ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಯ ಮಾಹಿತಿ ಅತ್ಯಗತ್ಯವಾಗಿದೆ. ನಮ್ಮ ಸಂವಿಧಾನ ಸಾಮಾಜಿಕ ನ್ಯಾಯವನ್ನು ಬೆಂಬಲಿಸುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸಮಾನತೆಯೆಂಬುದು ದೇಶದಲ್ಲಿ ಸ್ಥಾಪಿತವಾಗಿದೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ಇಂತಹ ಸಮೀಕ್ಷೆ ನಡೆಸಲೇಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಬೇಕೆಂಬುದಕ್ಕೆ ರಾಹುಲ್ ಗಾಂಧಿಯವರು ಬದ್ಧರಾಗಿದ್ದಾರೆ. ಜಾತಿಗಣತಿ ಮಾಡುವ ಜೊತೆಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿದಾಗ ಮಾತ್ರ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ. ಇದು ಭಾಗೀಧಾರಿ ನ್ಯಾಯ ಸಮ್ಮೇಳನದ ಮೂಲ ಉದ್ದೇಶವೂ ಆಗಿದೆ. ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮನ್ನು ಟೀಕಿಸುವ ಬಿಜೆಪಿಯವರು ಸಾಮಾಜಿಕ ನ್ಯಾಯದ ಪರವಾಗಿ ಎಂದೂ ಇರಲಿಲ್ಲ. ಮಂಡಲ್ ಆಯೋಗದ ವರದಿಯನ್ನು ಬಿಜೆಪಿ ವಿರೋಧಿಸಿತ್ತು. ಮಂಡಲ್ ಗೆ ಪ್ರತಿಯಾಗಿ ಕಮಂಡಲ ಯಾತ್ರೆ ಶುರು ಮಾಡಿದ್ದು ಯಾರು? ಆ ಸಂದರ್ಭದಲ್ಲಿ 200 ಆತ್ಮಹತ್ಯೆಗಳಿಗೆ ಪ್ರಚೋದನೆ ಕೊಟ್ಟವರು ಯಾರು? 1993 ನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಜಾರಿಗೆ ತಂದಾಗ ಅದನ್ನು ವಿರೋಧಿಸಿದ್ದು ಯಾರು? ಸಂವಿಧಾನದ 74ನೇ ತಿದ್ದುಪಡಿಯನ್ನು ವಿರೋಧಿಸಿದವರು ಯಾರು? ಬಿಜೆಪಿಯವರು ಸಂವಿಧಾನವನ್ನು ಯಾವಾಗ ಗೌರವಿಸಿದ್ದಾರೆ? ಸಂವಿಧಾನ ಜಾರಿಗೆ ಬಂದಾಗ ಆರ್ಗನೈಸರ್ ಪತ್ರಿಕೆಯಲ್ಲಿ ಸಾವರ್ಕರ್, ಗೋಲ್ವಾಲ್ಕರ್ ಅವರ ಹೇಳಿಕೆಗಳನ್ನು ಗಮನಿಸಬೇಕು ಎಂದು ಹೇಳಿದರು.
ಎಐಸಿಸಿ ಓಬಿಸಿ ಸಲಹಾ ಮಂಡಳಿಯಲ್ಲಿ ನಾನು ಓರ್ವ ಸದಸ್ಯನಾಗಿದ್ದು, ಜುಲೈ 15 ಹಾಗೂ 16 ರಂದು ಬೆಂಗಳೂರಿನಲ್ಲಿ ಮಂಡಳಿಯ ಪ್ರಥಮ ಸಭೆ ನಡೆದಿತ್ತು. ಆ ಸಭೆಯಲ್ಲಿ ಬೆಂಗಳೂರು ಘೋಷಣೆ ಸೇರಿದಂತೆ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದರು.
