ಮಾದಕ ವಸ್ತುಗಳ ಸೇವನೆಯಿಂದ ಮಾನಸಿಕ, ದೈಹಿಕ ಹಾಗೂ ಸಾಮಾಜಿಕವಾಗಿ ವ್ಯಕ್ತಿಯ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಮದ್ಯ, ತಂಬಾಕು, ಬೀಡಿ, ಸಿಗರೇಟ್, ಗುಟ್ಟಾ, ಗಾಂಜಾ, ಅಫೀಮು, ನೋವು ನಿವಾರಕ ಹಾಗೂ ನಿದ್ರಾಜನಕ ಮಾತ್ರೆಗಳು ಸೇರಿದಂತೆ ಇತರೆ ಮಾದಕ ವಸ್ತುಗಳಾಗಿವೆ. ಯುವಕರು ಇಂತಹ ಚಟಗಳಿಂದ ದೂರವಿರಬೇಕು ಎಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ ತಿಳಿಸಿದರು.
ಜೂನ್ 26 ಅಂತಾರಾಷ್ಟ್ರೀಯ ಮಾದಕವಸ್ತು ವ್ಯಸನ & ಅಕ್ರಮ ಕಳ್ಳಸಾಗಣೆಕೆ ವಿರೋಧಿ ದಿನದ ಅಂಗವಾಗಿ ಈ ದಿನ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಹಾಗೂ ಮಹಿಳಾ ಠಾಣಾ ಇನ್ಸ್ ಪೆಕ್ಟರ್ ಡಾ. ನವೀನ್ ಕುಮಾರ್ ಎಂ.ಬಿ ನೇತೃತ್ವದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದ ಅವರು, ಯುವಶಕ್ತಿ ಈ ದೇಶದ ಬಹು ದೊಡ್ಡ ಆಸ್ತಿ. ಆ ಅಸ್ತಿಯನ್ನು ಜೋಪಾನದಿಂದ ಕಾಪಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವಕರು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು ಎಂದರು.
ನಂತರ ಮಹಿಳಾ ಠಾಣಾ ಇನ್ಸ್ ಪೆಕ್ಟರ್ ಡಾ. ನವೀನ್ ಕುಮಾರ್ ಎಂ.ಬಿ ಮಾತನಾಡಿ, ಮಾದಕ ವಸ್ತುಗಳ ವ್ಯಸನ ಯುವಜನತೆ ಮೇಲೆ ಪರಿಣಾಮ ಬೀರುತ್ತಿದೆ. ಸಂತೋಷ, ಗೆಳೆಯರ ಒತ್ತಡ, ನೋವು ನಿವಾರಣೆ ನೆಪ, ಆಧುನಿಕ ಜೀವನ ಶೈಲಿ ಅನುಕರುಣೆ ಮಾಡಲು ವ್ಯಸನಕ್ಕೆ ತುತ್ತಾಗುತ್ತಾರೆ. ಇದರಿಂದ ಹಿಂಸಾತ್ಮಕ ನಡವಳಿಕೆ, ಉದ್ಯೋಗ ಮತ್ತು ಕೌಟುಂಬಿಕ ಸಮಸ್ಯೆಗಳು, ಆತ್ಮಹತ್ಯೆ, ಕಾನೂನು ಬಾಹಿರ ಕೃತ್ಯಗಳು, ದೈಹಿಕ, ಮಾನಸಿಕ ಕಾಯಿಲೆಗಳು, ಲೈಂಗಿಕ ರೋಗಗಳು, ಗರ್ಭಪಾತ, ರಸ್ತೆ ಅಪಘಾತಗಳು ಸಂಭವಿಸುತ್ತವೆ. ಹೀಗಾಗಿ ಯುವಕರು ಇಂಥ ವಸ್ತುಗಳಿಂದ ದೂರವಿರಬೇಕು ಎಂದು ಸೂಚಿಸಿದರು.
ಈ ವೇಳೆ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.