ವಯೋವೃದ್ಧರು, ಬಡಜನರು ಸೇರಿದಂತೆ ಜನಸಾಮಾನ್ಯರ ಕಣ್ಣಿನ ಸುರಕ್ಷತೆಯ ಕಾಳಜಿ ವಹಿಸುವ ಸಲುವಾಗಿ ರಾಜ್ಯ ಸರ್ಕಾರವು ರಾಜ್ಯದ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆಶಾಕಿರಣ ಯೋಜನೆಯನ್ನು ಜಾರಿ ಮಾಡಲಾಗಿದೆ. ಇದಕ್ಕೆ ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಪ್ರಶಂಸಿಸಿದೆ.
ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ದೃಷ್ಟಿ ಪರೀಕ್ಷೆ ಮಾಡುವುದು, ದೃಷ್ಟಿದೋಷ ಹೊಂದಿದವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ಮಾಡುವುದು ಸೇರಿದಂತೆ ಸಾರ್ವಜನಿಕರ ಕಣ್ಣಿನ ಆರೈಕೆ ಮಾಡುವ ಉದ್ದೇಶದ ಈ ಯೋಜನೆಯು ಸಮಾಜದಲ್ಲಿ ಧನಾತ್ಮಕ ಬದಲಾವಣೆಗೆ ಕಾರಣವಾಗಿದೆ.
ಈವರೆಗೆ ಒಟ್ಟು 1.40 ಕೋಟಿ ಜನರನ್ನು ನೇತ್ರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 24.50 ಲಕ್ಷ ಜನರಲ್ಲಿ ದೃಷ್ಟಿದೋಷ, ಇನ್ನಿತರೆ ನೇತ್ರದ ತೊಂದರೆಗಳನ್ನು ಪತ್ತೆ ಮಾಡಿ ಉಚಿತ ಚಿಕಿತ್ಸೆ ಒದಗಿಸಲಾಗಿದೆ.
4.30 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣೆ ಮತ್ತು 1.05 ಲಕ್ಷ ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಇಂದಿನಿಂದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 393 ಆಶಾ ದೃಷ್ಟಿಕೇಂದ್ರಗಳಿಗೆ ಚಾಲನೆ ನೀಡಲಾಗಿದ್ದು, ಇವುಗಳ ಮೂಲಕವೂ ಸೇವೆಯನ್ನು ಒದಗಿಸಲಾಗುತ್ತದೆ.
ಈ ಹಿನ್ನೆಲೆ ಇಂದು ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲೂ ಸಹ ಆಶಾ ದೃಷ್ಟಿಕೇಂದ್ರಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್, ನೇತ್ರ ತಜ್ಞ ಡಾ.ಅರುಣ್ ಕುಮಾರ್, ನೇತ್ರಾಧಿಕಾರಿ ಶಿವಪ್ರಸಾದ್, ವೈದ್ಯರು, ಸಿಬ್ಬಂದಿ ಸೇರಿದಂತೆ ಇತರರು ಇದ್ದರು.