ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕರಡಿಪಾಳ್ಯದಲ್ಲಿ ನಡೆದಿದೆ.
ಘಟನೆ ಕಳೆದ ರಾತ್ರಿ ನಡೆದಿದ್ದು, ಇಂದು ಮುಂಜಾನೆ ಬೆಳಕಿಗೆ ಬಂದಿದೆ….
ಕರಡಿಪಾಳ್ಯದ ನಿವಾಸಿ ತಿರುಪತಯ್ಯ ಎಂಬ ರೈತ ಮನೆ ಪಕ್ಕದಲ್ಲೇ ಹಸುಗಳಿಗಾಗಿ ಶೆಡ್ ನಿರ್ಮಿಸಿ ಎರಡು ಹಸು, ಎರಡು ಕರುಗಳನ್ನು ಶೆಡ್ ನಲ್ಲಿ ಬಿಟ್ಟಿದ್ದರು. ಕಳೆದ ರಾತ್ರಿ ಶೆಡ್ ಗೆ ನುಗ್ಗಿದ ಚಿರತೆ ಕರು ಮೇಲೆ ದಾಳಿ ನಡೆಸಿ ಬಲಿ ಪಡೆದಿದೆ…
ಘಟನೆ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆ ಹಿಡಿಯಲು ಗ್ರಾಮದಲ್ಲಿ ಬೋನ್ ಇರಿಸಲಾಗಿದೆ.
ಮೊನ್ನೆ ರಾತ್ರಿ ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿಯಲ್ಲೂ ಸಹ ಕರುವಿನ ಮೇಲೆ ಚಿರತೆ ದಾಳಿ ನಡೆಸಿತ್ತು. ನಿನ್ನೆ ರಾತ್ರಿ ತೂಬಗೆರೆ ಹೋಬಳಿಯ ಮಾಕಳಿ ಸಮೀಪದ ತೋಟದ ಮನೆಯಲ್ಲಿದ್ದ ನಾಯಿಯನ್ನು ಬೇಟೆಯಾಡಿದೆ. ಹೀಗೆ ಸದಾ ನಾಯಿ, ಮೇಕೆ, ಕುರಿ ಸೇರಿದಂತೆ ಜಾನುವಾರುಗಳ ಮೇಲೆ ಪದೇ ಪದೇ ಚಿರತೆ ದಾಳಿ ನಡೆಸಿ ಬಲಿ ಪಡೆಯುತ್ತಲೇ ಇದೆ…
ಕಾಡು ಪ್ರಾಣಿಗಳು ಕಾಡಿನಿಂದ ನಾಡಿಗೆ ಬರದ ಹಾಗೆ ಸೂಕ್ತ ಕ್ರಮಗಳನ್ನು ಅರಣ್ಯ ಇಲಾಖೆ ತೆಗೆದುಕೊಳ್ಳಬೇಕು ಎಂದು ಜನ ಒತ್ತಾಯಿಸಿದ್ದಾರೆ…