
ಸೆರೆ ಮನೆಯಲ್ಲಿದ್ದ ಕೈದಿಯೋರ್ವ ಮೊಬೈಲ್ ಫೋನ್ ನನ್ನೇ ನುಂಗಿ ಹಾಕಿರುವ ಘಟನೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ದೌಲತ್ ಅಲಿಯಾಸ್ ಗುಂಡ (30) ಎಂಬ ಕೈದಿಯ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾದ ಘಟನೆ ಕೇಳಿ ಜನರು ಶಾಕ್ ಆಗಿದ್ದಾರೆ. ಕಲ್ಲು ನುಂಗಿದೆ ಎಂದವನ ಹೊಟ್ಟೆಯಲ್ಲಿ ಮೊಬೈಲ್ ಸಿಕ್ಕಿದೆ.
ಈ ಘಟನೆ ಶಿವಮೊಗ್ಗ ನಗರದ ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ನಡೆದಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಆತನ ಹೊಟ್ಟೆಯಿಂದ ಮೊಬೈಲ್ ಹೊರತೆಗೆಯಲಾಗಿದೆ. ಶಿವಮೊಗ್ಗ ನ್ಯಾಯಾಲಯ ದೌಲತ್ ಅಲಿಯಾಸ್ ಗುಂಡ ಎಂಬಾತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಜೂನ್ 24 ರಂದು ಜೈಲಿನ ಆಸ್ಪತ್ರೆಗೆ ಸೇರಿದ್ದ ದೌಲತ್ ಅಲಿಯಾಸ್ ಗುಂಡ ಜೈಲಿನಲ್ಲಿ ನಾನು ಆಕಸ್ಮಿಕವಾಗಿ ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದ. ಈ ವೇಳೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಜೈಲುವಾರ್ಡ್ ನಲ್ಲಿ ಎಕ್ಸ್ ರೇ ಪರೀಕ್ಷೆ ನಡೆಸಿದ ವೈದ್ಯರು ದೌಲತ್ನ ಹೊಟ್ಟೆಯಲ್ಲಿ ಯಾವುದೋ ವಸ್ತು ಇರುವುದನ್ನ ಪತ್ತೆ ಹಚ್ಚಿದ್ದರು. ನಂತರ ಶಸ್ತ್ರಚಿಕಿತ್ಸೆ ನಡೆಸಿದಾಗ ಈ ಕೈದಿಯ ಹೊಟ್ಟೆಯಲ್ಲಿ ಒಂದು ಇಂಚು ಅಗಲ ಮತ್ತು ಮೂರು ಇಂಚು ಉದ್ದದ ಮೊಬೈಲ್ ಫೋನ್ ಇರುವುದು ದೃಢಪಟ್ಟಿದೆ.
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್.ಪಿ ಅವರು ತನಿಖೆ ಆರಂಭಿಸಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಷೇಧಿತ ವಸ್ತು ಜೈಲಿನೊಳಗೆ ಹೇಗೆ ಪ್ರವೇಶಿಸಿತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.