ಒಳಮೀಸಲಾತಿಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬೆತ್ತಲೆ ಧರಣಿ

ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ ಇಂದಿಗೆ ಒಂದು ವರ್ಷ ಕಳೆದಿದೆ ಆದರೆ ಈವರೆಗೂ ನಮ್ಮ ರಾಜ್ಯದಲ್ಲಿ ಯಾವುದೇ ಒಳ ಮೀಸಲಾತಿ ಘೋಷಣೆಯಾಗಿಲ್ಲ. ಆಗಸ್ಟ್ 15ರಂದು  ಕರ್ನಾಟಕ ರಾಜ್ಯ ಸರ್ಕಾರಕ್ಕೆ ಅಂತಿಮ ಗಡುವು ನೀಡುತ್ತಿದ್ದು, ಒಳ ಮೀಸಲಾತಿ ಜಾರಿ ಮಾಡುವ ಮೂಲಕ  ಮಾದಿಗ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಸ್ಪಂದಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ದಲಿತ ಮುಖಂಡರಾದ  ಬುಳ್ಳಳ್ಳಿ ರಾಜಣ್ಣ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಾಲ್ಕು ತಾಲೂಕುಗಳ ಮಾದಿಗ ಸಮುದಾಯದ ಪ್ರಮುಖರು ಅರೆಬೆತ್ತಲೆ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಒಳ ಮೀಸಲಾತಿ ಜಾರಿಗೊಳಿಸುವಂತೆ  ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಒಳ ಮೀಸಲಾತಿ ನೀಡುವ ಭರವಸೆ ನೀಡಿದ್ದ ಸಿದ್ದರಾಮಯ್ಯ ಈಗ ಯಾವುದೇ ನಿರ್ಣಯ ಕೈಗೊಳ್ಳದೆ ಇರುವುದು ಮಾದಿಗ ಸಮುದಾಯ ಕುರಿತು ಅವರ ಬದ್ಧತೆಯನ್ನು ತೋರುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಎಲ್ಲ ದಲಿತಪರ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಮಾದಿಗ ಸಮುದಾಯದ ಎಲ್ಲಾ ಬಂಧುಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ ಎಂದರು.

ಸರ್ಕಾರಕ್ಕೆ ಆಗಸ್ಟ್ 15ರ ಗಡುವು ನೀಡುತ್ತಿದ್ದು ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೊಳಿಸಿ ಸೂಕ್ತ ನ್ಯಾಯ ಕಲ್ಪಿಸದ ಪಕ್ಷದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದು ಅಷ್ಟೇ ಅಲ್ಲದೆ ನಾವು ಪ್ರಾಣತ್ಯಾಗಕ್ಕೂ ಸಿದ್ಧ ಎಂದರು.