2015 ರಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆಯನ್ನು ಪ್ರಾರಂಭಿಸಿದ ರಾಜ್ಯ ಕರ್ನಾಟಕ. 2018ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಜಾತಿಗಣತಿ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಹತ್ತು ವರ್ಷಗಳ ಹಳೆಯ ಅಂಕಿಅಂಶಗಳಾದ್ದರಿಂದ ಕಾನೂನಿನನ್ವಯ ಮರುಗಣತಿ ಮಾಡುವ ಅಗತ್ಯವಿದ್ದ ಕಾರಣ ಸರ್ಕಾರ ಕರ್ನಾಟಕದಲ್ಲಿ ಮರುಗಣತಿ ಮಾಡಲು ಕ್ರಮ ಕೈಗೊಳ್ಳುತ್ತಿದೆ. ಇದೇ ರೀತಿ ಎಲ್ಲ ರಾಜ್ಯಗಳಲ್ಲಿಯೂ ತೆಲಂಗಾಣ ಮಾದರಿಯಲ್ಲಿ ಜಾತಿಗಣತಿಯನ್ನು ಮಾಡಬೇಕೆಂದು ನಿರ್ಣಯಿಸಲಾಗಿದೆ ಎಂದು ಹೇಳಿದರು.
ಲೋಕಸಭೆಯ ವಿಪಕ್ಷ ನಾಯಕರಾದ ರಾಹುಲ್ ಗಾಂಧಿಯವರು ಹಿಂದುಳಿದ ವರ್ಗದ ಏಳಿಗೆಯ ವಿಷಯವನ್ನು ಮುಂಚೂಣಿಗೆ ತಂದ ನಂತರವಷ್ಟೇ ಕೇಂದ್ರ ಸರ್ಕಾರ ಜಾತಿಗಣತಿಯನ್ನು ತಾನು ಮಾಡುವುದಾಗಿ ಹೇಳಿದೆ. 1931ನೇ ಇಸವಿಯ ನಂತರ ದೇಶದಲ್ಲಿ ಜಾತಿಗಣತಿ ನಡೆದಿಲ್ಲ. ಈ ಸಮೀಕ್ಷೆ ಕೇವಲ ಓಬಿಸಿ ವರ್ಗಕ್ಕೆ ಸಂಬಂಧಿಸಿದ್ದಲ್ಲ, ಕರ್ನಾಟಕದ ಎಲ್ಲ ಏಳು ಕೋಟಿ ಜನರ ಸಮೀಕ್ಷೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮತಗಳವು ಆಗಿದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆ ಸತ್ಯವಾದುದ್ದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆಯಲಾಗಿತ್ತು ಮತ್ತು ಚುನಾವಣಾ ಕ್ಷೇತ್ರಕ್ಕೆ ಸಂಬಂಧಪಡದ ಹೊಸ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈ ರೀತಿ ಇಡೀ ದೇಶದಲ್ಲಿ ನಡೆದಿರುವ ಸಾಧ್ಯತೆಯಿದೆ. ಆದ್ದರಿಂದ ರಾಹುಲ್ ಗಾಂಧಿಯವರು ಈ ಗಂಭೀರ ವಿಚಾರವನ್ನು ಸದನದ ಒಳಗೆ ಹಾಗೂ ಹೊರಗೆ ಪ್ರಸ್ತಾಪಿಸಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಎಲ್ಲ ಕ್ಷೇತ್ರದಲ್ಲಿ ಮತಎಣಿಕೆಯಲ್ಲಿ ಕಾಂಗ್ರೆಸ್ ಮುಂದಿದ್ದರೂ, ಮಹದೇವಪುರ ಕ್ಷೇತ್ರದಿಂದಾಗಿ ಕಾಂಗ್ರೆಸ್ ಸೋಲುವಂತಾಯಿತು. ಈ ರೀತಿ ಆಗಿರುವುದನ್ನು ಪ್ರಶ್ನಿಸಿದ ರಾಹುಲ್ ಗಾಂಧಿಯವರು, ಈ ಬಗ್ಗೆ ಸಾಕ್ಷ್ಯಾಧಾರಗಳು ಇವೆ ಎಂದು ತಿಳಿಸಿದ್ದಾರೆ ಎಂದರು.
