಿಗೆ ಇದೆ.
ಹೆಚ್ಚು ಕಡಿಮೆ 25 ವರ್ಷಗಳ ಅಧಿಕಾರ ಅವಧಿಯಲ್ಲಿ ಸಾರ್ವಜನಿಕವಾಗಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು, ಪತ್ರಕರ್ತರ ಪ್ರಶ್ನೆಗಳ ಸವಾಲನ್ನು ಎದುರಿಸದೆ ಇಡೀ ಮಾಧ್ಯಮ ಲೋಕಕ್ಕೆ ಅವಮಾನ ಮಾಡಿದರೂ, ಮಾಧ್ಯಮ ಲೋಕವೇ ಅವರನ್ನು ಇಂದು ಹಾಡಿ ಹೊಗಳುವ ಮಟ್ಟಕ್ಕೆ ಮಾಧ್ಯಮಗಳನ್ನು ಒಲಿಸಿಕೊಂಡ ಚಾತುರ್ಯ ಮತ್ತು ಸಾಮರ್ಥ್ಯ ನರೇಂದ್ರ ಮೋದಿ ಅವರಿಗೆ ಇದೆ.
ಆರ್ಥಿಕ ನೀತಿ, ವಿದೇಶಾಂಗ ನೀತಿ, ಕೈಗಾರಿಕಾ ನೀತಿ, ಯುದ್ಧ ಮತ್ತು ರಕ್ಷಣಾ ನೀತಿಗಳಲ್ಲಿ ಮಾಧ್ಯಮಗಳು ಬಿಂಬಿಸುವಷ್ಟು ಯಶಸ್ಸು ಸಿಗದಿದ್ದರೂ, ಅನೇಕ ಕಡೆ ವಿಫಲವಾಗಿದ್ದರೂ ಅವುಗಳೆಲ್ಲವನ್ನು ಮೀರಿ ಅತ್ಯಂತ ಯಶಸ್ವಿ ವ್ಯಕ್ತಿ ಎಂದು ಜನಮಾನಸದಲ್ಲಿ ಅಚ್ಚೊತ್ತಿದಂತೆ ಭ್ರಮೆಗೊಳಪಡಿಸುವ ಸಾಮರ್ಥ್ಯವು ನರೇಂದ್ರ ಮೋದಿಯವರಿಗಿದೆ.
ಶತ್ರುಗಳು ಅಥವಾ ವಿರೋಧಿಗಳು ಎಷ್ಟೇ ಸಣ್ಣವರಾಗಿರಲಿ, ತನ್ನ ವಿರುದ್ಧ ಯಾವುದೇ ಟೀಕೆಗಳನ್ನು ಮಾಡಲಿ ಆ ಶತ್ರುಗಳನ್ನು, ವಿರೋಧಿಗಳನ್ನು ರಾಜಕೀಯವಾಗಿಯೋ ಅಥವಾ ಆಡಳಿತ ಯಂತ್ರ ಉಪಯೋಗಿಸಿಕೊಂಡೋ ಅಥವಾ
ನ್ಯಾಯಾಂಗದ ನ್ಯೂನ್ಯತೆಗಳನ್ನು ಬಳಸಿಕೊಂಡೋ ಅಥವಾ ಮಾಧ್ಯಮಗಳ ಮೂಲಕವೋ ಅವರ ವಿರುದ್ಧ ಜನಾಭಿಪ್ರಾಯ ರೂಪಿಸುವ, ಅವರನ್ನು ನಗಣ್ಯ ಮಾಡುವ ವಿಶೇಷ ಸಾಮರ್ಥ್ಯವೂ ಮೋದಿಯವರಿಗಿದೆ.
