ವ್ಯಕ್ತಿಯೋರ್ವ ಕುಡಿದ ನಶೆಯಲ್ಲಿ ಸಿಗರೇಟ್ ಸೇದಲು ಬೆಂಕಿ ಹಚ್ಚಿದ್ದಾನೆ. ಸಿಗರೇಟ್ ಕಿಡಿ ಪಕ್ಕದಲ್ಲೇ ಇದ್ದ ಬಟ್ಟೆಗಳ ಮೇಲೆ ಬಿದ್ದಿದ್ದು, ಸಿಗರೇಟ್ ಕಿಡಿಗೆ ಮನೆ ಹಾಗೂ ಮನೆಯಲ್ಲಿ ಕುಡಿತದ ಮತ್ತಿನಲ್ಲಿ ಮಲಗಿದ್ದ ವ್ಯಕ್ತಿ ಸಂಪೂರ್ಣ ಸುಟ್ಟುಕರಕಲಾಗಿರುವ ಘಟನೆ ದೊಡ್ಡಬಳ್ಳಾಪುರದ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಮಂಗಲ ಕಾಲೋನಿಯಲ್ಲಿ ನಿನ್ನೆ ಸಂಜೆ ಸುಮಾರು 6:30ರಲ್ಲಿ ನಡೆದಿದೆ.
ಉದಯ್ ಕುಮಾರ್(35) ಬೆಂಕಿಯ ಕೆನ್ನಾಲಿಗೆಗೆ ಸುಟ್ಟುಕರಕಲಾದ ವ್ಯಕ್ತಿ.
ಘಟನೆ ವಿವರ
ನಿನ್ನೆ (ಜು.18) ಸಂಜೆ ಸುಮಾರು 6ಕ್ಕೆ ಸರಿಯಾಗಿ ಕಂಠಪೂರ್ತಿ ಕುಡಿದು ತೂಗಾಡಿಕೊಂಡು ಮನೆಗೆ ಬಂದ ಉದಯ್ ಕುಮಾರ್ ಮಲಗಿದ್ದಾನೆ. ಮನೆಯಲ್ಲಿರುವ ಬಟ್ಟೆಗಳನ್ನೆಲ್ಲಾ ಗುಡ್ಡೆಹಾಕಿದ್ದಾನೆ. ಅದರ ಪಕ್ಕದಲ್ಲೇ ಮತ್ತಿನಲ್ಲಿ ಮಲಗಿದ್ದಾನೆ. ಸ್ವಲ್ಪ ಹೊತ್ತಾದನಂತರ ಸಿಗರೇಟ್ ತೆಗೆದು ಬೆಂಕಿ ಹಚ್ಚಿದ್ದಾನೆ. ಸಿಗರೇಟ್ ಕಿಡಿ ಬಟ್ಟೆಗಳ ಗುಡ್ಡೆ ಮೇಲೆ ಬಿದ್ದಿದೆ. ಸುಮಾರು 6:30ರಲ್ಲಿ ಮನೆಯಿಂದ ಹೊಗೆ ಬರಲು ಪ್ರಾರಂಭಿಸಿದೆ. ಮನೆಗೆ ಬೆಂಕಿ ಬಿದ್ದು ಮನೆ ಸೇರಿ ತಾನೂ ಹೊತ್ತಿ ಉರಿಯುತ್ತಿರುವುದು ಈತನ ಗಮನಕ್ಕೆ ಬಂದೇ ಇಲ್ಲ. ಸ್ಥಳೀಯರು ಬಂದು ನೋಡುವಷ್ಟರಲ್ಲಿ ಮನೆ ಪೂರ್ತಿ ಧಗಧಗನೇ ಹೊತ್ತಿ ಉರಿದಿದೆ. ಬೆಂಕಿ ನಂದಿಸಿ, ವ್ಯಕ್ತಿಯನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನಿಸಿದ್ದರಾದರೂ, ಬಟ್ಟೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದ ಪರಿಣಾಮ ಉದಯಕುಮಾರ್ ಗಾಯಗಳೊಂದಿಗೆ ಸಾವನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಒದಗಿಬಂದಿದೆ.
ಸದ್ಯ ಈತನ ತಾಯಿ ಸಂಬಂಧಿಕರ ಮನೆಗೆ ತೆರಳಿದ್ದರಂತೆ. ವಿಷಯ ತಿಳಿದ ದೊಡ್ಡಬೆಳವಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….