ನಮಗೆ ಕಾಂಗ್ರೆಸ್ ಸರ್ಕಾರ ಕೊಡುತ್ತಿರುವ ಯಾವುದೇ ಭಾಗ್ಯಗಳು ಬೇಡ ನಮಗೆ ನಮ್ಮ ಹಕ್ಕು ಒಳ ಮೀಸಲಾತಿ ಕೊಟ್ಟರೆ ಸಾಕು. ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ನಮ್ಮ ಮಾದಿಗ ಸಮುದಾಯ ಹಿಂದುಳಿದಿದ್ದು, ಒಳ ಮೀಸಲಾತಿ ಸಿಗುವ ಮೂಲಕ  ನಮ್ಮ ಜನಾಂಗ ಸಾಕಷ್ಟು ಲಾಭ ಪಡೆಯಲಿದೆ ಸರ್ಕಾರ ಇದನ್ನು ಅರಿಯಬೇಕಿದೆ ನಮ್ಮ ಹಕ್ಕನ್ನು ನಮಗೆ ಕೊಡಿ ನಿಮ್ಮ ಪುಕ್ಕಟ್ಟೆ ಭಾಗ್ಯ ನಮಗೆ ಬೇಡ ಎಂದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ರಾಮಮೂರ್ತಿ (ರಾಮು) ನೇರಳೆಘಟ್ಟ ಮಾತನಾಡಿ, ಈಗಾಗಲೇ ಸಮೀಕ್ಷೆ ಸಂಪೂರ್ಣ ಮುಗಿದಿದೆ. ಕರ್ನಾಟಕ ಸರ್ಕಾರ ಒಳಮೀಸಲಾತಿ ಜಾರಿಗೊಳಿಸದೇ ನಮ್ಮ ತಾಳ್ಮೆ ಪರೀಕ್ಷಿಸುತ್ತಿದೆ. ಇಂದು ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಮೂಲಕ ನಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದೇವೆ, ಇಂದಿನ ಪ್ರತಿಭಟನೆ ಕೇವಲ ಸಾಂಕೇತಿಕವಷ್ಟೇ ಸರ್ಕಾರ ಕೂಡಲೇ ನಮ್ಮ ಒಳ ಮೀಸಲಾತಿರ ಘೋಷಣೆ ಮಾಡಲಿ ಇಲ್ಲವಾದಲ್ಲಿ ಆಗಸ್ಟ್  15 ನಂತರ ರಾಜ್ಯಾದ್ಯಂತ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ  ನಮ್ಮ ಸಮುದಾಯದ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದರು.

ನಾವು ಕೇಳುತ್ತಿರುವುದು ನಮ್ಮ ಹಕ್ಕು, ಜನಸಂಖ್ಯೆಯಲ್ಲಿ ಹೆಚ್ಚಾಗಿರುವ ನಮ್ಮಗೆ ಒಳ ಮೀಸಲಾತಿ, ಈ ಕೂಡಲೇ ಕಲ್ಪಿಸಬೇಕು. ಇನ್ನಾದರೂ ಮುಖ್ಯಮಂತ್ರಿ ಎಚ್ಚೆತ್ತು ದಲಿತ ಸಮುದಾಯಗಳಿಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ಒಳಮೀಸಲಾತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದರು.

ವಕೀಲರು ಕರ್ನಾಟಕ ಮಾದರ ಮಹಾಸಭಾ ಸಂಚಾಲಕರಾದ ರಾಜಘಟ್ಟ ಕಾಂತರಾಜು ಮಾತನಾಡಿ, ಇದು ಕೇವಲ ಆರಂಭವಷ್ಟೇ ನಮ್ಮ ಒಳಮೀಸಲಾತಿಯನ್ನು ನಮಗೆ ಕೊಟ್ಟುಬಿಡಿ ಇಂದು ಕೇವಲ ನಾಲ್ಕು ತಾಲೂಕುಗಳ  ಮಾದಿಗ ಸಮುದಾಯದ ಸಾವಿರಾರು ಜನರು  ಪ್ರತಿಭಟನೆಗೆ ಮುಂದಾಗಿದ್ದೇವೆ. ಒಳಮೀಸಲಾತಿ ಜಾರಿಗೊಳಿಸದೆ ಹೋದಲ್ಲಿ ಆಗಸ್ಟ್ 15ರಂದು  ರಾಜ್ಯಾದ್ಯಂತ ಕೋಟ್ಯಾಂತರ ಮಾದಿಗ ಸಮುದಾಯದ ಜನತೆ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರತಿಭಟನೆಗೆ ಮುಂದಾಗಲಿದ್ದಾರೆ. ಸರ್ಕಾರವನ್ನು ಅಧಿಕಾರಕ್ಕೆ ತರುವ ಶಕ್ತಿ ಇರುವ ನಮಗೆ ಅದನ್ನು ಕೆಡವಿ ಮತ್ತೊಂದು ಸರ್ಕಾರ ಜಾರಿಗೆ ತರುವ ಶಕ್ತಿ ಕೂಡ ಇದೆ. ಮುಖ್ಯಮಂತ್ರಿಗಳು ಇದನ್ನು ಅರಿತು ಶೀಘ್ರ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!