ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಕ್ಷಕ್ ಬುಲೆಟ್ ಇಂದು ವಿಚಾರಣೆಗೆ ಹಾಜರಾಗಿದ್ದರು. ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯಿತು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ನಟ ಪ್ರಥಮ್, ರಕ್ಷಕ್ ಬುಲೆಟ್ ಬಂದಿದ್ದರು ಎನ್ನಲಾಗಿತ್ತು. ಈ ವೇಳೆ ಪ್ರಥಮ್ ಗೆ ಯಶಸ್ವಿನಿ ಮತ್ತು ಬೇಕರಿ ರಘು ಮಾರಾಕಾಸ್ತ್ರಗಳ ತೋರಿಸಿ ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಪ್ರಥಮ್ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಈ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ರಕ್ಷಕ್ ಬುಲೆಟ್ ಗೆ ಪೊಲೀಸರು ನೋಟಿಸ್ ನೀಡಿದ್ದರು. ಇಂದು ರಕ್ಷಕ್ ಬುಲೆಟ್ ವಿಚಾರಣೆಗಾಗಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರಕ್ಷಕ್ ಬುಲೆಟ್, ಘಟನೆ ಕುರಿತು ಈಗಾಗಲೇ ಪೋಲೀಸರಿಗೆ ಮಾಹಿತಿ ನೀಡಿದ್ದೇನೆ. ಘಟನೆ ನಡೆದ ದಿನ ಯಶಸ್ವಿನಿ, ದಾಸ ಸೇರಿ ಕೆಲವೇ ಕೆಲವು ಜನ ಮಾತ್ರ ಇದ್ದೆವು. ಅಲ್ಲಿ ನಡೆದ ಘಟನೆ ಕುರಿತು ಈಗಾಗಲೇ ಮಾತನಾಡಿದ್ದೇನೆ. ಪೊಲೀಸರಿಗೆ ಈಗಾಗಲೇ ಮಾಹಿತಿ ನೀಡಿದ್ದೇನೆ. ನಾವು ಕಲಾವಿದರ ಮನೆಯಿಂದ ಬಂದವರು. ಗೂಂಡಾಗಿರಿ ಮಾಡೋಕೆ ಬಂದಿಲ್ಲ. ನಾವು ಇನ್ನೂ ಬೆಳೆಯಬೇಕು ಹೇಳಿದರು.