ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಸಿಡಿಸಿದ ಆಕರ್ಷಕ ಶತಕ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಅರ್ಧ ಶತಕದ ನೆರವಿನಿಂದ ಸನ್ ರೈಸರ್ ಹೈದರಾಬಾದ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಆರ್ ಸಿಬಿ ಜಯ ಗಳಿಸಿತು.
ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆರ್ ಸಿ ಬಿ ತಂಡ ಉತ್ತಮ ಆರಂಭ ಪಡೆಯಿತು. ಬ್ರೆಸ್ ವೆಲ್ ರ ಸ್ಪಿನ್ ಮೋಡಿಗೆ ಅರಂಭಿಕರಿಬ್ಬರು ಬೇಗನೆ ಪೆವಿಲಿಯನ್ ಸೇರಿದರು.
ನಂತರ ಕ್ರೀಸ್ ಗೆ ಬಂದ ಹೆನ್ರಿಕ್ ಕ್ಲಾಸಿನ್(104) ಹಾಗೂ ಹ್ಯಾರಿ ಬ್ರೂಕ್(27) ಉತ್ತಮ ಜೊತೆಯಾಟ ಆಡಿದರು. ಆರ್ ಸಿ ಬಿ ಬೌಲರ್ ಗಳನ್ನು ಬೆಂಡೆತ್ತಿದ ಕ್ಲಾಸಿನ್ ತಮ್ಮ ಚೊಚ್ಚಲ ಐಪಿಎಲ್ ಶತಕ ಸಿಡಿಸಿ ಸಂಭ್ರಮಿಸಿದರು.
ಇವರ ಶತಕದ ನೆರವಿನಿಂದ 5 ವಿಕೆಟ್ ಗಳ ನಷ್ಟಕ್ಕೆ 186 ರನ್ ಗನನ್ನು ಗಳಿಸಲು ಸಾಧ್ಯವಾಯಿತು. ಆರ್ ಸಿ ಬಿ ಪರ ಬ್ರೇಸ್ ವೆಲ್ 2 ವಿಕೆಟ್ ಹಾಗೂ ಹರ್ಷಲ್, ಶಬಾಜ್, ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
187 ರನ್ ಗಳ ಗುರಿ ಬೆನ್ನಟ್ಟಿದ ಆರ್ ಸಿ ಬಿ ಉತ್ತಮ ಆರಂಭ ಪಡೆಯಿತು.ತಾರ ಆಟಗಾರ ವಿರಾಟ್ ಕೊಹ್ಲಿ(100) ಐಪಿಎಲ್ ನಲ್ಲಿ ತಮ್ಮ 6 ನೇ ಶತಕ ಸಿಡಿಸಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಇದರ ಜೊತೆಯಲ್ಲಿ ನಾಯಕ ಫಾಫ್ ದುಪ್ಲೆಸಿಸ್(71)ಈ ಪಂದ್ಯದಲ್ಲೂ ಕೂಡ ತಮ್ಮ ಮಿಂಚಿನ ಅರ್ಧ ಶತಕ ದಾಖಲಿಸಿದರು.
ಇವರಿಬ್ಬರ ದಾಖಲೆಯ 172 ರನ್ ಗಳ ಜೊತೆಯಾಟದ ನೆರವಿನಿಂದ ಆರ್ ಸಿ ಬಿ ತಂಡ 8 ವಿಕೆಟ್ ಗಳ ಸುಲಭ ಜಯ ಸಾಧಿಸಿತು. ಇದರಿಂದ ಆರ್ ಸಿ ಬಿ ಯ ಪ್ಲೇ ಆಫ್ ನ ಕನಸು ಮತ್ತಷ್ಟು ಭದ್ರವಾಯಿತು.
ಭಾನುವಾರ ನಡೆಯುವ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದರೆ ಆರ್ ಸಿ ಬಿ ಪ್ಲೇ ಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗುತ್ತದೆ.