ಎತ್ತಿನಹೊಳೆ ಲಕ್ಕೇನಹಳ್ಳಿ ಜಲಾಶಯ: ಜಮೀನುಗಳ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರ ತರಾಟೆ

ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯಲ್ಲಿ ಎತ್ತಿನಹೊಳೆ ಉದ್ದೇಶಿತ ಜಲಾಶಯ ನಿರ್ಮಾಣದಲ್ಲಿನ ಜಮೀನುಗಳ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅಧಿಕಾರಿಗಳನ್ನು ಸ್ಥಳೀಯ ಗ್ರಾಮಸ್ಥರು ತರಾಟೆ ತೆಗೆದುಕೊಂಡು ಹಿಂದಕ್ಕೆ ಕಳುಹಿಸಿರುವ ಘಟನೆ ನಡೆದಿದೆ.

ಸಾಸಲು ಹೋಬಳಿಯ ಲಕ್ಕೇನಹಳ್ಳಿಯಲ್ಲಿ ಎತ್ತಿನಹೊಳೆಯಿಂದ ಬರುವ ನೀರು ಸಂಗ್ರಹಣೆ ಮಾಡಲು ಜಲಾಶಯ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಇದರಿಂದ ಲಕ್ಕೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಐದು ಗ್ರಾಮಗಳು ಮುಳುಗಡೆಯಾಗಲಿವೆ. ಈ ಗ್ರಾಮಗಳ ರೈತರು ಈಗಾಗಲೇ ಹೋರಾಟ ಪ್ರಾರಂಭಿಸಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಜಲಾಶಯ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.

ಮಂಗಳವಾರ ಸ್ಥಳೀಯ ರೈತರಿಗೆ ಮಾಹಿತಿ ನೀಡದೆ ಸರ್ವೇ ಕೆಲಸ ನಡೆಸುವ ಉದ್ದೇಶದಿಂದ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅಧಿಕಾರಿಗಳನ್ನು ನರಸಾಪುರ, ವಡೇರಹಳ್ಳಿ, ಬೆಣಚಿಹಟ್ಟಿ ಗ್ರಾಮಗಳ ರೈತರು ತಡೆದು ಹಿಂದಕ್ಕೆ ಕಳುಹಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ನರಸಾಪುರ ಗ್ರಾಮದ ರೈತ ಕೆಂಪರಾಜ್, ನಮ್ಮ ಸ್ವಂತ ಜಮೀನುಗಳಿಗೆ ಯಾವುದೇ ಸೂಚನೆ ನೀಡದೆ ಅಥವಾ ಅಧಿಕೃತವಾಗಿ ನೋಟಿಸ್ ನೀಡದೆ ಯಾರೇ ಪ್ರವೇಶ ಮಾಡಿದರು ಸಹ ಕಾನೂನು ಕ್ರಮ ಕೈಗೊಳ್ಳುವ ಮೂಲಕ ದೂರು ದಾಖಲಿಸಲಾಗುವುದು ಎಂದು ಸ್ಥಳ ಪರಿಶೀಲನೆ ನೆಪದಲ್ಲಿ ಬಂದಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ‘ನಮ್ಮ ಊರು ನಮ್ಮ ಹೆಮ್ಮೆ’ ಯಾವುದೇ ಕಾರಣಕ್ಕು ನಮ್ಮ ಹಿರಿಯರು ಹುಟ್ಟಿ ಬೆಳೆದಿರುವ ಊರನ್ನು ಜಲಾಶಯದಲ್ಲಿ ಮುಳುಗಡೆಯಾಗಲು ಬಿಡುದಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!