ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗ ಇತ್ತೀಚಿಗೆ ಬಿಜೆಪಿಯ ಅಂಗಸಂಸ್ಥೆಯಂತೆ ವರ್ತಿಸುತ್ತಿದೆ. ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಆಯೋಗ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಆರಂಭಿಸಿದೆ. ಇದು ಬಿಹಾರದಲ್ಲಿ ದೊಡ್ಡ ಸಂಖ್ಯೆಯ ಮತದಾರರನ್ನು ಅವರ ಮತದಾನ ಹಕ್ಕಿನಿಂದ ಕಸಿಯುವ ಹುನ್ನಾರ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಚುನಾವಣಾ ಆಯೋಗದ ಈ ನಿರ್ಧಾರ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಮಹಾರಾಷ್ಟ್ರ ಚುನಾವಣೆಯಲ್ಲೂ ಆಯೋಗ ಇದೇ ರೀತಿಯಲ್ಲಿ ಅನುಮಾನಾಸ್ಪದ ನಿರ್ಧಾರ ಕೈಗೊಂಡಿತ್ತು. ಕೆಲವೇ ತಿಂಗಳುಗಳ ಅಂತರದಲ್ಲಿ ನಡೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯ ನಡುವೆ 41 ಲಕ್ಷ ಮತದಾರರು ಇದ್ದಕ್ಕಿದ್ದಂತೆ ಸೇರ್ಪಡೆಯಾಗಿದ್ದರು ಎಂದರು.
ಮಹಾರಾಷ್ಟ್ರದಲ್ಲಿ ಮತದಾರರ ಸಂಖ್ಯೆಯನ್ನು ಭಾರಿ ಸಂಖ್ಯೆಯಲ್ಲಿ ಏರಿಸಿದ್ದ ಚು.ಆಯೋಗ, ಈಗ ಬಿಹಾರದಲ್ಲಿ ಪರಿಷ್ಕರಣೆಯ ನೆಪದಲ್ಲಿ ದೊಡ್ಡ ಸಂಖ್ಯೆಯ ಮತದಾರರ ಹಕ್ಕು ಕಸಿಯಲು ಹೊರಟಿದೆ. ಆಯೋಗದ ಇಂತಹ ಎಡವಟ್ಟು ನಿರ್ಧಾರಗಳು ಯಾರಿಗೆ ಅನುಕೂಲ ಮಾಡಲು ಎಂದು ಬಿಡಿಸಿ ಹೇಳಬೇಕಿಲ್ಲ ಎಂದು ಹೇಳಿದ್ದಾರೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕಿರುವುದು ಆಯೋಗದ ಜವಾಬ್ಧಾರಿ. ಆದರೆ ಆಯೋಗವೇ ಒಂದು ಪಕ್ಷದ ಅಂಗಸಂಸ್ಥೆಯಂತೆ ಅನ್ಯಾಯದ ಹಾದಿ ತುಳಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ. ಇನ್ನಾದರೂ ಚು.ಆಯೋಗ ವಿಶ್ವಾಸಾರ್ಹತೆ ಕಾಪಾಡಿಕೊಳ್ಳಲಿ ಎಂದು ಮನವಿ ಮಾಡಿದ್ದಾರೆ.