ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಸಮೀಪದಲ್ಲಿನ ತೋಟದ ಮನೆ ಬಳಿ ಇದ್ದ ಮೂರು ನಾಯಿಗಳು ಚಿರತೆಗೆ ಬಲಿಯಾಗಿವೆ.
ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳು ಸ್ಥಳದಲ್ಲಿ ಕಂಡುಬಂದಿವೆ. ಚಿರತೆಯು ಒಂದು ವಾರ ಬಿಟ್ಟು ಒಂದು ವಾರ ರಾತ್ರೋರಾತ್ರಿ ತೋಟದ ಮನೆ ಬಳಿ ಬಂದು ಒಂದೊಂದೇ ನಾಯಿಗಳನ್ನು ಎಳೆದೊಯ್ದು ತಿಂದು ತೇಗಿದೆ.
ಇಂದು ರಾತ್ರಿಯೂ ಸಹ ಬಂದು ಮನೆ ಬಳಿ ಓಡಾಡಿಕೊಂಡು ಇದ್ದ ನಾಯಿಯನ್ನು ಬೇಟೆಯಾಡಿದೆ. ಮೊದಲ ಬಾರಿ ನಾಯಿಯನ್ನು ಬೇಟೆಯಾಡಿರುವ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿತ್ತು. ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಭಾಗದಲ್ಲಿ ಚಿರತೆ ಇರುವುದನ್ನು ಖಚಿತಪಡಿಸಿಕೊಂಡು ಹೋದರು. ಇದಾದ ಬಳಿಕ ಚಿರತೆ ಮತ್ತೆ ಬಂದು ಇನ್ನೊಂದು ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ. ಈ ಕುರಿತು ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಅವರು ಚಿರತೆ ಸೆರೆ ಹಿಡಿಯಲು ಬೋನ್ ಇರಿಸಬೇಕು, ಅದನ್ನು ಟ್ರ್ಯಾಕ್ಟರ್ ಮೂಲಕ ತರಬೇಕು ಅದರ ಖರ್ಚು ವೆಚ್ಚ ನೀವೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದರು.
ಅರಣ್ಯ ಇಲಾಖಾಧಿಕಾರಿಗಳ ನಿರ್ಲಕ್ಷ್ಯ, ಬೇಜವಬ್ದಾರಿತನಕ್ಕೆ ಮೂರು ನಾಯಿಗಳು ಬಲಿಯಾಗಿವೆ. ಚಿರತೆ ಕಾಟದಿಂದ ರೈತರು ತಮ್ಮ ತೋಟ, ಹೊಲಗಳ ಬಳಿ ಬರಲು ಭಯಭೀತರಾಗಿದ್ದಾರೆ.
ಒಂದು ವೇಳೆ ಚಿರತೆ ಸೆರೆ ಹಿಡಿಯದಿದ್ದರೆ, ಇಲ್ಲಿ ಓಡಾಡುವ ರೈತರ ಪ್ರಾಣಕ್ಕೆ ಕುತ್ತು ಬರುವುದಂತು ಖಚಿತ. ಈ ದುರ್ಘಟನೆ ಸಂಬವಿಸುವ ಮುನ್ನ ಎಚ್ಚೆತ್ತು ಸೆರೆ ಹಿಡಿಯಬೇಕಾಗಿದೆ ಎಂದು ರೈತರು, ಸಾರ್ವಜನಿಕರು ಮನವಿ ಮಾಡಿದ್ದಾರೆ.