
ದೊಡ್ಡಬಳ್ಳಾಪುರ ನಗರದ ಮುತ್ತೂರು ವಾರ್ಡ್ ನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಪಟಾಕಿ ಸ್ಫೋಟಗೊಂಡು ಒಬ್ಬ ಬಾಲಕ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆಯೋಜಕ ಸೇರಿ ಮೂವರನ್ನು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದು ಸೂಕ್ತ ವಿಚಾರಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಒಬ್ಬ ಆಯೋಜಕ ಸೇರಿ ಮೂವರನ್ನು ಜೈಲಿಗಟ್ಟಿದೆ….
ಕಾರ್ಯಕ್ರಮ ಆಯೋಜಕ ಮುತ್ತೂರು ನಿವಾಸಿ ಮಾರುತಿ(19), ಕಿಶೋರ್(25), ಮಂಜುನಾಥ್(38) ಜೈಲು ಪಾಲಾದ ವ್ಯಕ್ತಿಗಳು…

ಘಟನೆ ವಿವರ
ದೊಡ್ಡಬಳ್ಳಾಪುರ ನಗರದ ಮುತ್ತೂರಿನಲ್ಲಿ ಆ.29ರ ಸಂಜೆ ಫ್ರೆಂಡ್ಸ್ ವಿನಾಯಕ ಗ್ರೂಪ್ ವತಿಯಿಂದ ಗಣೇಶ ಮೆರವಣಿಗೆ ಆಯೋಜನೆ ಮಾಡಲಾಗಿತ್ತು. ವೇಳೆ ಪವರ್ ಲಿಫ್ಟರ್ ವಾಹನದ ಇಂಜಿನ್ ಮೇಲೆ ಇಟ್ಟಿದ್ದ ಪಟಾಕಿಗಳು ಸಿಡಿದಿತ್ತು. ಘಟನೆಯಲ್ಲಿ ಕ್ರೇನ್ನಲ್ಲಿ ಚಾಲಕನ ಜೊತೆ ಕುಳಿತಿದ್ದ ಇಬ್ಬರು ಮಕ್ಕಳು ಮೇಲೆ ಹಾರಿ ಬಿದ್ದಿದ್ದು, ಪಕ್ಕದಲ್ಲೇ ಸಾಗುತ್ತಿದ್ದ ಭದ್ರತೆಗೆ ನಿಯೋಜನೆ ಮಾಡಲಾಗಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಚಾಲಕನಿಗೆ ಗಂಭೀರ ಪೆಟ್ಟಾಗಿತ್ತು. ಅಲ್ಲದೆ ಪಟಾಕಿ ಸ್ಪೋಟಗೊಂಡು ಚದುರಿದ ಪರಿಣಾಮ ಮೆರವಣಿಗೆ ಸಾಗುತ್ತಿದ್ದ 8ಕ್ಕೂ ಹೆಚ್ಚು ಯುವಕರಿಗೆ ಗಾಯಗಳಾಗಿತ್ತು.
ಧನುಷ್ ರಾವ್(15) ಮೃತ ಬಾಲಕ, ಗಣೇಶ್(16), ಯೋಗೇಶ್(15), ಮುನಿರಾಜು(27), ಪವರ್ ಲಿಫ್ಟ್ ಚಾಲಕ ನಾಗರಾಜು(35), ಚೇತನ್ ಶಾವಿ(13), ಪೊಲೀಸ್ ಕಾನ್ಸ್ಟೇಬಲ್ ಜಾಕಿರ್ ಹುಸೇನ್ ಸೇರಿದಂತೆ ಇತರರಿಗೆ ಗಂಭೀರ ಗಾಯಗಳಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಆ.29 ರಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಆಯೋಜಕರ ಮೇಲೆ ದೂರು ದಾಖಲಾಗಿತ್ತು. ದೂರಿನ ಮೇರೆಗೆ ನಿರ್ಲಕ್ಷ್ಯವಹಿಸಿದ್ದ ಆಯೋಜಕರನ್ನು ವಶಕ್ಕೆ ಪಡೆದು ಸೂಕ್ತ ತನಿಖೆ ನಡೆಸಿ ಜೈಲು ಪಾಲು ಮಾಡಲಾಗಿದೆ.
ಇನ್ನು ಮುಂದೆ ಗಣೇಶ ಪ್ರತಿಷ್ಟಾಪನೆ, ಮೆರವಣಿಗೆ, ವಿಸರ್ಜನೆ ವೇಳೆ ಯಾವುದೇ ಅವಘಡ ಸಂಭವಿಸದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಒಂದು ವೇಳೆ ಕಾನೂನು ಎಲ್ಲೆ ಮೀರಿದರೆ ಸಂಬಂಧಪಟ್ಟವರಿಗೆ ಶಿಕ್ಷೆ ಕಟ್ಟಿಟ್ಟಬುತ್ತಿಯಾಗಿರುತ್ತದೆ.