ಹಾಗೆಂದು ಮೋದಿಯವರು ಎಲ್ಲಾ ತಪ್ಪುಗಳನ್ನೇ ಮಾಡುತ್ತಿದ್ದಾರೆ,, ಮೋದಿಯವರ ಆಡಳಿತ ಕೇವಲ ಭ್ರಮಾತ್ಮಕ ಎಂಬುದು ಖಂಡಿತ ಒಪ್ಪುವ ಮಾತಲ್ಲ. ಮೋದಿಯವರು ಈ ದೇಶದ ಒಟ್ಟು ಚಿತ್ರಣವನ್ನು ಬದಲಾಯಿಸುವ ದಿಕ್ಕಿನಲ್ಲಿ ಶ್ರಮಿಸುತ್ತಿರುವುದೇನೋ ನಿಜ. ಆದರೆ ಮೂಲಭೂತವಾಗಿ ಅವರಲ್ಲಿರುವ ಸರ್ವಾಧಿಕಾರಿ ಧೋರಣೆ, ಜನರನ್ನು ನಿಯಂತ್ರಣಕ್ಕೊಳಪಡಿಸಿ ಗುಲಾಮರನ್ನಾಗಿ ಮಾಡಿಕೊಳ್ಳುವ ಮನಸ್ಥಿತಿ, ಅಪಾರ ಪ್ರಚಾರಪ್ರಿಯತೆ, ಅಧಿಕಾರ ದಾಹ ಎಲ್ಲವೂ ಮೇಳೈಸಿರುವುದರಿಂದ ಅವರ ಕೆಲವು ಒಳ್ಳೆಯ ಕೆಲಸಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸುವುದು ಕಷ್ಟ.
ಮಾಧ್ಯಮಗಳ ವರದಿ ಪ್ರೇರಿತವೋ, ತಂತ್ರಜ್ಞಾನದ ಬಲವೋ, ನರೇಂದ್ರ ಮೋದಿಯವರ ಸ್ವತಃ ಮಾತಿನ ಶೈಲಿಯೋ, RSS ಸಂಘಟನೆಯ ಶಕ್ತಿಯೋ, ಹಿಂದಿನ ಸರ್ಕಾರಗಳ ವೈಫಲ್ಯವೋ, ಇಂದಿನ ವಿರೋಧ ಪಕ್ಷಗಳ ಅಸಾಮರ್ಥ್ಯವೋ, ಸಾಮಾನ್ಯ ಜನರ ಹೆಚ್ಚಿನ ನಿರೀಕ್ಷೆಗಳೋ ಏನೋ ಒಟ್ಟಿನಲ್ಲಿ ಸದ್ಯಕ್ಕೆ ಅವರನ್ನು ಒಬ್ಬ ಸೂಪರ್ ಮ್ಯಾನ್ ರೀತಿಯಲ್ಲಿ ಚಿತ್ರಿಸಲಾಗಿದೆ.
ಬಹುತೇಕ ಯಾರನ್ನೇ ಕೇಳಿದರು
” ಮೋದಿ ಮೋದಿ ಮೋದಿ ” ಎಂದೇ ಹೇಳುತ್ತಾರೆ. ಅವರ ವಿರುದ್ಧದ ಧ್ವನಿ ತುಂಬಾ ಕ್ಷೀಣವಾಗಿದೆ.
ಸತ್ಯ ಮತ್ತು ಭವಿಷ್ಯದ ನೈಜತೆ ಏನೇ ಇರಲಿ, ಈ ಕ್ಷಣದಲ್ಲಿ ಭಾರತದ ಬಹುಸಂಖ್ಯಾತ ಜನ ಮೋದಿಯವರಲ್ಲಿ ತುಂಬಾ ತುಂಬಾ ಭರವಸೆ ಹೊಂದಿದ್ದಾರೆ. ವಾಸ್ತವದಲ್ಲಿ ಒಬ್ಬ ವ್ಯಕ್ತಿಯ ಮೇಲೆ ಆಡಳಿತಾತ್ಮಕವಾಗಿ ಅಷ್ಟೊಂದು ನಿರೀಕ್ಷೆ ಮತ್ತು ಒತ್ತಡ ಹೇರುವುದು ಸಿನಿಕತನವಾಗುತ್ತದೆ. ಸಿನಿಮಾಗಳಲ್ಲಿ ಮಾತ್ರ ಅದು ಪ್ರೇಕ್ಷಕರ ನಿರೀಕ್ಷೆ ತಲುಪಲು ಸಾಧ್ಯ. ಸಮಾಜದಲ್ಲಿ ಅಸಾಧ್ಯವೇ ಸರಿ.
ಪ್ರಜಾಪ್ರಭುತ್ವದಲ್ಲಿ ಬಹುಮತವೇ ಅಂತಿಮ. ಅದನ್ನು ಗೌರವಿಸುವುದು ಮತ್ತು ಟೀಕಿಸುವುದು ಅವರವರ ಸ್ವಾತಂತ್ರ್ಯ ಆದರೆ ಅದನ್ನು ಒಪ್ಪಿಕೊಳ್ಳುವುದು ಮಾತ್ರ ಅನಿವಾರ್ಯ ಮತ್ತು ನಮ್ಮ ಕರ್ತವ್ಯ ಕೂಡ.
QUALITY ಮತ್ತು QUANTITY ಎಂಬ ಎರಡು ಅಂಶಗಳ ಮುಖಾಂತರ ನಾವು ನರೇಂದ್ರ ಮೋದಿಯವರ ಮತ್ತು ದೇಶದ ಅಭಿವೃದ್ಧಿಯನ್ನು ನೋಡೋಣ. ಹಿಂದಿನ ಸರ್ಕಾರಗಳ ಒಳಿತು ಕೆಡಕುಗಳು ಮತ್ತು ಅದರ ಪರಿಣಾಮಗಳ ಬಗ್ಗೆ ಇಲ್ಲಿ ವಿಮರ್ಶೆ ಬೇಡ. ಏಕೆಂದರೆ ಅವರ ತಪ್ಪುಗಳನ್ನು ಅಥವಾ ಸಾಧನೆಗಳನ್ನು ಹೋಲಿಸಿಕೊಂಡು ಈಗಿನ ವಿಫಲತೆಯನ್ನು ಅಥವಾ ಯಶಸ್ಸನ್ನು ಸಮರ್ಥಿಸಿಕೊಂಡರೆ ಅಥವಾ ವಿರೋಧಿಸಿದರೆ ಅದು ಚುನಾವಣಾ ತಂತ್ರವಾಗುತ್ತದೆ. ಇಲ್ಲಿ ಕೇವಲ ಈ ಕ್ಷಣದ ವಾಸ್ತವ ಹುಡುಕಾಟ ಮಾಡೋಣ.
ಅತ್ಯುತ್ಸಾಹಿ, ಮಹತ್ವಾಕಾಂಕ್ಷಿ, ಧಣಿವರಿಯದ ಕೆಲಸಗಾರರರಾದ ಮೋದಿಯವರ 12 ವರ್ಷಗಳ ಆಡಳಿತ ಗಮನಿಸಿದರೆ ಅವರು Quantity ಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಅಂಕಿ ಸಂಖ್ಯೆಗಳಲ್ಲಿ ಭಾರತವನ್ನು ಬೃಹತ್ ಪ್ರಮಾಣದಲ್ಲಿ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟು ಆರ್ಥಿಕ ಗಾತ್ರವೇ ಇರಲಿ, ಡಿಜಲೀಕರಣವೇ ಇರಲಿ, ಆರೋಗ್ಯ ವಿಮೆಯೇ ಇರಲಿ, ಸ್ವಚ್ಛ ಭಾರತ್ ಇರಲಿ, ಬ್ಯಾಂಕುಗಳ ಕೇಂದ್ರೀಕರಣವೇ ಇರಲಿ ಎಲ್ಲವೂ ಗಾತ್ರದಲ್ಲಿ ದೊಡ್ಡದಾಗಿ ಕಾಣುತ್ತವೆ. ಆದರೆ ಗುಣಮಟ್ಟ ತುಂಬಾ ಕೆಳಮಟ್ಟದಲ್ಲಿದೆ. ಬಹುಶಃ ಅವರ ಯೋಚನೆಗಳು ಸರಿಯಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಅದಕ್ಕೆ ಕಾರಣ ಅವರು ಈ ವ್ಯವಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಎಲ್ಲರೂ ತಮ್ಮಂತೆ ಎಂದು ತಪ್ಪಾಗಿ ಭಾವಿಸಿರಬಹುದು.
ಮೂಲಭೂತವಾಗಿ ಮೋದಿಯವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ ತಜ್ಞರಲ್ಲ. ಅವರೊಬ್ಬ ರಾಜಕೀಯ ಮತ್ತು ವ್ಯಾವಹಾರಿಕ ವಿಷಯಗಳಲ್ಲಿ ಹೆಚ್ಚಿನ ಜ್ಞಾನ ಹೊಂದಿದ್ದಾರೆ. ಅವರ ಅಹಂ ಬಹುಶಃ ಇದನ್ನು ಒಪ್ಪುತ್ತಿಲ್ಲ. ಕಾರ್ಯಾಂಗ ಶಾಸಕಾಂಗ ಅಥವಾ ಸಚಿವ ಸಂಪುಟದ ಎಲ್ಲವನ್ನೂ ತಾವೇ ನಿರ್ಧರಿಸುವ ಮತ್ತು ನಿಯಂತ್ರಿಸುವ ಮನೋಭಾವ ಅವರ ಕಾರ್ಯವೈಖರಿಯಲ್ಲಿ ಕಂಡುಬರುತ್ತಿದೆ.
ಅಲ್ಲದೆ ಆರ್ಥಿಕ ಮತ್ತು ತಾಂತ್ರಿಕ ಅಭಿವೃದ್ಧಿ ಮಾತ್ರವೇ ದೇಶದ ಅಭಿವೃದ್ಧಿ ಎಂಬ ತಪ್ಪು ಕಲ್ಪನೆ ಅವರ ಮಾತುಗಳಲ್ಲಿ ಕಾಣುತ್ತಿದೆ.
ಜೊತೆಗೆ ಅವರ ನುಡಿಗಳಲ್ಲಿ ಕಾಣುವ ಆದರ್ಶ ಅವರ ನಡೆಗಳಲ್ಲಿ ಇಲ್ಲ. ಅವರ ಅಭಿಮಾನಿಗಳು ಅವರನ್ನು ಅತಿಮಾನುಷ ವ್ಯಕ್ತಿಯಾಗಿ ಚಿತ್ರಸಿ ಮೇಲ್ನೋಟದ ಸಾಧನೆಯನ್ನೇ ಅತಿರಂಜಿತ ಪ್ರಚಾರ ನೀಡಿ ದಾರಿ ತಪ್ಪಿಸುತ್ತಿರುವುದು, ಇತರರ ತಪ್ಪುಗಳನ್ನು ಎತ್ತಿ ತೋರಿಸಿ ಮೋದಿಯವರ ತಪ್ಪುಗಳನ್ನು ಸಮರ್ಥಿಸುತ್ತಿರುವುದು ಒಂದು ಕೆಟ್ಟ ಬೆಳವಣಿಗೆಯಾಗಿದೆ.
ಅವರ ಆಡಳಿತಾತ್ಮಕ ಸಾಧನೆಗಳ ದೊಡ್ಡ ಪಟ್ಟಿ ಅವರ ಅಭಿಮಾನಿಗಳು ನೀಡಿದರೆ, ಅವರ ವಿಫಲತೆಯ ಪಟ್ಟಿಯನ್ನು ಅವರ ವಿರೋಧಿಗಳು ನೀಡುತ್ತಾರೆ. ಅದು ವ್ಯಕ್ತಿ, ಪಕ್ಷ ಮತ್ತು ಸಿದ್ದಾಂತ ಪ್ರೇರಿತ……….
ವೈಯಕ್ತಿಕ ಬದುಕಿನ ಬಹುತೇಕ ಸಂಬಂಧಗಳನ್ನು ಅವರು ತ್ಯಜಿಸಿರುವುದರಿಂದ, ಯೌವ್ವನದ ದಿನಗಳಿಂದಲೇ ಸಂಘ, ಸಂಸ್ಥೆ ಮತ್ತು ಅಧಿಕಾರ ಕೇಂದ್ರದ ಸುತ್ತಲೇ ಇರುವುದರಿಂದ, ಶ್ರೀಮಂತರ ಒಡನಾಟ ಹೆಚ್ಚು ಜೊತೆಯಾಗಿರುವುದರಿಂದ ಅವರನ್ನು ಹಣದ ಮೋಹ ಈಗಿನ ರಾಜಕಾರಣಿಗಳಷ್ಟು ಕಾಡಿಲ್ಲ. ಮೇಲ್ನೋಟಕ್ಕೆ ನಮಗೆ ಇರುವ ಮಾಹಿತಿಯಂತೆ ಯಾವುದೇ ದುರಭ್ಯಾಸಗಳಿಗೂ ಒಳಗಾದಂತೆ ಕಾಣುತ್ತಿಲ್ಲ. ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡಿದ್ದಾರೆ. ಹಿಂದುತ್ವ ಮತ್ತು ದೇಶಸೇವೆ ಮೊದಲ ಆದ್ಯತೆ ಎಂದು ಪರಿಗಣಿಸಿತ್ತಾರೆ………….
ಆದರೆ,………
ಹಣದ ವ್ಯಾಮೋಹಕ್ಕೆ ಬದಲಾಗಿ ಪ್ರಚಾರದ ಮೋಹ ಅವರಿಗೆ ಗೀಳಿನಂತೆ ಇರುವುದು ಕಂಡುಬರುತ್ತದೆ. ಪ್ರತಿ ಕ್ಷಣ ಪ್ರತಿ ಕಾರ್ಯಕ್ರಮದ ಮೂಲ ಉದ್ದೇಶಕ್ಕಿಂತ ಅದರಿಂದ ಸಿಗಬಹುದಾದ ಪ್ರಚಾರಕ್ಕೆ ಅವರ ಮನ ಹಾತೊರೆಯುವುದನ್ನು ಗುರುತಿಸಬಹುದು.
ಆಡಳಿತಾತ್ಮಕ ಸಾಮರ್ಥ್ಯಕ್ಕಿಂತ ವ್ಯಾಪಾರಿ ಮನೋಭಾವ ಅವರ ಪ್ರತಿ ನಡೆಯಲ್ಲೂ ಕಾಣಬಹುದು. ಗುಜರಾತಿನ ಜನರ ಸಹಜ ಗುಣ ಇದು ಎಂದು ಕೇಳಲ್ಪಟ್ಟಿದ್ದೇನೆ. (ಅದರ ಬಗ್ಗೆ ಖಚಿತವಾಗಿ ಹೇಳುವಷ್ಟು ಗುಜರಾತಿನ ಜನರ ಜೀವನ ಅಧ್ಯಯನ ಮಾಡಿಲ್ಲ.)
ಅಮಿತಾಭ್, ತೆಂಡೂಲ್ಕರ್, ಅಂಬಾನಿ, ಅದಾನಿ, ಮುಂತಾದ ಅತಿಗಣ್ಯ ವ್ಯಕ್ತಿಗಳು, ಡೊನಾಲ್ಡ್ ಟ್ರಂಪ್, ಪುಟಿನ್ ಮುಂತಾದ ವಿದೇಶಗಳ ಅಧ್ಯಕ್ಷರುಗಳು, ವಿಶ್ವದ ಬೃಹತ್ ಕಂಪನಿಗಳ ಸಿಇಓ ಗಳು ಮುಂತಾದ ಅತಿ ಜನಪ್ರಿಯ ವ್ಯಕ್ತಿಗಳ ಒಡನಾಟಕ್ಕೆ ಕಾತರಿಸುವ ಮೋದಿಯವರ ಅಂತರಾಳದಲ್ಲಿ ಬಡವರು, ನಿರ್ಗತಿಕರು, ದೈನೇಸಿಗಳ ಬಗ್ಗೆ ನಿರ್ಲಕ್ಷ್ಯ ಮತ್ತು ಅಸಹನೆ ಸೂಕ್ಷ್ಮವಾಗಿ ಗಮನಿಸುವ ಎಲ್ಲರಿಗೂ ತಿಳಿಯುತ್ತದೆ.
ಬಡತನ ಒಂದು ಶಾಪ ಎಂಬುದಕ್ಕಿಂತ ಬಡವನೇ ಈ ದೇಶದ ಶತ್ರು ಎಂಬ ಅಭಿಪ್ರಾಯ ಅವರಲ್ಲಿ ಅಡಕವಾಗಿದೆ. ಅವರ ಬಹುತೇಕ ಕನಸಿನ ಯೋಜನೆಗಳಲ್ಲಿ ಇದು ವ್ಯಕ್ತವಾಗುತ್ತದೆ.
ಮೇಲ್ನೋಟಕ್ಕೆ ಎಲ್ಲಾ ವಿಷಯಗಳ ಬಗ್ಗೆ ತಿಳಿದಿದೆ ಎಂಬ ಧೈರ್ಯ ಅವರಿಗೆ ಇದ್ದರೂ ವಿಷಯಗಳ ಆಳದ ಕೊರತೆ ಎದ್ದು ಕಾಣುತ್ತದೆ. ಆ ಕಾರಣಕ್ಕಾಗಿಯೇ ಭಾಷಣಗಳಲ್ಲಿ ಪ್ರವಚನ ರೂಪದ ಆದರ್ಶಗಳಿಗೆ ಒತ್ತು ಕೊಟ್ಟು, ಭಾವನಾತ್ಮಕ ವಿಷಯಗಳನ್ನು, ಸ್ಥಳಿಯ ವಿಷಯಗಳನ್ನು ಪ್ರಸ್ತಾಪಿಸಿ ಜನರಿಂದ ಚಪ್ಪಾಳೆ ಗಿಟ್ಟಿಸುತ್ತಾರೆ.
