ರಾಷ್ಟ್ರಪತಿಗಳು ಹಾಗೂ ಕೇಂದ್ರ ವಿತ್ತ ಸಚಿವರ ಭೇಟಿಯ ನಂತರ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಸಿಎಂ ಸಿದ್ದರಾಮಯ್ಯ ಮಾತು…..
ರಾಷ್ಟ್ರಪತಿಗಳಿಂದ ಅನುಮೋದನೆಯಾಗದಿರುವ ಏಳು ಬಿಲ್‌ಗಳ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಬಿಲ್‌ಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದು, ಅವುಗಳನ್ನು ತರಿಸಿ ಅನುಮೋದನೆ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು..
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ವಾರದ ಹಿಂದೆ 16ನೇ ಹಣಕಾಸು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರನ್ನು ಭೇಟಿ ಮಾಡಿದ್ದು, ಎರಡನೇ ಹೆಚ್ಚುವರಿ ಮನವಿಯನ್ನು ಕೊಟ್ಟು, 14ನೇ ಹಣಕಾಸು ಆಯೋಗದಲ್ಲಿ 4.7% ತೆರಿಗೆ ಹಂಚಿಕೆಯಾಗಿತ್ತು. 15ನೇ ಹಣಕಾಸು ಆಯೋಗದಲ್ಲಿ 3.6% ಆಗಿದೆ. ಶೇಕಡಾ 1.1% ಕಡಿಮೆಯಾಗಿದ್ದು, ಇದು ಒಟ್ಟಾರೆ ಅನುದಾನ ಹಂಚಿಕೆಯಲ್ಲಿ ಶೇ. 23% ಗಿಂತಲೂ ಕಡಿಮೆಯಾಗಿದೆ. 5 ವರ್ಷಗಳಲ್ಲಿ ಒಟ್ಟು ₹80,000 ಕೋಟಿ ನಷ್ಟವಾಗಿದೆ ಎಂದರು.
ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ₹63 ಸಾವಿರ ಕೋಟಿ ಅನ್ಯಾಯವಾಗಿದೆ. ರಾಜ್ಯಕ್ಕೆ ವಿಶೇಷ ಅನುದಾನ ₹5,495 ಕೋಟಿ ಮೀಸಲಿಡಿಲಾಗಿತ್ತು. ಪೆರಿಫೆರಲ್ ರಿಂಗ್ ರೋಡ್ ಗೆ ₹3,000 ಕೋಟಿ, ಬೆಂಗಳೂರಿನ ಕೆರೆಗಳ ಅಭಿವೃದ್ಧಿಗಾಗಿ ₹3,000 ಕೋಟಿ ಸೇರಿದಂತೆ ಒಟ್ಟು ₹11,495 ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು. ಒಟ್ಟಾರೆಯಾಗಿ ₹80,000 ಕೋಟಿ ನಮಗೆ ಕಡಿಮೆಯಾಗಿದೆ. ಇದು ಬಹಳ ದೊಡ್ಡ ಮೊತ್ತವಾಗಿದೆ ಎಂದು ತಿಳಿಸಿದರು.
ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಜನಸಂಖ್ಯೆ 5% ರಷ್ಟಿದೆ. ಕರ್ನಾಟಕ 8.7% ಜಿಡಿಪಿಗೆ ಕೊಡುಗೆ ನೀಡುತ್ತಿದೆ. 2011-12ರಲ್ಲಿ 7.6% ಇದ್ದದ್ದು, ಈಗ 8.7% ಕೊಡುಗೆ ನೀಡುತ್ತಿದೆ. ದೇಶಕ್ಕೆ ಜಿಎಸ್‌ಟಿ ಕೊಡುಗೆ ನೀಡುವುದರಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಜಿ.ಡಿ.ಪಿ ನಲ್ಲಿ ನಮ್ಮ ರಾಜ್ಯ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಹಾಗಾಗಿ ಯಾವ ರಾಜ್ಯ ಹೆಚ್ಚು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕೋರಲಾಗಿದೆ ಎಂದು ಹೇಳಿದರು.
