
ತುಮಕೂರು ಜಿಲ್ಲೆ ಸುಂಕಾಪುರದ ಟಿ.ಬಿ. ಕೆನಾಲ್ 70 ನೇ ಕಿ.ಮೀ.ನಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಡಿಸಿಎಂ ಡಿಕೆಶಿ ಅವರು ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಶಾಸಕರಾದ ಗುಬ್ಬಿ ಶ್ರೀನಿವಾಸ್, ಡಾ. ರಂಗನಾಥ್ ಹಾಗೂ ಅಧಿಕಾರಿಗಳ ಜೊತೆ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕ್ಷೇತ್ರವೊಂದಕ್ಕೆ ಸೀಮಿತವಾಗದೆ, ನಾನು ಕರ್ನಾಟಕ ರಾಜ್ಯದ ನೀರಾವರಿ ಸಚಿವನಾಗಿ ತುಮಕೂರಿನ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ. ತುಮಕೂರು ನನಗೆ ಅತ್ಯಂತ ಹತ್ತಿರವಾದ ಜಿಲ್ಲೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ನಾನು ನೀರಾವರಿ ಸಚಿವನಾಗಿದ್ದಾಗ ಈ ಯೋಜನೆಗೆ ಮಂಜೂರಾತಿ ನೀಡಲಾಗಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಆಗ ಕೇವಲ 600 ಕೋಟಿ ರೂ.ಗಳಲ್ಲಿ ಮುಗಿಯಬೇಕಿದ್ದ ಈ ಕಾಮಗಾರಿಯ ವೆಚ್ಚ ಈಗ 1000 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ತಿಳಿಸಿದರು.

ಈಗಾಗಲೇ ನಾವು ಈ ಯೋಜನೆಯ ಪೈಪ್‌ಗಳ ಖರೀದಿಗೆ 400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬಹುದು. ಸಮುದ್ರಕ್ಕೆ ಹರಿದು ಹೋಗುವ ನೀರನ್ನು ರೈತರ ಉಪಯೋಗಕ್ಕೆ ಬಳಸಿಕೊಳ್ಳಲು ಚಾನಲ್‌ಗಳ ಮೂಲಕ ನೀರು ಹರಿಸುವ ಕೆಲಸ ನಡೆಯಬೇಕು ಎಂದರು.
ನಮ್ಮ ಈ ಯೋಜನೆ ಒಂದು ಅಭಿವೃದ್ಧಿ ಕೆಲಸವಾಗಿದ್ದು, ಇದರಲ್ಲಿ ರಾಜಕೀಯ ಬೆರೆಸಬಾರದು. ತುಮಕೂರು ಜಿಲ್ಲೆಯ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಯಾವುದೇ ರೈತರಿಗೆ ನೀರು ಹಂಚಿಕೆಯಲ್ಲಿ ಅನ್ಯಾಯವಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಹೋರಾಟಗಾರರಿಗೆ ನನ್ನದೊಂದು ವಿನಂತಿ, ನಾವು ಬೇರೆ ರಾಜ್ಯಗಳ ಜೊತೆ ನೀರಿಗಾಗಿ ಹೋರಾಟ ಮಾಡುವ ಹಾಗೆ ನಮ್ಮಲ್ಲೇ ಹೋರಾಟ ಮಾಡುವುದು ಬೇಡ. ನಾವೆಲ್ಲರೂ ಒಂದೇ ರಾಜ್ಯದವರು, ರಕ್ತ ಮತ್ತು ಸಂಬಂಧಗಳನ್ನು ಹಂಚಿಕೊಂಡಿದ್ದೇವೆ. ಆದ್ದರಿಂದ ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಯೋಜನೆಯಲ್ಲಿ ಒಂದು ತಾಲ್ಲೂಕಿಗೆ ಎಷ್ಟು ನೀರು ಒದಗಿಸಲಾಗಿದೆಯೋ ಅಷ್ಟನ್ನೇ ಬಳಸಿಕೊಳ್ಳಲು ಅವಕಾಶವಿದೆ. ಯಾವುದೇ ಅನಧಿಕೃತ ಗೇಟ್‌ಗಳನ್ನು ಹಾಕಲು ಅವಕಾಶವಿಲ್ಲ. ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ತತ್ವದ ಮೇಲೆ ನಾವು ಈ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದರು.