ಜಗದ್ವಿಖ್ಯಾತ ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದ್ದು, ಈ ಭವ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಲಕ್ಷಾಂತರ ಭಕ್ತರು ಒಡಿಶಾದ ಪುರಿಯತ್ತ ಆಗಮಿಸುತ್ತಿದ್ದಾರೆ.
ವಿಶ್ವದಲ್ಲಿಯೇ ಪ್ರಸಿದ್ಧವಾದ ಪುರಿ ಜಗನ್ನಾಥ ರಥಯಾತ್ರೆ ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯಾ ದಿನ ಆರಂಭವಾಗಿ ದಶಮಿಯಂದು ಪೂರ್ಣಗೊಳ್ಳುತ್ತದೆ.
ಒಡಿಶಾ ರಾಜ್ಯದ ಕರಾವಳಿ ನಗರವಾದ ಪುರಿಯಲ್ಲಿ 12ನೇ ಶತಮಾನದಲ್ಲಿ ಈ ಜಗನ್ನಾಥ ದೇವಾಲಯವನ್ನು ನಿರ್ಮಿಸಲಾಯ್ತು. ವಿಷ್ಣುವಿನ ಅವತಾರವಾದ ಜಗನ್ನಾಥ, ಆತನ ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರಾ ಮೂವರು ಮೂಲ ದೇವರುಗಳಾಗಿ ಇಲ್ಲಿ ನೆಲೆಸಿದ್ದಾರೆ. ಅವರನ್ನು ವಿಶೇಷವಾಗಿ ಪೂಜಿಸುವ ಉದ್ದೇಶದಿಂದ ಇಲ್ಲಿ ಪ್ರತಿ ವರ್ಷ ಭವ್ಯ ರಥೋತ್ಸವವನ್ನು ಆಚರಿಸಲಾಗುತ್ತದೆ. ಈ ದೇವಾಲಯದಲ್ಲಿ ನಡೆಯುವ ಜಗನ್ನಾಥನ 12 ಯಾತ್ರೆಗಳಲ್ಲಿ ಈ ರಥಯಾತ್ರೆ ಅತ್ಯಂತ ಪವಿತ್ರವಾದದ್ದು ಎಂದು ಪರಿಗಣಿಸಲಾಗಿದೆ. ಇದನ್ನು ನೋಡಲು ದೇಶದ ವಿವಿಧ ಭಾಗಗಳಿಂದ ಭಕ್ತರು ಪುರಿಗೆ ಬಂದು ಸೇರುತ್ತಾರೆ.
ಈ ದಿವ್ಯಯಾತ್ರೆಯಲ್ಲಿ ಜಗನ್ನಾಥ ದೇವರು, ಸಹೋದರ ಬಲರಾಮ, ಮತ್ತು ಸಹೋದರಿ ಸುಭದ್ರಾ ಇರಲಿದ್ದಾರೆ. ಬೃಹತ್ ರಥಗಳಲ್ಲಿ ಜಗನ್ನಾಥ ದೇವಾಲಯದಿಂದ ಗುಂಡಿಚಾ ದೇವಾಲಯದವರೆಗೆ ಪ್ರಯಾಣ ಬೆಳಸಲಾಗುತ್ತದೆ.
ರಥಗಳ ವಿಶೇಷತೆಗಳು:
ದೇವರು: ಜಗನ್ನಾಥ ರಥದ ಹೆಸರು: ನಂದಿಘೋಷ ಚಕ್ರಗಳು: 18 , ಎತ್ತರ: 46 ಅಡಿ
ದೇವರು: ಬಲರಾಮ ರಥದ ಹೆಸರು: ತಾಳಧ್ವಜ, ಚಕ್ರಗಳು: 16, ಎತ್ತರ: 45 ಅಡಿ
ದೇವರು: ಸುಭದ್ರಾ ರಥದ ಹೆಸರು: ಪದ್ಮಧ್ವಜ, ಚಕ್ರಗಳು: 14, ಎತ್ತರ: 42 ಅಡಿ
ಪುರಿ ಜಗನ್ನಾಥ ದೇಗುಲ – ಗುಂಡಿಚಾ ದೇವಾಲಯದವರೆಗೆ 2.5 ಕಿಮೀ ದೇವರು ಸ್ವತಃ ಭಕ್ತರನ್ನು ಭೇಟಿ ಮಾಡಲು ಹೊರಡುವ ಪವಿತ್ರ ಕ್ಷಣ. ಗುಂಡಿಚಾದಲ್ಲಿ 8 ದಿನಗಳ ವಾಸ. ನಂತರ ಮೂಲ ದೇಗುಲಕ್ಕೆ ಹಿಂತಿರುಗುವನ್ನು “ಬಾಹುಡಾ ಯಾತ್ರೆ” ಎಂದು ಕರೆಯುತ್ತಾರೆ.
ರಥಯಾತ್ರೆಯನ್ನು ಜೀವನ ಯಾನ ಮತ್ತು ಆತ್ಮ ವಿಮೋಚನೆಯನ್ನು ವಿವರಿಸುವ ರೀತಿಯಲ್ಲಿ ಆಚರಿಸಲಾಗುತ್ತದೆ. ಪುರಿ ರಥಯಾತ್ರೆಯಲ್ಲಿ ತನ್ನ ಭಕ್ತರನ್ನು ನೋಡಲು ಜಗನ್ನಾಥನೇ ರಥದಲ್ಲಿ ಬರುತ್ತಾನೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ಈ ರಥಯಾತ್ರೆಯಲ್ಲಿ ಜಗನ್ನಾಥ ತಾನು ಹುಟ್ಟಿದ ಸ್ಥಳವಾದ ಮಥುರಾಗೆ ಮರಳುತ್ತಾನೆ ಎಂದು ನಂಬಲಾಗಿದೆ. ರಥವನ್ನು ಎಳೆಯುವಾಗ ಹಗ್ಗವನ್ನು ಮುಟ್ಟುವ ಭಕ್ತರಿಗೆ ಆಶೀರ್ವಾದ ಮತ್ತು ಪಾಪ ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆಯಿದೆ.
ಎಲ್ಲಾ ವರ್ಗದ ಜನರನ್ನು ಈ ರಥಯಾತ್ರೆ ಒಂದುಗೂಡಿಸುವುದರಿಂದ ಇದನ್ನು ಐಕ್ಯತೆಯ ಆಚರಣೆ ಎಂದು ಕರೆಯಲಾಗುತ್ತದೆ. ಪುರಿ ರಾಜನಿಂದ ಸೇರಾ ಪನ್ಹಾರಾ ಸಮಾರಂಭವನ್ನು ನಡೆಸಲಾಗುತ್ತದೆ. ಈ ಕಾರ್ಯಕ್ರಮ ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದನ್ನು ಸಾಬೀತುಪಡಿಸುತ್ತದೆ.
ಈ ರಥೋತ್ಸವವು ಕೇವಲ ಉತ್ಸವವಲ್ಲ…..ಭಕ್ತಿಯ ದರ್ಶನ, ಸಂಸ್ಕೃತಿಯ ಉತ್ಸವ…!