
ಕೃಷ್ಣ ಜನ್ಮಾಷ್ಟಮಿಯನ್ನು ತಾಲೂಕಿನ ತೂಬಗೆರೆ ಹೋಬಳಿಯ ಯದ್ದಲಹಳ್ಳಿ ಸಮೀಪವಿರುವ ಬೆನಕನಹಳ್ಳ ವೇಣುಗೋಪಾಲಕೃಷ್ಣ ದೇವಾಲಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಪ್ರಾತಃಕಾಲ ಶ್ರೀ ವೇಣುಗೋಪಾಲ ಸ್ವಾಮಿಗೆ ಕ್ಷೀರಾಭಿಷೇಕ, ಮಹಾಭಿಷೇಕ, ಅಷ್ಟಗಂಧ ಅರ್ಚನೆ, ವಿಷ್ಣುಸಹಸ್ರನಾಮ ಪಾರಾಯಣ, ತುಳಸಿ ಅರ್ಚನೆ ಹಾಗೂ ಮಹಾನೈವೇದ್ಯ ಸಮರ್ಪಣೆ ನಡೆಯಿತು. ದಿನವಿಡೀ ಭಕ್ತರ ಸಾನ್ನಿಧ್ಯದಲ್ಲಿ ಭಕ್ತಿಗೀತೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆದವು.
ದೇವಾಲಯದ ಅರ್ಚಕರಾದ ವಿದ್ವಾನ್ ಎಸ್.ನವೀನ್ ಮಾತನಾಡಿ, “ಜನ್ಮಾಷ್ಟಮಿ ದಿನದಲ್ಲಿ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ವೇಣುಗೋಪಾಲ ಸ್ವಾಮಿಯ ವಿಶೇಷ ಆರಾಧನೆ ನಡೆಯುತ್ತಿದ್ದು, ಇದು ಭಕ್ತರಿಗೆ ಆಧ್ಯಾತ್ಮಿಕ ಅನುಭವ ನೀಡುತ್ತದೆ” ಎಂದು ಹೇಳಿದರು.

ದೇವಸ್ಥಾನ ಜೀರ್ಣೋದ್ಧಾರ ಮಂಡಳಿಯ ಸತ್ಯನಾರಾಯಣಪ್ಪ ಹೇಳಿದರು: “20 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಈ ದೇವಾಲಯದಲ್ಲಿ ರುಕ್ಮಿಣಿ-ಸತ್ಯಭಾಮ ಸಮೇತ ಶ್ರೀಕೃಷ್ಣ ವಿಗ್ರಹವು ಅತ್ಯಂತ ವಿರಳ. ಈ ವಿಶೇಷ ವಿಗ್ರಹವು ದೇವಾಲಯದ ವೈಶಿಷ್ಟ್ಯವಾಗಿದೆ” ಎಂದರು.
ಭಕ್ತರು ಆಗಮಿಸಿ ಹಣ್ಣು-ಕಾಯಿ ಸೇವೆ, ಬೆಣ್ಣೆ ಸೇವೆ, ತುಪ್ಪ-ಪಾಯಸ ಸಮರ್ಪಣೆ ಮಾಡಿದರು. ವಿಶೇಷ ಅಲಂಕಾರದೊಂದಿಗೆ ಶ್ರೀ ವೇಣುಗೋಪಾಲ ಸ್ವಾಮಿಯ ಮೂರ್ತಿ ಕಂಗೊಳಿಸುತ್ತಿದ್ದು, ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಈ ಬಾರಿ ವಿಶೇಷ ಆಕರ್ಷಣೆಯಾಗಿ ಮಕ್ಕಳು ರಾಧಾ-ಕೃಷ್ಣ ವೇಷಭೂಷಣದಲ್ಲಿ ಭಾಗವಹಿಸಿದ್ದು, ಭಕ್ತರ ಮನ ಸೆಳೆಯಿತು.