ಚುನಾವಣೆಗೆ ಸಂಬಂಧಿಸಿದ ಪ್ರಕರಣಗಳು ಇತ್ಯರ್ಥವಾಗುವುದರೊಳಗೆ ಸರ್ಕಾರದ ಅವಧಿಯೇ ಮುಗಿದಿರುತ್ತದೆ. ಹಲವು ಪ್ರಕರಣಗಳಲ್ಲಿ ಮತಪಟ್ಟಿ ವಿಚಾರದಲ್ಲಿ ಚುನಾವಣಾ ಆಯೋಗ ನಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಲವು ಆಯ್ದ ಮತಕ್ಷೇತ್ರಗಳಲ್ಲಿ ಮಾತ್ರ ಮತಗಳವು ಆಗಿದೆ ಎಂದರು.
ಮಹದಾಯಿ ವಿಚಾರ ನ್ಯಾಯಮಂಡಳಿಯಲ್ಲಿ ಈಗಾಗಲೇ ಇತ್ಯರ್ಥವಾಗಿದ್ದರೂ, ಗೋವಾ ಮುಖ್ಯಮಂತ್ರಿಗಳ ಹೇಳಿಕೆ ಸರಿಯಾದುದಲ್ಲ. ಮಹದಾಯಿ ಯೋಜನೆಗೆ ಪರಿಸರ ಒಪ್ಪಿಗೆ ಸಿಗಬೇಕಾಗಿದೆಯೇ ಹೊರತು, ಉಚ್ಛ ನ್ಯಾಯಾಲಯದಲ್ಲಿಯೂ ಈ ವಿಚಾರ ಇತ್ಯರ್ಥವಾಗಿದೆ ಎಂದು ಹೇಳಿದ್ದಾರೆ.
ಗೋವಾ ಸಿಎಂ ಅವರು ನ್ಯಾಯಾಲಯದ ಮೊರೆ ಹೋಗಲು ನಮ್ಮ ಅಭ್ಯಂತರವಿಲ್ಲ. ನ್ಯಾಯಮಂಡಳಿ ಈಗಾಗಲೇ ನಿರ್ಧಾರ ಮಾಡಿದ್ದು, ಸುಪ್ರೀಂ ಕೋರ್ಟ್ ಸಹ ಎಲ್ಲಾ ವಿವಾದಗಳನ್ನು ಬಗೆಹರಿಸಿದೆ. ಗೋವಾ ಮುಖ್ಯಮಂತ್ರಿಗಳು ಹೇಳಿರುವ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ಏಕೆ ತರಬೇಕು? ಗೋವಾ ಮುಖ್ಯಮಂತ್ರಿಗಳಿಗೆ ನ್ಯಾಯಾಲಯದ ಮೊರೆ ಹೋಗಲು ಯಾವ ಹಕ್ಕೂ (ಲೋಕಸ್ ಸ್ಯಾಂಡಿ) ಇಲ್ಲ.
ಅರಣ್ಯ ಹಾಗೂ ಪರಿಸರ ಇಲಾಖೆಯು ಕೇಂದ್ರ ಸರ್ಕಾರದಡಿಯಲ್ಲಿದ್ದು, ಕೇಂದ್ರ ಸರ್ಕಾರವು ಈ ಬಗ್ಗೆ ತೀರುವಳಿ ನೀಡಬೇಕಿದೆ ಎಂದರು.
ನಿಗಮ – ಮಂಡಳಿಗಳಿಗೆ ನೇಮಕ ಸಂಬಂಧ ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯವನ್ನು ನೀಡಿದ್ದೇವೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
ವಿಧಾನ ಪರಿಷತ್ತಿಗೆ ನಾಮನಿರ್ದೇಶನ ವಿಧಾನ ಮಂಡಲದ ಅಧಿವೇಶನಕ್ಕೆ ಮುನ್ನವೇ ಆಗಬಹುದು ಎಂದು ಹೇಳಿದರು.
