ಸಚಿವ ಕೆ.ಎಚ್.ಮುನಿಯಪ್ಪವರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರನ್ನು ಯಾವುದೇ ಕಾರಣಕ್ಕೂ ಕಡೆಗಣನೆ ಮಾಡಿಲ್ಲ- ಯೂತ್ ಕಾಂಗ್ರೆಸ್ ಸ್ಪಷ್ಟನೆ

ಆಹಾರ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪನವರು ಅನುಭವಿ, ಹಿರಿಯ ರಾಜಕಾರಣಿ. ಕೇಂದ್ರ, ರಾಜ್ಯ ರಾಜಕಾರಣದಲ್ಲಿ ಯಾರಿಗೂ ನೋವುಂಟು ಮಾಡದೇ, ಯಾರನ್ನೂ ಕಡೆಗಣಿಸದೇ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರನ್ನು ಯಾವುದೇ ಕಾರಣಕ್ಕೂ ಕಡೆಗಣನೆ ಮಾಡುವುದಿಲ್ಲ. ಕಡೆಗಣನೆ ಮಾಡಿರುವ ಇತಿಹಾಸವಿಲ್ಲ ಎಂದು ಯುವ ಕಾಂಗ್ರೆಸ್ ಸಮಿತಿಯ ತಾ.ಪ್ರ.ಕಾ ಶಿವಕುಮಾರ್ ಆರ್.ವಿ ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪನವರು ಸ್ಥಳೀಯ ಕಾಂಗ್ರೆಸ್ ಪಕ್ಷದ ಚುನಾಯಿತ ಸದಸ್ಯರನ್ನು ಆಹ್ವಾನಿಸದೇ ಕಡೆಗಣಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ.‌ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಸೇರಿದಂತೆ ಹಿರಿಯ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಂದು ವೇಳೆ ಭಿನ್ನಾಭಿಪ್ರಾಯವಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಕುಳಿತು ಮಾತಾಡಿ ಬಗೆಹರಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಾಗುವುದು ಎಂದು ತಿಳಿಸಿದರು.

ನಂತರ ಯೂತ್ ಕಾಂಗ್ರೆಸ್ ನಗರ ಬ್ಲಾಕ್ ಉಪಾಧ್ಯಕ್ಷ ಹರ್ಷಿತ್ ಕಛೇರಿಪಾಳ್ಯ ಮಾತನಾಡಿ, ನಾವು ಯುವಕರು. ಕಾಂಗ್ರೆಸ್ ಸಿದ್ಧಾಂತ ಹಾಗೂ ಹಿರಿಯರಾದ ಕೆ.ಎಚ್ ಮುನಿಯಪ್ಪ, ಮಾಜಿ ಶಾಸಕ ಟಿ.ವೆಂಕಟರಮಣಯ್ಯನವರ ಕೈ ಬಲಪಡಿಸಲು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇವೆ. ಸಚಿವರು ಎಲ್ಲರನ್ನು ಒಗ್ಗೂಡಿಸಿಕೊಂಡು ರಾಜಕಾರಣ ಮಾಡುತ್ತಾರೆ. ಸಚಿವರಲ್ಲಿ ಮೇಲು ಕೀಳು ಎಂಬ ಮನೋಭಾವನೆ ಇಲ್ಲ. ಯಾರನ್ನೂ ಕಡೆಗಣಿಸುವುದಿಲ್ಲ. ಒಂದು ವೇಳೆ ಸಚಿವರ ಗಮನಕ್ಕೆ ಬಾರದೇ ಯಾವುದಾದರು ಎಡವಟ್ಟು ಆಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ಹೇಳಿದರು.

ನಂತರ ಯುವ ಕಾಂಗ್ರೆಸ್ ಸಮಿತಿಯ ತಾ.ಪ್ರ.ಕಾ ಕಂಟನಕುಂಟೆ ರಾಜಣ್ಣ ಮಾತನಾಡಿ, ಶಿಷ್ಟಚಾರ ಪ್ರಕಾರ ನಗರಸಭಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಗರಸಭಾ ಸದಸ್ಯರು ಭಾಗವಹಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಇದಕ್ಕೆ ಕಾರಣ ಕೆ.ಎಚ್ ಮುನಿಯಪ್ಪನವರು ಅಲ್ಲ. ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಈ ಆರೋಪಗಳು ಕೇಳಿಬಂದಿದೆ. ಸಚಿವರು ಯಾರನ್ನೂ ಕಡೆಗಣಿಸಿಲ್ಲ. ಕಡೆಗಣಿಸುವುದಿಲ್ಲ ಎಂದರು…..

Leave a Reply

Your email address will not be published. Required fields are marked *

error: Content is protected !!