ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದೇನೆ- ಸಿಎಂ ಸಿದ್ದರಾಮಯ್ಯ

ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದೇನೆ. ಈ ಬಗ್ಗೆ ಅನುಮಾನ ಬರುವಂತದ್ದು ಏನಿದೆ? ಬಿಜೆಪಿ (BJP) ನಮ್ಮ ಹೈಕಮಾಂಡ್ ಅಲ್ಲ, ಅವರು ಹೇಳಿದಂಗೆಲ್ಲ ನಮ್ಮಲ್ಲಿ ನಡೆಯಲ್ಲ ಎಂದು ಸಿಎಡಿ ಸಿದ್ದರಾಮಯ್ಯ ಹೇಳಿದರು.

ಸರ್ಕಾರದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಬಿಜೆಪಿ ಹಗಲುಗನಸು ಕಾಣುತ್ತಿದೆ. ಬಿಜೆಪಿಯವರು ಸುಳ್ಳನ್ನು ಮಾತ್ರ ನಂಬುತ್ತಾರೆ, ಸತ್ಯವನ್ನಲ್ಲ. ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿರುವ ಬಿಜೆಪಿಯವರಿಗೆ ಸತ್ಯ ಹೇಳಿ ಗೊತ್ತೇ ಇಲ್ಲ. ಅವರು ನಂಬುತ್ತಾರೋ, ಬಿಡುತ್ತಾರೆ ನಾವೆಲ್ಲಾ ಒಟ್ಟಾಗಿದ್ದೇವೆ. ನಮ್ಮ ಸರ್ಕಾರ ಬಂಡೆಯಂತೆ ಐದು ವರ್ಷ ಆಡಳಿತ ನಡೆಸಲಿದೆ ಎಂದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಏನು ಸಾಕ್ಷಿಗುಡ್ಡೆಯನ್ನು ಬಿಟ್ಟುಹೋಗಿದ್ದಾರೆ? ಅವರು ನೀರಾವರಿ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಏನು ಮಾಡಿದ್ದಾರೆ? ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿತ್ತು. ಎಚ್ ಡಿ ಕುಮಾರಸ್ವಾಮಿಯವರು ಒಂದು ವರ್ಷ ಎರಡು ತಿಂಗಳು ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರದಲ್ಲಿದ್ದರು. ಏನು ಮಾಡಿದ್ದಾರೆ? ಏನೂ ಮಾಡದೇ ಸುಳ್ಳು ಹೇಳಿಕೊಂಡು ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

2 ವರ್ಷದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಳೆಯಿದ್ದರೂ ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚು ಜನ ಸೇರಿದ್ದರು. ಜನರು ಸರ್ಕಾರದ ಪರವಾಗಿ ಸುಮ್ಮನೆ ಬರುತ್ತಾರೆಯೇ? ಎಂದು ಪ್ರಶ್ನೆ ಮಾಡಿದರು.

ಮನೆ ಮನೆ ಜಾತಿ ಸಮೀಕ್ಷೆಯಲ್ಲಿ ತೊಂದರೆಗಳಾಗಿದ್ದರೆ ಆನ್ ಲೈನ್ ನಲ್ಲಿ ದಾಖಲು ಮಾಡಲು ತೊಂದರೆಯಿಲ್ಲ. ಯಾವುದಾದರೂ ಒಂದು ದಾರಿಯಲ್ಲಿ ಜಾತಿ ಹೇಳಿಕೊಳ್ಳಬೇಕು. ಸಮೀಕ್ಷೆ ಮಾಡುವವರು ಮನೆಗೆ ಬಂದಾಗ ಅಥವಾ ಶಿಬಿರದಲ್ಲಿ ಅಥವಾ ಆನ್‌ಲೈನ್ ಹೀಗೆ ಯಾವುದಾದರೂ ಒಂದು ವಿಧಾನದಲ್ಲಿ ಪರಿಶಿಷ್ಟ ಜಾತಿಯವರು ತಮ್ಮ ಜಾತಿಯ ಬಗ್ಗೆ ಮಾಹಿತಿ ನೀಡಬೇಕು. ಸಮೀಕ್ಷೆ ಮಾಡುವವರು ಮನೆ ಮನೆಗೆ ತೆರಳುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಕೆಲವರು ಜಾತಿ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳಲು ಕೀಳರಿಮೆ ಇದ್ದರೆ ಅಂಥವರು ಆನ್ ಲೈನ್ ನಲ್ಲಿ ಜಾತಿಯ ಹೆಸರನ್ನು ದಾಖಲಿಸಬಹುದು ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಚಿವರಾಗುವ ಅಧಿಕಾರವಿದೆ. ಸಚಿವ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. 142 ಜನ ನಮ್ಮ ಪಕ್ಷದವರಿದ್ದಾರೆ. 34 ಜನರನ್ನು ಮಾತ್ರ ಸಚಿವರನ್ನಾಗಿಸಬಹುದು. ಎಲ್ಲರನ್ನು ಮಾಡಲಾಗುವುದಿಲ್ಲ. ಶೇ.15% ಜನರನ್ನು ಮಾತ್ರ ಮಾಡಬಹುದು ಎಂದರು.

Leave a Reply

Your email address will not be published. Required fields are marked *