ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳನ್ನ ಕೊಂದ ಆರೋಪಿಗಳು ಕೊನೆಗೂ ಅಂದರ್ ಆಗಿದ್ದಾರೆ. ಹುಲಿ ಹತ್ಯೆಯ ಅಸಲಿತ್ತನ್ನ ಖಾಕಿ ಪಡೆ ಬಾಯಿ ಬಿಡಿಸಿದ್ದಾರೆ. ವ್ಯಾಘ್ರಗಳನ್ನ ಕೊಂದವರು ಸ್ಪೋಟಕ ಸತ್ಯವನ್ನು ಬಾಯಿ ಬಿಟ್ಟಿದ್ದಾರೆ. ಬಂಧಿತರಾದ ಮಾದರಾಜು, ನಾಗರಾಜ್ ಮತ್ತು ಕೋನಪ್ಪನನ್ನು ಮೂರು ದಿನ ಅರಣ್ಯಾಧಿಕಾರಿಗಳ ಕಸ್ಟಡಿಗೆ ನೀಡಿ ನ್ಯಾಯಾಧೀಶೆ ಎಂ.ಕಾವ್ಯಶ್ರೀ ಶನಿವಾರ ಆದೇಶ ಹೊರಡಿಸಿದ್ದಾರೆ.
ಜೂನ್ 23ರಂದು ಕೊಳ್ಳೇಗಾಲದ ಮೀಣ್ಯ ಅರಣ್ಯದಲ್ಲಿ, ಈ ಮಾದುರಾಜುವಿನ ಹಸುವನ್ನ ಹುಲಿ ಬೇಟೆ ಆಡಿತ್ತು. ತಾನು ತುಂಬ ಪ್ರೀತಿಸುತ್ತಿದ್ದ ಹಸುವನ್ನ, ಹುಲಿ ಕೊಂದಿದ್ದನ್ನ ನೋಡಿ ಮಾದುರಾಜು ಮನನೊಂದಿದ್ದ. ಹುಲಿಯ ಮೇಲೆ ಕೋಪಗೊಂಡಿದ್ದ. ಹಸುವನ್ನ ಬೇಟೆಯಾಡಿದ್ದ ಹುಲಿ ಮತ್ತೆ, ಹಸು ಮಾಂಸ ತಿನ್ನೋದಕ್ಕೆ ಬರುತ್ತೆ ಅಂತ ತಿಳಿದಿದ್ದ ಮಾದುರಾಜು, ಹಸುವಿನ ಶವಕ್ಕೆ ನಾಗರಾಜ್, ಕೋನಪ್ಪನ ಜತೆ ಸೇರಿ ಕ್ರಿಮಿನಾಶಕ ವಿಷ ಬೆರೆಸಿದ್ದ. ಹೀಗಾಗಿ, ವಿಷವಿಕ್ಕಿದ್ದ ಹಸುವಿನ ದೇಹವನ್ನ ತಿಂದಿದ್ರಿಂದಲೇ ಹುಲಿ ಮತ್ತು 4 ಮರಿಗಳು ಪ್ರಾಣಬಿಟ್ಟಿರುವುದು ಈಗಾಗಲೇ ಬಯಲಾಗಿದೆ.