ಅಪಾರ ನೆನಪಿನ ಶಕ್ತಿ,
ಧಣಿವರಿಯದ ಉತ್ಸಾಹ,
ದೇಶವನ್ನು ವಿಶ್ವ ದರ್ಜೆಯ ಮಟ್ಟಕ್ಕೆ ಏರಿಸಬೇಕೆಂಬ ಹಂಬಲ, ಆಧುನಿಕ ಭಾರತದ ಶಿಲ್ಪಿ ತಾನಾಗಬೇಕು ಎಂಬ ಹಿರೋಹಿಸಂ ಸ್ವಭಾವ ಅವರಲ್ಲಿರುವ ಉತ್ತಮ ಗುಣಮಟ್ಟದ ಪ್ರಾಮಾಣಿಕ ಆಶಯಗಳು.
ಆದರೆ,
ವಾಸ್ತವದಲ್ಲಿ ಅದನ್ನು ಅನುಷ್ಠಾನಕ್ಕೆ ತರಲು ಬೇಕಾದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಚಿಂತನಾ ಸಾಮರ್ಥ್ಯ, ಅಧ್ಯಯನ, ಭಾರತೀಯ ಸಮಾಜದ ನೈಜ ಚಿತ್ರಣ ಅವರ ಗ್ರಹಿಕೆಗೆ ಸಿಗುತ್ತಿಲ್ಲ.
ಗೌರವಾನ್ವಿತ ನರೇಂದ್ರ ಮೋದಿಯವರು ಭಾರತವನ್ನು ಮೇಲಿನಿಂದ ನೋಡುತ್ತಿದ್ದಾರೆ, ಇಲ್ಲಿನ ಸಂಸ್ಕೃತಿ, ಮಾನವ ಸಂಪನ್ಮೂಲ, ಅಪಾರ ಪ್ರಾಕೃತಿಕ ಸಂಪತ್ತು ಮತ್ತು ಅದರ ಉಪಯೋಗಗಳ ಬಗ್ಗೆ ಹೆಚ್ಚಿನ ಭಾವನಾತ್ಮಕ ಪ್ರಾಮುಖ್ಯತೆ ನೀಡುತ್ತಿದ್ದಾರೆ ಮತ್ತು ಹಾಗೆಯೇ ಬಿಂಬಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ನಿಜವಾದ ಭಾರತವನ್ನು ನೋಡಬೇಕಿರುವುದು ಕೆಳಸ್ತರದ ಜೀವನಮಟ್ಟದಿಂದ. ಬಹುತೇಕ ಜನರ ಜೀವನ ಶೈಲಿ ಅದೇ ಮಟ್ಟದಲ್ಲಿ ಇದೆ. ಆಗ ಅವರು ರೂಪಿಸುವ ಕಾರ್ಯಕ್ರಮಗಳ ರೀತಿ ಬದಲಾಗಬಹುದು. ಇಲ್ಲದಿದ್ದರೆ ಶ್ರೀಮಂತರ ತೆವಲಾದ ಸ್ಮಾರ್ಟ್ ಸಿಟಿ, ಸ್ಮಾರ್ಟ್ ವಿಲೇಜ್, ಸ್ವಚ್ಛ ಭಾರತ್ ಬುಲೆಟ್ ಟ್ರೈನ್ ಮುಂತಾದ ವಿಷಯಗಳೇ ಪ್ರಾಮುಖ್ಯತೆ ಪಡೆಯುತ್ತದೆ. ಈ ಯೋಜನೆಗಳ ಬಗ್ಗೆ ಬೇಸರವಿಲ್ಲ. ಆದರೆ ಭಾರತದ ಜನರ ಅವಶ್ಯಕತೆ ಇದನ್ನು ಮೀರಿದ್ದು. ಟಾಟಾ, ಬಿರ್ಲಾ, ಅಕ್ಷಯ್ ಕುಮಾರ್, ಕೊಹ್ಲಿ ಅವರಿಗೆ ಸ್ವಚ್ಚತೆ ಮುಖ್ಯವಾಗಬಹುದು. ಈ ದೇಶದ ಇನ್ನೂ ಅಸಂಖ್ಯಾತ ಜನರಿಗೆ ಕನಿಷ್ಠ ಅವಶ್ಯಕತೆ ಪೂರೈಕೆಯ ಬದುಕೇ ಮುಖ್ಯವಾಗಿದೆ.
