ಜೈಲಿನಲ್ಲಿ ದರ್ಶನ್ ಗೆ ನರಕಯಾತನೆ: “ನಾನು ಬಿಸಿಲು ನೋಡಿ 30 ದಿನಗಳಾಗಿವೆ- ಕೈ ಎಲ್ಲಾ ಫಂಗಸ್ ಬಂದಿದೆ- ನನಗೆ ಪಾಯಿಸನ್ ಕೊಡಿ”- ಜಡ್ಜ್ ಬಳಿ ದರ್ಶನ್ ಮನವಿ 

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಗೆ ಈ ಬಾರಿ ಜೈಲಿನಲ್ಲಿ ಯಾವುದೇ ಸೌಕರ್ಯಗಳು ಸಿಗದೇ ಇರುವುದು ಕಂಡುಬಂದಿದೆ. ಸವಲತ್ತು ಇಲ್ಲದೇ ಇರುವುದರಿಂದ ದರ್ಶನ್ ಹೈರಾಣವಾಗಿ ಹೊಗಿದ್ದಾರೆ. ಈ ಕಾರಣದಿಂದಲೇ ದರ್ಶನ್ ಇಂದು ನ್ಯಾಯಾಧೀಶರ ಮುಂದೆ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ‘ನನಗೆ ವಿಷ ನೀಡಲು ಆದೇಶಿಸಿ’ ಎಂದು ಜಡ್ಜ್ ಎದರೇ ಕೇಳಿದ್ದಾರೆ. ದರ್ಶನ್ ಬೇಡಿಕೆ ಕೇಳಿ ಒಮ್ಮೆ ಶಾಕ್ ಆದ ಜಡ್ಜ್, ‘ಹಾಗೆಲ್ಲ ಕೇಳಬಾರದು’ ಎಂದು  ದರ್ಶನ್​ಗೆ ಕಿವಿಮಾತು ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಕಳೆದ ವರ್ಷ ಬಂಧನವಾಗಿದ್ದರು. ಆ ಬಳಿಕ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಕರ್ನಾಟಕ ಸರ್ಕಾರ  ಸುಪ್ರೀಂಕೋರ್ಟ್​​ನಲ್ಲಿ ಪ್ರಶ್ನೆ ಮಾಡಿತ್ತು.  ಸುಪ್ರೀಂಕೋರ್ಟ್​ ದರ್ಶನ್ ಅವರ ಜಾಮೀನನ್ನು ರದ್ದು ಮಾಡಿತು. ಅಲ್ಲದೆ, ಅವರಿಗೆ ಯಾವುದೇ ವಿಶೇಷ ಸವಲತ್ತು ಸಿಗಬಾರದು ಎಂದು ಎಚ್ಚರಿಸಿತ್ತು.

ಹೀಗಾಗಿ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಇಡಲಾಗಿದೆ. ವಿಶೇಷ ಸವಲತ್ತು ಸಿಗದಂತೆ ನೋಡಿಕೊಳ್ಳಲಾಗುತ್ತಿದೆ. ಅಲ್ಲಿನ ಕಠಿಣ ನಿಯಮಗಳಿಂದ ಅವರಿಗೆ ನರಕಯಾತನೆ ಉಂಟಾಗುತ್ತಿದೆ.

ಹೆಚ್ಚುವರಿ ದಿಂಬು ಹಾಗೂ ಬೇಡ್​​ಶೀಟ್​ಗಾಗಿ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆದಿದೆ. ಈ ವೇಳೆ ವಿಡಿಯೋ ಕಾನ್ಫರೆನ್ಸ್​ ಮೂಲಕ ದರ್ಶನ್ ವಿಚಾರಣೆಗೆ ಹಾಜರಾದರು. ಆಗ ಅವರು, ಮೊದಲಿಗೆ ಕೈ ಎತ್ತಿ ‘ಒಂದು ಮನವಿ ಇದೆ’ ಎಂದು ಹೇಳಿದ್ದಾರೆ. ಮನವಿ ಏನು ಎಂದು ಕೇಳಿದಾಗ, ದರ್ಶನ್ ಕೊಟ್ಟ ಉತ್ತರ ಜಡ್ಜ್​ಗೆ ಶಾಕ್ ತಂದಿದೆ.

ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ ನನಗೆ ಮಾತ್ರ ಪಾಯಿಸನ್ ನೀಡಲಿ. ಕೋರ್ಟ್​​ನಿಂದಲೇ ಈ ಆದೇಶ ನೀಡಬೇಕು ಎಂದು ದರ್ಶನ್ ಮನವಿ ಮಾಡಿದ್ದಾರೆ. ಆಗ ನ್ಯಾಯಾಧೀಶರು ಹಾಗೆಲ್ಲಾ ನೀವು ಕೇಳುವಂತಿಲ್ಲ ಎಂದು ಹೇಳಿದ್ದಾರೆ.

ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ನೀಡುತ್ತೇವೆ. ನಿಮ್ಮ ಮನವಿ ಬಗ್ಗೆ ಮಧ್ಯಾಹ್ನ ಆದೇಶ ನೀಡುತ್ತೇವೆ ಎಂದು ವಿಚಾರಣೆಯನ್ನು 3 ಗಂಟೆಗೆ ಮುಂದೂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!