ದೊಡ್ಡಬಳ್ಳಾಪುರ ತಾಲೂಕಿನಿಂದ ಜಿಲ್ಲಾಸ್ಪತ್ರೆ ಕೈತಪ್ಪಲ್ಲ: ಕೈತಪ್ಪಲು ನಾನು ಬಿಡೋದಿಲ್ಲ- ತಾಲೂಕಿನಲ್ಲಿ ಜಿಲ್ಲಾಸ್ಪತ್ರೆ  ಕರ್ತವ್ಯ ನಿರ್ವಹಿಸುವಂತೆ ಮಾಡಿಯೇ ತೀರುತ್ತೇನೆ- ಶಾಸಕ ಧೀರಜ್ ಮುನಿರಾಜ್

ದೊಡ್ಡಬಳ್ಳಾಪುರ ತಾಲೂಕಿಗೆ ಮಂಜೂರಾಗಿದ್ದ ಜಿಲ್ಲಾಸ್ಪತ್ರೆಯನ್ನು ದೇವನಹಳ್ಳಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಸುಳ್ಳು ಮಾಹಿತಿ ತಾಲೂಕಿನ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಧೀರಜ್ ಮುನಿರಾಜ್, ಯಾವುದೇ ಕಾರಣಕ್ಕೂ ತಾಲೂಕಿಗೆ ಮಂಜೂರಾಗಿರುವ ಜಿಲ್ಲಾಸ್ಪತ್ರೆ ಕೈ ತಪ್ಪಲ್ಲ. ತಾಲೂಕಿಗೆ ಜಿಲ್ಲಾಸ್ಪತ್ರೆ ಬೇಕು ಎನ್ನುವುದಕ್ಕೆ  ನಮ್ಮಲ್ಲಿ ಸಾಕಷ್ಟು ಅಂಶಗಳಿವೆ. ಈ ಕುರಿತಂತೆ ಇದೇ ತಿಂಗಳು 11ರಂದು ನಡೆಯಲಿರುವ ಸದನದಲ್ಲಿ  ಸವಿಸ್ತಾರವಾಗಿ ಆರೋಗ್ಯ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಿದ್ದೇನೆ ಎಂದು ಹೇಳಿದ್ದಾರೆ.

2019ರಲ್ಲಿ ನಗರದ ಸಿದ್ದೇನಾಯಕನಹಳ್ಳಿಯಲ್ಲಿ 9 ಎಕರೆ 38 ಗುಂಟೆ ಜಾಗದಲ್ಲಿ 195 ಕೋಟಿ ರೂ. ವೆಚ್ಚದ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. 2023ರಲ್ಲಿ ಆರೋಗ್ಯ ಇಲಾಖೆಯಿಂದ ಮಂಜೂರಾಗಿರುವ ಆಸ್ಪತ್ರೆಗೆ ಜಿಯೋ‌ ಮಾಡಿ, ಆರ್ಥಿಕ ಅನುಮೋದನೆ ನೀಡಲಾಗುತ್ತದೆ. ಇದನ್ನು ತಪ್ಪಿಸಲು ಯಾರೋ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸಿದ್ದರು. ಆದರೆ, ನಾನು ಜಿಲ್ಲಾಸ್ಪತ್ರೆ ಕೈತಪ್ಪಲು ಬಿಡೋದಿಲ್ಲ. ಇದಲ್ಲದೆ, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಅಭಿಮ್ ಯೋಜನೆಯಡಿ 50 ಹಾಸಿಗೆಯುಳ್ಳ ಕ್ರಿಟಿಕಲ್ ಕೇರ್ ಯುನಿಟ್ ಆಸ್ಪತ್ರೆ ದೊಡ್ಡಬಳ್ಳಾಪುರದಲ್ಲಿ ಆಗಲಿದೆ ಎಂದರು.

ತಾಲೂಕಿನ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದು ನನ್ನ ಆದ್ಯ ಕರ್ತವ್ಯ. ನನ್ನನ್ನು ನಂಬಿ ತಾಲೂಕಿನ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ. ಅವರ ಸೇವೆಗೆಂದು ಜಿಲ್ಲಾಸ್ಪತ್ರೆ  ಕರ್ತವ್ಯ ನಿರ್ವಹಿಸುವಂತೆ ಮಾಡಿಯೇ ತೀರುತ್ತೇನೆ ಎಂದರು.

ಜಿಲ್ಲಾಸ್ಪತ್ರೆ ತಾಲೂಕಿಗೆ ತರಬೇಕೆಂಬ ಮುಖ್ಯ ಉದ್ದೇಶದಿಂದ  ಪ್ರಧಾನಮಂತ್ರಿ ಅಭಿಮ್( ABHIM), (ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಮಿಷನ್ ) ಯೋಜನೆ ಅಡಿಯಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ (CCU) ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈ ಕಾರಣ ಕ್ರಿಟಿಕಲ್ ಕೇರ್ ಯೂನಿಟ್ ಗಳು ಜಿಲ್ಲಾಸ್ಪತ್ರೆಯಲ್ಲಿ ಇರಬೇಕೆಂಬ ನಿಯಮವಿದೆ. ಅಂತೇಯೇ ಪ್ರಧಾನ ಮಂತ್ರಿ ಅಭಿಮ್( ABHIM) ಯೋಜನೆ ಅಡಿಯಲ್ಲಿ  ಜಿಲ್ಲಾಸ್ಪತ್ರೆ ಜಾಗದಲ್ಲಿ ಸಿಸಿಯು ನಿರ್ಮಾಣ ಮಾಡುವುದರಿಂದ ಜಿಲ್ಲಾಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕ್ರಿಟಿಕಲ್ ಕೇರ್ ಯೂನಿಟ್ ನ್ನು ನಿರ್ಮಾಣ ಮಾಡುವ ಸಲುವಾಗಿ  ಕೇಂದ್ರದ  ಅನುದಾನಕ್ಕೆ ಮುಂದಾಗಿದ್ದೇವೆ ಎಂದರು.

ತಾಲೂಕಿನ ಜನತೆಯಲ್ಲಿ ಗೊಂದಲ ಬೇಡ ತಾಯಿ ಮತ್ತು ಮಗು ಆಸ್ಪತ್ರೆ (ತಾಲೂಕು ಸಾರ್ವಜನಿಕ ಆಸ್ಪತ್ರೆ) ಬೇರೆ, ಜಿಲ್ಲಾಸ್ಪತ್ರೆ ಬೇರೆ. ತಾಲೂಕಿನಾದ್ಯಂತ ಹರಿದಾಡುತ್ತಿರುವ  ಗಾಳಿ ಸುದ್ದಿಗೆ ಕಿವಿಗೊಡಬೇಡಿ. ಜಿಲ್ಲಾಸ್ಪತ್ರೆ ಕೈ ತಪ್ಪಿಲ್ಲ , ನಮ್ಮ ತಾಲೂಕಿಗೆ ಜಿಲ್ಲಾಸ್ಪತ್ರೆ ಬರುವುದು ಖಚಿತ ಎಂದು  ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!