ಭಾರತ ಸರ್ಕಾರವು ಯೂರಿಯಾ ಮತ್ತಿತರ ರಸಗೊಬ್ಬರಗಳನ್ನು ಎಲ್ಲಾ ರಾಜ್ಯಗಳಿಗೆ ಸರಬರಾಜು ಮಾಡಬೇಕು. ಈ ವರ್ಷ ಭಾರತ ಸರ್ಕಾರವು ಸರಬರಾಜು ಮಾಡಿರುವ ರಸಗೊಬ್ಬರವು ಸಾಕಾಗುತ್ತಿಲ್ಲ. ಏಕೆಂದರೆ ರಾಜ್ಯದಲ್ಲಿ ಮುಂಗಾರು ಅವಧಿಗೂ ಮುನ್ನವೇ ಪ್ರಾರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆ ಈ ವರ್ಷ ಹೆಚ್ಚಾಗಿದೆ. ಜಲಾನಯನ ಪ್ರದೇಶಕ್ಕೆ ನೀರನ್ನು ಈಗಾಗಲೇ ಹಾಯಿಸಲಾಗಿದೆ. ಹಾಗಾಗಿ ರೈತರು ಹೆಚ್ಚು ರಸಗೊಬ್ಬರವನ್ನು ಬಳಸುತ್ತಿದ್ದಾರೆ. ಹಾಗೆಂದು ನಮ್ಮ ಬಳಿ ರಸಗೊಬ್ಬರವಿಲ್ಲ ಎಂದೇನಲ್ಲ. ಆದರೆ ರಾಜ್ಯಕ್ಕೆ ಹೆಚ್ಚಿನ ರಸಗೊಬ್ಬರದ ಅಗತ್ಯವಿದೆ. ಸರ್ಕಾರದ ಬಳಿ ರಸಗೊಬ್ಬರವಿಲ್ಲ ಎಂಬ ತಪ್ಪು ಕಲ್ಪನೆ ರೈತರಲ್ಲಿ ಮೂಡಿದ್ದು, ಚಳವಳಿ ಪ್ರಾರಂಭಿಸಿದ್ದಾರೆ. ಯೂರಿಯಾ ಮತ್ತಿತರ ರಾಸಾಯನಿಕ ರಸಗೊಬ್ಬರ ಲಭ್ಯವಿದ್ದು, ಹೆಚ್ಚಿನ ಗೊಬ್ಬರದ ಅವಶ್ಯಕತೆ ಇದೆ ಎಂದು ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ಆರ್.ಸಿ.ಬಿ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತದ ಪ್ರಕರಣದ ತನಿಖೆ ನಡೆಸಿರುವ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಅವರ ವರದಿಯನ್ನು ಸರ್ಕಾರ ಅಂಗೀಕರಿಸಿದೆ. ಕೆ.ಎಸ್.ಸಿ.ಎ ಹಾಗೂ ಡಿಎನ್ಎ, ಆರ್.ಸಿ.ಬಿ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗಿದೆ. ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರು, ಎಸ್. ಪಿ ಹಾಗೂ ಎಸಿಪಿ ಹಾಗು ಪೊಲೀಸ್ ಇನ್ಸ್ ಪೆಕ್ಟರ್ ಸೇರಿದಂತೆ ಹಲವರನ್ನು ಅಮಾನತು ಮಾಡಲಾಗಿದೆ. ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ನ್ಯಾ.ಮೈಕಲ್ ಕುನ್ಹಾ ಅವರ ವರದಿಯನುಸಾರ ಸರ್ಕಾರವು ಶಿಸ್ತಿನ ಕ್ರಮವನ್ನು ಜರುಗಿಸಿದೆ ಎಂದರು.