
ಬರೋಬ್ಬರಿ ಆರು ವರ್ಷಗಳ ಹಿಂದಿನ ಕಿಡ್ಯ್ನಾಪ್ ಆ್ಯಂಡ್ ಮರ್ಡರ್ ಕೇಸ್ನ್ನು ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇದಿಸಿದ್ದಾರೆ.
ಹಳೆ ದ್ವೇಷ ಹಿನ್ನೆಲೆ 27 ವರ್ಷದ ಯುವಕನನ್ನು ಕೊಲೆ ಮಾಡಿ ನಮಗೂ ಕೊಲೆಗು ಏನು ಸಂಬಂಧವಿಲ್ಲ ಅಂತಾ ಆರಾಮವಾಗಿದ್ದ ಆರೋಪಿಗಳು ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದ್ದು, ಓರ್ವ ನಾಪತ್ತೆ ಆಗಿದ್ದಾನೆ. ದಿವಾಕರ್, ಹರೀಶ್, ಮಾರ್ತಾಂಡ ಅಲಿಯಾಸ್ ಆಟೋ ಚಂದ್ರ, ರಂಜೀತ್ ಕುಮಾರ್, ಮಂಜುನಾ ಅಲಿಯಾಸ್ ಕಬಾಬ್ ಮಂಜು ಬಂಧಿತ ಆರೋಪಿಗಳು.

ಸದ್ಯ ಆರೋಪಿಗಳನ್ನು ಬಂಧಿಸುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಗಿರೀಶ್ (27) ಕೊಲೆ ರಹಸ್ಯ ಬಯಲು ಮಾಡಿದ್ದಾರೆ.
ಮೃತ ಗಿರೀಶ್ ಶಿಡ್ಲಘಟ್ಟ ನಗರದ ನಿವಾಸಿ. ಆಟೊ ಚಾಲಕನಾಗಿದ್ದ. ಹಳೆ ದ್ವೇಷ ಹಿನ್ನೆಲೆ 2019 ಮೇ 12 ರಂದು ಗಿರೀಶ್ ನನ್ನು ಕೊಲೆ ಮಾಡಲಾಗಿತ್ತು. ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು.
ಶಿಡ್ಲಘಟ್ಟದಿಂದ ಕಿಡ್ಯ್ನಾಪ್ ಮಾಡಿ ನರಸಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಮಾಡಿದ್ದ ಆರೋಪಿಗಳು ಬಳಿಕ ಶವವನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ತಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿಲಿಪಿಲಿ ಮಂಗಲ ಗ್ರಾಮದ ಬಳಿ ಬಿಸಾಡಿದ್ದರು. ತಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣ ಕೂಡ ದಾಖಲಾಗಿತ್ತು.

ತನಿಖೆ ನಡೆಸಿದ್ದ ತಳಿ ಠಾಣೆಯ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಆದರೆ ಸರಿಯಾದ ಸಾಕ್ಷ್ಯಾಧಾರ ಕೊರತೆ ಮತ್ತು ಚಾರ್ಜ್ಶೀಟ್ ಸಲ್ಲಿಸಿರಲಿಲ್ಲ. ಹೀಗಾಗಿ ಕೋರ್ಟ್ ಬಂಧಿತ ಆರೋಪಿಗಳನ್ನು ಜಾಮೀನು ಮೇಲೆ ಬಿಡುಗಡೆ ಮಾಡಿತ್ತು. ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಆರೋಪ ಕೇಳಿಬಂದಿತ್ತು. ಕೇಸ್ ಹಾಗೇ ಉಳಿದುಕೊಂಡಿತ್ತು. ಬಳಿಕ ಬೇರೆ ಅಧಿಕಾರಿಗಳ ಗಮನಕ್ಕೆ ಬಂದು ಪ್ರಕರಣವನ್ನು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರಿಗೆ ವರ್ಗಾಯಿಸಲಾಗಿತ್ತು. ಅದರಂತೆ ಇದೀಗ ಐವರ ಬಂಧನವಾಗಿದೆ.