ತಲಾವಾರು ಆದಾಯವನ್ನು ಪರಿಗಣಿಸುವ ಮಾನದಂಡವನ್ನು ಶೇ.45 ರಿಂದ ಶೇ. 20 ಕ್ಕೆ ಇಳಿಸಬೇಕೆಂದು ಕೋರಲಾಗಿದೆ. ಕೇರಳ, ಆಂಧ್ರ, ತಮಿಳುನಾಡು ರಾಜ್ಯಗಳಿಗೆ ನೀಡಿದಂತೆ ಆದಾಯ ಕೊರತೆ ಅನುದಾನವನ್ನು ಕರ್ನಾಟಕಕ್ಕೂ ನೀಡಬೇಕು. ಇಲ್ಲವೇ ಯಾವುದೇ ರಾಜ್ಯಗಳಿಗೆ ನೀಡಬಾರದು. ರಾಜಸ್ವ ಹೆಚ್ಚಳದಲ್ಲಿ ಖರ್ಚಿಗಿಂತ ಆದಾಯ ಹೆಚ್ಚಿದ್ದು, ವಿತ್ತೀಯ ಕೊರತೆಯಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಿರುತ್ತದೆ. ರಾಜಸ್ವ ಹೆಚ್ಚಳದಲ್ಲಿದ್ದ ಕರ್ನಾಟಕ ಕಳೆದ ವರ್ಷದಿಂದ ವಿತ್ತೀಯ ಕೊರತೆ ಎದುರಿಸುತ್ತಿದ್ದು, ಮುಂದಿನ ವರ್ಷಕ್ಕೆ ಈ ಪರಿಸ್ಥಿತಿ ಸುಧಾರಿಸಲಿದೆ. ನಿರಂತರವಾಗಿ ವಿತ್ತೀಯ ಕೊರತೆಯಲ್ಲಿರುವ ರಾಜ್ಯಗಳಿಗೆ ವಿತ್ತೀಯ ಕೊರತೆ ಅನುದಾನವನ್ಹು ನೀಡಲಾಗುತ್ತದೆ. ಹಣಕಾಸಿನ ಕಾರ್ಯಕ್ಷಮತೆ ತೋರದಿರುವ ರಾಜ್ಯಗಳಿಗೆ ವಿತ್ತೀಯ ಕೊರತೆ ಅನುದಾನವನ್ನು ನೀಡುತ್ತಿರುವ ಕೇಂದ್ರದ ಕ್ರಮ ಸರಿಯಾದುದಲ್ಲ ಎಂದರು.
ಬೆಂಗಳೂರು ಜಾಗತಿಕ ನಗರವಾಗಿದ್ದು, ನಗರದ ಬಂಡವಾಳ ಕಾರ್ಯಗಳಿಗೆ ₹1.15 ಲಕ್ಷ ಕೋಟಿ ಬೇಕಾಗಿದ್ದು, ಇದಕ್ಕಾಗಿ ವಿಶೇಷ ಅನುದಾನ ನೀಡುವಂತೆ ಕೋರಲಾಗಿದೆ. ಮಲೆನಾಡು ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಪ್ರವಾಹದಿಂದಾಗುವ ಅನಾಹುತಗಳನ್ನು ನಿಭಾಯಿಸಲು ವಿಶೇಷ ಅನುದಾನ, ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಅನುದಾನ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದರು.
ರಾಜ್ಯಕ್ಕೆ ಅಗತ್ಯವಿರುವ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಲಾಗಿದೆಯೇ ಹೊರತು ಆರೋಪ ಮಾಡಿಲ್ಲ. ರಾಜ್ಯಕ್ಕೆ ಅನ್ಯಾಯವಾಗಿದ್ದರೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ಕೇಂದ್ರ ವಿತ್ತಸಚಿವರು ನೀಡಿದ್ದಾರೆ ಎಂದು ಹೇಳಿದರು.