ಇಂದಿನ ಯುವ ಜನಾಂಗದಲ್ಲಿ ಕಂಡು ಬರುವ ಪ್ರಾರಂಭದ ಅತ್ಯುತ್ಸಾಹ, ಸೋಷಿಯಲ್ ಮೀಡಿಯಾ ವ್ಯಸನ, ದಿಢೀರ್ ಶ್ರೀಮಂತಿಕೆಯ ಹಂಬಲ, ನಾನೇ – ನನ್ನಿಂದಲೇ ಎನ್ನುವ ಅಹಂ, ಹಣ ಅಧಿಕಾರದಿಂದಲೇ ಎಲ್ಲಾ ಸಾಧ್ಯ ಎನ್ನುವ ತಪ್ಪು ಕಲ್ಪನೆ, ಆತುರ ಮತ್ತು ಬೇಗ ಫಲಿತಾಂಶದ ನಿರೀಕ್ಷೆ, ಸೋಲನ್ನು ಒಪ್ಪಿಕೊಳ್ಳದ ಅಸಹನೆ ಮುಂತಾದ ಕೆಲವು ದುಡುಕು ಸ್ವಾಭಾವದ ಸಾಂಕೇತಿಕ ರೂಪದಂತೆ ಮೋದಿಯವರು ಕಾಣುತ್ತಾರೆ.
ಇರಲಿ,
ಹಾಗೆಂದು ಹಿಂದಿನ ಪ್ರಧಾನಿಗಳೆಲ್ಲಾ ಸರ್ವಗುಣ ಸಂಪನ್ನರು ಎಂಬುದು ನನ್ನ ಅಭಿಪ್ರಾಯವಲ್ಲ. ಎಲ್ಲರಲ್ಲೂ ಸಾಮರ್ಥ್ಯ ಮತ್ತು ಮಿತಿಗಳು ಇದ್ದೇ ಇರುತ್ತದೆ. ಈ ಕ್ಷಣದಲ್ಲಿ ಭಾರತದ ಪ್ರಭಾವಿ ಪ್ರಧಾನಿ ನರೇಂದ್ರ ಮೋದಿಯವರು ಆಗಿರುವುದರಿಂದ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಬಗ್ಗೆ ಮಾತ್ರ ಒಂದು ಸಣ್ಣ ಅಭಿಪ್ರಾಯ ಅದೂ ಮಾಧ್ಯಮಗಳಲ್ಲಿ ಅವರ ಬಗ್ಗೆ ಗಮನಿಸಿದ ಮಾಹಿತಿಯಂತೆ.
ನಿಮ್ಮ ಅಭಿಪ್ರಾಯ ಇದಕ್ಕಿಂತ ಭಿನ್ನವಾಗಿದ್ದರೆ ಅದನ್ನೂ ಗೌರವಪೂರ್ವಕವಾಗಿ ಸ್ವಾಗತಿಸುತ್ತಾ……
ಏನೇ ಅಗಲಿ ಅವರು ಭಾರತದ ಪ್ರಧಾನ ಮಂತ್ರಿ, ಅವರ ಯಶಸ್ಸಿನಲ್ಲಿ ದೇಶದ ಯಶಸ್ಸು ಅಡಗಿದೆ. ಅವರಿಗೆ ಶುಭಾಶಯಗಳನ್ನು ಕೋರುತ್ತಾ…….
ಭಾರತದ ತಳಮಟ್ಟದ ಜನರನ್ನು ಮೇಲೆತ್ತುವ, ಅಭಿವೃದ್ಧಿಯನ್ನು ಎಲ್ಲರಿಗೂ ಆದಷ್ಟೂ ಸಮನಾಗಿ ಹಂಚುವ ಆಡಳಿತ ಅವರಿಂದ ಮೂಡಿಬರಲಿ Quantity ಜೊತೆ Quality ಸಹ ಅವರ ಆದ್ಯತೆಯಾಗಲಿ ಎಂಬ ಆಶಯದೊಂದಿಗೆ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