ಪಾರ್ಕಿಗೆಂದು ನಿಗದಿ ಪಡಿಸಿರುವ ಸ್ಥಳದಲ್ಲಿ ಯಾರೂ ಇಲ್ಲದ ಸಮಯದಲ್ಲಿ ರಾತ್ರೋರಾತ್ರಿ ಐದಾರು ಅಡಿ ಗುಂಡಿ ತೋಡಿ ಟ್ರ್ಯಾಕ್ಟರ್ ಮೂಲಕ ಹೋಟೆಲ್, ಕೈಗಾರಿಕಾ ತ್ಯಾಜ್ಯವನ್ನು ತಂದು ಡಂಪ್ ಮಾಡಿ ಗುಂಡಿ ತುಂಬಿದ ಮೇಲೆ ಮಣ್ಣಾಕಿ ಮುಚ್ಚುತ್ತಿರುವ ಕೃತ್ಯ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ದೇವನಹಳ್ಳಿಯ ಆಲೂರು ದುದ್ದನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗಡಿ ಭಾಗದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಕಂಡುಬಂದಿದೆ…….
ಅಲ್ಲಲ್ಲಿ ಗುಂಡಿಗಳನ್ನು ತೋಡಿ ಕಾರ್ಖಾನೆಗಳ ರಾಸಾಯನಿಕ ಯುಕ್ತ ತ್ಯಾಜ್ಯ, ಬೇಕರಿಯ ಬನ್, ಬ್ರೆಡ್ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿತ್ತು. ಇದನ್ನು ಸ್ಥಳೀಯರು ಗಮನಿಸಿ ಪ್ರಶ್ನೆ ಮಾಡಲು ಹೋದವರ ಮೇಲೆ ಮುಸುಕುಧಾರಿ ವ್ಯಕ್ತಿಯೊಬ್ಬ ದೌರ್ಜನ್ಯ, ದಬ್ಬಾಳಿಕೆ ಎಸಗಿದ್ದಾನೆ.
ಈ ತ್ಯಾಜ್ಯದಿಂದ ಓಬ್ದೇನಹಳ್ಳಿ, ಅರೇಹಳ್ಳಿ, ಗುಡ್ಡದಹಳ್ಳಿ, ಸುಣ್ಣಘಟ್ಟ, ಕೋಳಿಪುರ, ವರದನಹಳ್ಳಿ ಹಾಗೂ ಕೈಗಾರಿಕಾ ಸುತ್ತಾಮುತ್ತಲಿನ ಪ್ರದೇಶ ಗಬ್ಬೆದ್ದು ನಾರುತ್ತಿದೆ…. ದುರ್ವಾಸನೆಗೆ ಇಲ್ಲಿನ ನಿವಾಸಿಗಳು ಮುಗುಮುಚ್ಚಿಕೊಂಡು ರೋಗರುಜಿನ ಭೀತಿಯಲ್ಲಿ ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ….
ಪ್ರತ್ಯಕ್ಷದರ್ಶಿ ಓಬ್ದೇನಹಳ್ಳಿ ನಿವಾಸಿ ಮುನಿರಾಜು ಮಾತನಾಡಿ, ತರ್ಮಾಕೋಲ್, ಆಹಾರ ತ್ಯಾಜ್ಯ, ಮೆಡಿಕಲ್ ವೇಸ್ಟೇಜ್, ರಾಸಾಯನಿಕ ಯುಕ್ತ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಈ ತ್ಯಾಜ್ಯಕ್ಕೆ ಬೆಂಕಿ, ಮಣ್ಣಾಕಿ ಮುಚ್ಚುತ್ತಾರೆ. ಬೆಂಕಿ ಹಚ್ಚಿದಾಗ ಊರೆಲ್ಲಾ ದಟ್ಟ ಹೊಗೆ ಆವರಸಿ ಯಾರೂ ಮನೆಗಳಲ್ಲಿ ವಾಸ ಮಾಡೋದಕ್ಕೆ ಆಗೋದಿಲ್ಲ. ಗುಡ್ಡದಹಳ್ಳಿ ನಂಜೇಗೌಡ ಎಂಬ ವ್ಯಕ್ತಿ ಟ್ರ್ಯಾಕ್ಟರ್ ಮೂಲಕ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದನ್ನು ಗಮನಿಸಿ ಪ್ರಶ್ನೆ ಮಾಡಿದಾಗ ನಮ್ಮ ಮೇಲೆ ದರ್ಪದಿಂದ ಮಾತನಾಡಿ ಹಲ್ಲೆ ಮಾಡಲು ಮುಂದಾಗಿದ್ದಾನೆ. ನಮಗೆ ನಮ್ಮ ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ಏನಾದರೂ ಹೆಚ್ಚುಕಮ್ಮಿ ಆದರೆ ಯಾರು ಹೊಣೆ. ಈ ಕೂಡಲೇ ತ್ಯಾಜ್ಯ ಸುರಿಯುವುದನ್ನು ನಿಲ್ಲಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಸುವನಹಳ್ಳಿ ರವಿ ಮಾತನಾಡಿ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಕೆಮಿಕಲ್ ಫ್ಯಾಕ್ಟರಿ ಇವೆ. ರಾಸಾಯನಿಕಯುಕ್ತ ತ್ಯಾಜ್ಯವು ಅಂತರ್ಜಲಕ್ಕೆ ಸೇರಿ ಕಲುಷಿತಗೊಂಡಿದೆ… ಇದರಿಂದ ನಾವು ಆ ನೀರು ಕುಡಿಯುವುದು ಹೇಗೆ. ಒಂದು ವೇಳೆ ಆ ನೀರನ್ನು ಕುಡಿದರೆ ಅನಾರೋಗ್ಯಕ್ಕೆ ತುತ್ತಾಗುವುದು ಖಚಿತ. ಈ ಕೈಗಾರಿಕೆಗಳಿಂದ ಸುಮಾರು ಹನ್ನೊಂದು ಹಳ್ಳಿಗಳ ಜನರ ಜೀವನ ಅದೋಗತಿಗೆ ಬಂದು ತಲುಪಿದೆ. ಎಲ್ಲರ ಆರೋಗ್ಯ ಕೆಡುತ್ತಿದೆ. ನಮಗೆ ನದಿ ಮೂಲಗಳು ಇಲ್ಲ. ಮಳೆಯಾಶ್ರಿತ ನೀರನ್ನು ನಂಬಿ ಬದುಕುತ್ತಿದ್ದೇವೆ. ಮಳೆ ಬಂದಾಗ ಕೆರೆಗಳು ತುಂಬುತ್ತವೆ. ಆ ಕೆರೆಗಳಿಗೆ ಕಲುಷಿತ ತ್ಯಾಜ್ಯ ಸೇರಿ ಮಲಿನಗೊಳ್ಳುತ್ತಿವೆ ಎಂದರು.
ನಂತರ ಆಲೂರುದುದ್ದನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾರ್ಕಿಗೆಂದು ನಿಗದಿ ಪಡಿಸಿರುವ ಸ್ಥಳದಲ್ಲಿ ಯಾರೂ ಇಲ್ಲದ ಸಮಯದಲ್ಲಿ ರಾತ್ರೋರಾತ್ರಿ ಐದಾರು ಅಡಿ ಗುಂಡಿ ತೋಡಿ ಟ್ರ್ಯಾಕ್ಟರ್ ಮೂಲಕ ಹೋಟೆಲ್, ಕೈಗಾರಿಕಾ ತ್ಯಾಜ್ಯವನ್ನು ತಂದು ಡಂಪ್ ಮಾಡಿ ಗುಂಡಿ ತುಂಬಿದ ಮೇಲೆ ಮಣ್ಣಾಕಿ ಮುಚ್ಚುತ್ತಿರುವ ಕುರಿತು ದೂರು ಬಂದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದೇವೆ. ತ್ಯಾಜ್ಯವನ್ನು ಡಂಪ್ ಮಾಡುತ್ತಿರುವವರು ಯಾರು ಎಂದು ಗೊತ್ತಾಗಿದೆ. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಈ ವೇಳೆ ಸಂದೀಪ್ ಗುಡ್ಡದಹಳ್ಳಿ, ಹನುಮೇಗೌಡ, ಸುಣ್ಣಘಟ್ಟ, ಮುನಿರಾಜು ಓಬದನಹಳ್ಳಿ, ಮುರುಳೀಧರ್ ಬಾಶೆಟ್ಟಿಹಳ್ಳಿ, ಮನೋಜ್ ಓಬದನಹಳ್ಳಿ, ನವೀನ್ ಕುಮಾರ್ ಓಬ್ದೇನಹಳ್ಳಿ, ಮಹೇಶ್ ಜನದನಿ ವೇದಿಕೆ ಎಳ್ಳುಪುರ, ನಾರಾಯಣಸ್ವಾಮಿ ಜನದನಿ ವೇದಿಕೆ ಬಿಸುವನಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು….